
ಬೆಂಗಳೂರು (ಸೆ.28): ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಪರೀಕ್ಷಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ 'ತ್ರಿಪಲ್ ಲೇಯರ್ OMR' (Triple-Layer OMR) ಶೀಟ್ ವ್ಯವಸ್ಥೆಯನ್ನು ಜಾರಿಗೆ ತರಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಇತ್ತೀಚೆಗೆ ಕರ್ನಾಟಕ ಪೊಲೀಸ್ ಇಲಾಖೆಯ KSRP ನೇಮಕಾತಿ ಪರೀಕ್ಷೆಯನ್ನು KEA ಯಶಸ್ವಿಯಾಗಿ ನಡೆಸಿದ್ದು, ಈ ಪರೀಕ್ಷೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ 'ಟ್ರಿಪಲ್-ಲೇಯರ್ಡ್ ಓಎಂಆರ್ ಶೀಟ್' ಅನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆದ ಅನೇಕ ಪರೀಕ್ಷಾ ಅಕ್ರಮಗಳಲ್ಲಿ OMR ಶೀಟ್ ಟ್ಯಾಂಪರಿಂಗ್ ಆರೋಪಗಳೇ ಅಧಿಕವಾಗಿ ಕೇಳಿಬಂದಿದ್ದವು. ಅಕ್ರಮ ಎಸಗುವವರು ಪರೀಕ್ಷೆಯಲ್ಲಿ ತಾವು ಬರೆಯುವ OMR ಶೀಟ್‌ನಲ್ಲಿ ಕೆಲವು ವೃತ್ತಗಳನ್ನು ತುಂಬದೇ ಖಾಲಿ ಬಿಟ್ಟು, ನಂತರ ಬೇರೆ ಮಾರ್ಗಗಳ ಮೂಲಕ ಆ ವೃತ್ತಗಳನ್ನು ಭರ್ತಿ ಮಾಡುವ ಅಕ್ರಮಕ್ಕೆ ಮುಂದಾಗುತ್ತಿರುವುದು ಬೆಳಕಿಗೆ ಬಂದಿತ್ತು. ಇಂತಹ ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ KEA ಈ ಕಠಿಣ ನಿಯಮಕ್ಕೆ ಮುಂದಾಗಿದೆ.
ಈವರೆಗೆ KPSC ಹಾಗೂ KEA ಸಂಸ್ಥೆಗಳು ಕೇವಲ 2 ಲೇಯರ್‌ಗಳ (ಎರಡು ಪದರ) OMR ಶೀಟ್ ಅನ್ನು ಮಾತ್ರ ಬಳಕೆ ಮಾಡುತ್ತಿದ್ದವು. ಇಲ್ಲಿ ಮೊದಲ ಪ್ರತಿ ಪರೀಕ್ಷಾ ಸಂಸ್ಥೆಗೆ ಸಲ್ಲಿಕೆಯಾದರೆ, ಮತ್ತೊಂದು ಪ್ರತಿ ಅಭ್ಯರ್ಥಿಗಳ ಬಳಿ ಉಳಿಯುತ್ತಿತ್ತು. ಆದರೆ, ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ OMR ಶೀಟ್‌ನಲ್ಲಿ ಮೂರು ಪದರಗಳು ಇರಲಿವೆ.
ಮೊದಲ ಪ್ರತಿ: ಪರೀಕ್ಷೆ ಮುಗಿದ ಬಳಿಕ ಮುಖ್ಯ ಶೀಟ್ ಅನ್ನು ನೇರವಾಗಿ KEAಗೆ ಸಲ್ಲಿಕೆ ಮಾಡಲಾಗುತ್ತದೆ.
ಎರಡನೇ ಪ್ರತಿ: ಅಭ್ಯರ್ಥಿಗಳು ತಮ್ಮ ಬಳಿ ಇಟ್ಟುಕೊಳ್ಳಬಹುದು.
ಮೂರನೇ ಪ್ರತಿ: ಹೊಸ ವ್ಯವಸ್ಥೆಯಡಿ 3ನೇ ಪ್ರತಿ ಪರೀಕ್ಷೆ ನಡೆಯುವ ಆಯಾ ಜಿಲ್ಲಾಧಿಕಾರಿಗಳ (DC) ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಸಂಗ್ರಹಿಸಲಾಗುತ್ತದೆ.
ಈ ಹೊಸ ವ್ಯವಸ್ಥೆಯಿಂದಾಗಿ ಅಕ್ರಮ ಎಸಗಲು ಯೋಚಿಸುವವರು ಎರಡು ಕಡೆಗಳಲ್ಲೂ ಬದಲಾವಣೆ ಮಾಡಲು ಸಾಧ್ಯವಾಗದಂತೆ ಭದ್ರತೆ ಕಲ್ಪಿಸಲಾಗಿದೆ. ಈ ತ್ರಿ-ಲೇಯರ್ OMR ಶೀಟ್ ಸಂಪೂರ್ಣ ಪಾರದರ್ಶಕ ನೇಮಕಾತಿಗೆ ಅತ್ಯಂತ ಪೂರಕವಾಗಿದೆ.
ಸದ್ಯಕ್ಕೆ ಈ ಹೊಸ ತ್ರಿ-ಲೇಯರ್ OMR ಶೀಟ್ ಪರೀಕ್ಷಾ ವ್ಯವಸ್ಥೆಯನ್ನು KSRP ನೇಮಕಾತಿ ಪರೀಕ್ಷೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಇದು ಯಶಸ್ವಿಯಾಗಿರುವುದರಿಂದ, ಮುಂದಿನ ದಿನಗಳಲ್ಲಿ KEA ನಡೆಸುವ ಎಲ್ಲಾ ಇತರ ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಿಗೂ ಇದನ್ನು ವಿಸ್ತರಿಸಲು ಪ್ರಾಧಿಕಾರ ಗಂಭೀರ ನಿರ್ಧಾರ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ