
ಬೆಂಗಳೂರು: ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಹಾಗೂ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಕೆಇಎ ಹೊಸ ಹಾಗೂ ಬಿಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರನ್ನು ಕಡ್ಡಾಯವಾಗಿ ನಿಯೋಜಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಪರಿಶೀಲನೆ, ವೆಬ್‌ಕಾಸ್ಟಿಂಗ್ ಮೂಲಕ ನಿಗಾ, ಜಾಮರ್‌ಗಳ ಕಾರ್ಯನಿರ್ವಹಣೆ ಸೇರಿದಂತೆ ಹಲವು ಹಂತಗಳಲ್ಲಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಅಲ್ಲದೆ, ಪರೀಕ್ಷೆ ಆರಂಭಕ್ಕೂ ಕನಿಷ್ಠ 30 ನಿಮಿಷ ಮೊದಲು ಅಭ್ಯರ್ಥಿಗಳು ಕೇಂದ್ರಕ್ಕೆ ಹಾಜರಾಗುವುದು ಕಡ್ಡಾಯವಾಗಿದ್ದು, ತಡವಾಗಿ ಬರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಕೆಇಎ ಸೂಚಿಸಿದೆ. ಈ ಬಗ್ಗೆ ಸಂಪೂರ್ಣ ವಿವರಣೆ ಈ ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಓದಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.
* ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಮತ್ತಷ್ಟು ಬಿಗಿ ಕ್ರಮಕ್ಕೆ ಕೆಇಎ ನಿರ್ಧಾರ.
* ಇನ್ನು ಮುಂದೆ ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರ ನಿಯೋಜನೆ.
* ಒಬ್ಬರು ಕೊಠಡಿಯ ಹಿಂಭಾಗದಲ್ಲಿ, ಮತ್ತೊಬ್ಬರು ಮುಂಭಾಗದಲ್ಲಿ ನಿಂತು ಅಭ್ಯರ್ಥಿಗಳ ಮೇಲೆ ನಿಗಾ.
* ಕೊಠಡಿಯಲ್ಲಿರುವ ಜಾಮರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿಯೂ ಮೇಲ್ವಿಚಾರಕರಿಗೆ.
* ಪರೀಕ್ಷಾ ಕೇಂದ್ರದ ಹೊರಗೆ ತಪಾಸಣೆ ನಡೆಸಿದ ಬಳಿಕವೂ ಕೊಠಡಿಯೊಳಗೆ ಎರಡನೇ ಹಂತದ ತಪಾಸಣೆ.
* ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ಕೇಂದ್ರದೊಳಗೆ ಹಾಜರಿರಬೇಕು.
* ಕೊನೆಯ ಕ್ಷಣದಲ್ಲಿ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಕೆಇಎ ಸ್ಪಷ್ಟನೆ.
* ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇಡಲು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆ.
* ಇನ್ನು ಮುಂದೆ ಆಯಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಮೇಲ್ವಿಚಾರಕರ ನಿಯೋಜನೆ.
* ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೆಇಎ ಸೂಚನೆ.
* ಶಿಗ್ಗಾವಿ ಪ್ರಕರಣವನ್ನು ಬೆಳಕಿಗೆ ತರಲು ನೆರವಾದವರನ್ನು ಅಭಿನಂದಿಸಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.
* ಮುಂದಿನ ದಿನಗಳಲ್ಲಿ ಪರೀಕ್ಷಾ ಅಕ್ರಮಗಳ ಕುರಿತು ಅನುಮಾನ ಅಥವಾ ದಾಖಲೆಗಳಿದ್ದರೆ ಇ-ಮೇಲ್ ಮೂಲಕ ಕೆಇಎ ಗಮನಕ್ಕೆ ತರುವಂತೆ ಮನವಿ.
* ಒಂದೇ ಹೆಸರಿನ ಹಲವು ಅಭ್ಯರ್ಥಿಗಳು ಇರಬಹುದು
* ಒಬ್ಬರ ಅಂಕಗಳನ್ನು ಮತ್ತೊಬ್ಬರಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಿರುವುದು ಕೆಇಎ ಗಮನಕ್ಕೆ ಬಂದಿದೆ.
* ಶಿವರಾಜ್ ಪಾಟೀಲ ಎಂಬ ಹೆಸರಿನ ಪ್ರತ್ಯೇಕ ಅಭ್ಯರ್ಥಿಗಳನ್ನು ಒಂದೇ ವ್ಯಕ್ತಿ ಎಂಬಂತೆ ವರದಿ ಮಾಡುತ್ತಿರುವುದಕ್ಕೆ ಎಚ್. ಪ್ರಸನ್ನ ಆಕ್ಷೇಪ.
* ಅನುಮಾನ ಅಥವಾ ದಾಖಲೆಗಳಿದ್ದರೆ ಮೊದಲು ಕೆಇಎ ಗಮನಕ್ಕೆ ತಂದು ವಾಸ್ತವಾಂಶ ಪರಿಶೀಲಿಸಬೇಕು.
* ಸುಳ್ಳು ಸುದ್ದಿ ಹರಡುವುದು ಸರಿಯಲ್ಲ ಎಂದು ಕೆಇಎ ಎಚ್ಚರಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ