ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಎಫ್‌ಡಿಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಕಲಬುರಗಿಯಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಅದಕ್ಕೆ ಪೊಲೀಸರೇ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನಿಖೆಗೆ ಆದೇಶಿಸಿದ್ದಾರೆ.
ಬೆಂಗಳೂರು/ ಕಲಬುರಗಿ (ನ.8): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಎಫ್‌ಡಿಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಕಲಬುರಗಿಯಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಅದಕ್ಕೆ ಪೊಲೀಸರೇ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನಿಖೆಗೆ ಆದೇಶಿಸಿದ್ದಾರೆ.
‘ಅಕ್ರಮದ ಪ್ರಮುಖ ಆರೋಪಿಯಾಗಿರುವ ಡಿ.ಆರ್.ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಇದೆ. ಆತನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ತಪ್ಪಿಸಿಕೊಂಡು ಎಷ್ಟು ದಿನ ಹೋಗಲು ಸಾಧ್ಯ? ನಮ್ಮ ಅಧಿಕಾರಿಗಳು ಅವನನ್ನು ಪತ್ತೆಹಚ್ಚುತ್ತಾರೆ. ಈ ಮಧ್ಯೆ, ಆತ ಗೋಡೆ ಹಾರಿ ತಪ್ಪಿಸಿಕೊಂಡು ಹೋಗಲು ಪೊಲೀಸ್ ಅಧಿಕಾರಿಗಳೇ ಸಹಕರಿಸಿದ್ದಾರೆಯೇ ಅಥವಾ ಪೊಲೀಸರ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಪೊಲೀಸರಿಂದ ತಪ್ಪಾಗಿರುವುದು ಸಾಬೀತಾದರೆ ಯಾವುದೇ ಅಧಿಕಾರಿಯಾಗಿರಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನಮಗೆ ದೂರು ಬಂದಿರುವುದರಿಂದ ಪ್ರಕರಣ ದಾಖಲಿಸಿಕೊಂಡು ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಎಲ್ಲ ರೀತಿಯ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದರು.
ಎಫ್‌ಡಿಎ ನೇಮಕಾತಿಗೆ ಸರ್ಕಾರ ಮರು ಪರೀಕ್ಷೆ ನಡೆಸಲಾಗುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನ ಮಾಡುತ್ತದೆ. ನಾವು ಅಕ್ರಮದ ಆಳ ಅಗಲ ತನಿಖೆ ಮಾಡುತ್ತೇವೆ. ನಮ್ಮ ಸರ್ಕಾರದಲ್ಲಿ ಇಂತಹದ್ದಕ್ಕೆ ಅವಕಾಶ ಇಲ್ಲ. ಮತ್ತೆ ಇಂತಹ ಅಕ್ರಮಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಂಧನದಿಂದ ತಪ್ಪಿಸಿಕೊಂಡ ಆರ್.ಡಿ.ಪಾಟೀಲ್:
ನಿಗಮ ಮಂಡಳಿಗಳಲ್ಲಿ ಖಾಲಿ ಇದ್ದ ಎಫ್‌ಡಿಎ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ ಪರೀಕ್ಷೆಯಲ್ಲಿ ಬೆಳಕಿಗೆ ಬಂದ ಬ್ಲೂಟೂತ್ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಲಬುರಗಿ ಪೊಲೀಸರ ಕೈಯಿಂದ ಕೂದಲೆಳೆ ಅಂತರದಲ್ಲಿ ಸೋಮವಾರ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಬಂಧನಕ್ಕೆ ಆಗಮಿಸುತ್ತಿದ್ದಂತೆ ಆತ ತಾನು ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಹಾರಿ ಪರಾರಿಯಾಗುತ್ತಿರುವ ದೃಶ್ಯ ಸಿ.ಸಿ.ಟೀವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅ.28ರಂದು ನಡೆದಿದ್ದ ಪರೀಕ್ಷೆ ವೇಳೆ ಬೆಳಕಿಗೆ ಬಂದಿದ್ದ ಅಕ್ರಮಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ 2 ಹಾಗೂ ಅಫಜಲ್ಪುರದಲ್ಲಿ ಒಂದು ಪ್ರಕರಣ ಆರ್.ಡಿ.ಪಾಟೀಲನ ವಿರುದ್ಧ ದಾಖಲಾಗಿತ್ತು. ಆ ಬಳಿಕ ತಲೆಮರೆಸಿಕೊಂಡಿದ್ದ ಆರ್.ಡಿ.ಪಾಟೀಲ್ ಬಂಧನಕ್ಕೆ ತಂಡ ರಚಿಸಿಕೊಂಡು ಅಂತಾರಾಜ್ಯ ಸುತ್ತಾಡುತ್ತಿರುವ ಕಲಬುರಗಿ ಪೊಲೀಸರಿಗೆ ಈತ ನಗರದಲ್ಲೇ ಇದ್ದಾನೆಂಬ ಮಾಹಿತಿ ಸೋಮವಾರ ದೊರಕಿತ್ತು. ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಪಾಟೀಲನ ಬಂಧನಕ್ಕೆ ತೆರಳುವಷ್ಟರಲ್ಲೇ ಸ್ಥಳದಿಂದ ಪರಾರಿಯಾಗಿದ್ದಾನೆ.
ನಗರದ ವರ್ಧನ ನಗದಲ್ಲಿರುವ ಮಹಾಲಕ್ಷ್ಮೀ ಗ್ರೂಪ್ ನ ಲೆಮನ್ ಟ್ರೀ ಅಪಾರ್ಟ್‌ಮೆಂಟ್‌ನಲ್ಲಿ ಈತ ತಂಗಿದ್ದ. ಎರಡು ದಿನದಿಂದಲೂ (ಭಾನುವಾರ, ಸೋಮವಾರ) ಪಾಟೀಲ್ ಇಲ್ಲೇ ತಂಗಿದ್ದರೂ ಯಾರಿಗೂ ಸಣ್ಣ ಸುಳಿವೂ ಇರಲಿಲ್ಲ. ಪೊಲೀಸರಿಗೆ ತಾನಿರುವ ವಿಳಾಸ ಗೊತ್ತಾಗಿರುವ ಮಾಹಿತಿ ಸಿಗುತ್ತಿದ್ದಂತೆ ಪಾಟೀಲ್ ಅಪಾರ್ಟ್‌ಮೆಂಟ್‌ನ ಹಿಂಬದಿಯ ಗೇಟ್ ಗ್ರಿಲ್ ಹತ್ತಿ ಪರಾರಿಯಾಗಿದ್ದಾನೆ.
ಮನೆ ಬಾಡಿಗೆ ಪಡೆದಿದ್ದ ಆರ್‌ಡಿಪಿ: ಪಾಟೀಲ್ ಈ ಅಪಾರ್ಟ್‌ಮೆಂಟ್‌ನಲ್ಲಿ ಎರಡು ತಿಂಗಳ ಹಿಂದೆಯೇ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಈತ ಒಮ್ಮೆ ಕೋಣೆಯೊಳಗೆ ಹೋದನೆಂದರೆ ಹೊರಗಡೆ ಬರುತ್ತಿರಲಿಲ್ಲ. ತಾವಿರುವ ಅಪಾರ್ಟ್‌ಮೆಂಟ್‌ನಲ್ಲಿ ಪರೀಕ್ಷಾ ಹಗರಣದ ಕಿಂಗ್‌ಪಿನ್ ವಾಸವಿರುವ ವಿಚಾರ ಪೊಲೀಸರು ತಮ್ಮ ಮನೆ ಸುತ್ತಮುತ್ತ ಬಂದು ವಿಚಾರಣೆ ನಡೆಸಿದಾಗಲೇ ಇಲ್ಲಿನ ನಿವಾಸಿಗಳ ಗಮನಕ್ಕೆ ಬಂದಿದೆ.
ಫ್ರಂಟ್ ಗೇಟ್‌ನಲ್ಲಿ ಪೊಲೀಸ್ ತಂಡ:
ಆರ್.ಡಿ. ಪಾಟೀಲ್ ಬಂಧಿಸುವ ಉದ್ದೇಶದಿಂದ ಪೊಲೀಸ್ ತಂಡ ಆತ ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಫ್ರಂಟ್ ಗೇಟ್‌ಗೆ ಬಂದು ನಿಂತು ಇನ್ನೇನು ಆತನ ಫ್ಲಾಟ್‌ನ ಮೇಲೆ ದಾಳಿ ನಡೆಸಬೇಕು ಎನ್ನುವಷ್ಟರಲ್ಲಿ ಆತ ಅಪಾರ್ಟ್‌ಮೆಂಟ್‌ನ ಹಿಂಬದಿ ಗೇಟ್ ಹತ್ತಿ ಪರಾರಿಯಾಗಿದ್ದಾನೆ. ಗೇಟ್ ಗ್ರಿಲ್ ಹತ್ತುವಾಗ ಪಾಟೀಲನ ಶೂ ಕಳಚಿ ಬಿದ್ದಿದ್ದು, ಸದ್ದು ಕೇಳಿ ಕೆಲಸದವರು ಬಂದಾಗ ತನ್ನ ಶೂ ಕೊಡುವಂತೆ ಕೇಳಿದ್ದಾನೆ. ಆದರೆ ಕೆಲಸದವರು ಇವನು ಯಾರೋ ಅಪರಿಚಿತ ಇರಬೇಕೆಂದು ತಿಳಿದು ಶೂ ಕೊಡದೆ ಗದರಿದ್ದಾರೆ. ಇದರಿಂದಾಗಿ ಪಾಟೀಲ್ ಬರಿಗಾಲಲ್ಲೇ ಗೇಟ್ ಹತ್ತಿ ಹೊರ ಜಿಗಿದು ಪರಾರಿಯಾಗಿದ್ದಾನೆ.
ಸುಳ್ಳು ಹೇಳಿ ಮನೆ ಬಾಡಿಗೆ ಪಡೆದಿದ್ದ:
ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಆರ್.ಡಿ. ಪಾಟೀಲ್ ಕಲಬುರಗಿಯ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಪಡೆಯುವಾಗ ತನ್ನ ಮೂಲ ಹೆಸರನ್ನೇ ಬದಲಿಸಿಕೊಂಡಿದ್ದನೆಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಅಪಾರ್ಟ್ ಮೆಂಟ್‌ನ ಬ್ಲಾಕ್ Aನ 103 ಫ್ಲ್ಯಾಟ್ ನಲ್ಲಿ ತಂಗಿದ್ದ ಆರ್.ಡಿ.ಪಾಟೀಲ್ ಶಹಾಪೂರ ಮೂಲದ ಶಂಕರಗೌಡ ಎನ್ನುವವರಿಗೆ ಸೇರಿದ ಫ್ಲ್ಯಾಟ್ ಬಾಡಿಗೆ ಪಡೆದಿದ್ದ. ಈ ವೇಳೆ ಆತ ತನ್ನ ಹೆಸರನ್ನು ಬಸವರಾಜ ಪಾಟೀಲ ಎಂದು ಹೇಳಿದ್ದನೆಂಬುದು ಬಯಲಾಗಿದೆ. ಫ್ಲ್ಯಾಟ್ ಬಾಡಿಗೆಗಾಗಿ 10 ಸಾವಿರ ಅಡ್ವಾನ್ಸ್ ಕೊಟ್ಟು ಕೀ ಪಡೆದಿದ್ದ ಆರ್.ಡಿ ಪಾಟೀಲ್, ನ.5 ರಂದು ರಾತ್ರಿ 11 ಗಂಟೆಗೆ ಇಲ್ಲೇ ತಂಗಿದ್ದ. ಮರುದಿನ ಮಧ್ಯಾಹ್ನ 1 ಗಂಟೆಯವರೆಗೂ ಇಲ್ಲೇ ಇದ್ದ. ಯಾವಾಗ ಪೊಲೀಸರು ತನ್ನನ್ನು ಹುಡುಕಿಕೊಂಡು ಬಂದರೋ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸರೇ ನೆರವಾದರಾ?:
ಆರ್.ಡಿ.ಪಾಟೀಲ್ ಅಪಾರ್ಟ್‌ಮೆಂಟ್‌ನಿಂದ ಪರಾರಿಯಾಗುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ದೃಶ್ಯ ಸಿ.ಸಿ.ಟೀವಿಯಲ್ಲಿ ಸೆರೆಯಾಗಿದೆ. ಪೊಲೀಸರು ದಾಳಿ ನಡೆಸುವ ವಿಚಾರ ಯಾರೋ ಇಲಾಖೆ ಒಳಗಿನವರೇ ಮಾಹಿತಿ ನೀಡಿದ್ರಾ ಎಂಬ ಅನುಮಾನ ಇದೀಗ ಮೂಡಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಆರ್.ಡಿ.ಪಾಟೀಲ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆಂದು ಶಂಕೆ ಇರುವವರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಗೃಹ ಸಚಿವಾಲಯದಿಂದಲೇ ಸೂಚನೆ ಬಂದಿದೆ ಎಂದು ಮಾಹಿತಿ ಇದೆ. ಆದರೆ ಕಲಬುರಗಿ ಪೊಲೀಸರು ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಅಗತ್ಯ ಬಿದ್ದರೆ ಸಿಐಡಿ ತನಿಖೆ: ಪರಂ
ಬೆಂಗಳೂರು: ಕೆ.ಇ.ಎ. ನಡೆಸಿದ ಎಫ್‌ಡಿಎ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಪ್ರಕರಣವನ್ನು ಅಗತ್ಯಬಿದ್ದರೆ ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನಮಗೆ ದೂರು ಬಂದಿರುವುದರಿಂದ ಪ್ರಕರಣ ದಾಖಲಿಸಿಕೊಂಡು ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಎಲ್ಲ ರೀತಿಯ ಮಾಹಿತಿ ಕಲೆಹಾಕಲಾಗುತ್ತಿದೆ. ಅಗತ್ಯವವೆನಿಸಿದರೆ ಸಿಐಡಿ ತನಿಖೆಗೆ ವಹಿಸಲೂ ಸಿದ್ಧ ಎಂದಿದ್ದಾರೆ.
ಪಿಎಸೈ ಹಗರಣದ ಆರೋಪಿ ಆರ್.ಡಿ. ಪಾಟೀಲ್ ಕಾಂಗ್ರೆಸ್ ಕಾರ್ಯಕರ್ತ: ಆರಗ ಜ್ಞಾನೇಂದ್ರ
ಆರ್.ಡಿ.ಪಾಟೀಲ್ ಜಾಮೀನು ಅರ್ಜಿ ತಿರಸ್ಕಾರ
ಕಲಬುರಗಿ: ಕೆ.ಇ.ಎ. ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಕಿಂಗ್‌ಪಿನ್ ಪರಾರಿಗೆ ಕಾಂಗ್ರೆಸ್ ಸಹಕಾರ
ಕೆಇಎ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಲಬುರಗಿಯಲ್ಲೇ ತಂಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಅವನನ್ನು ಬಂಧಿಸಲಾಗಿಲ್ಲ. ಅವನು ಪರಾರಿಯಾಗುವಂತೆ ಮಾಡಲು ಕಾಂಗ್ರೆಸ್ ಪಕ್ಷದ ಸಚಿವರು ಮುಂತಾದವರೇ ನೆರವಾಗಿರುವ ಗುಮಾನಿ ಇದೆ.
- ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ
ಆರೋಪಿ ಮನೇಲಿ ಗೋಡಂಬಿ ತಿಂದಿಲ್ಲ
ವಿಜಯೇಂದ್ರ ಸರಿಯಾಗಿ ಹೋಮ್ ವರ್ಕ್ ಮಾಡಿಕೊಂಡು ಬಂದು ಮಾತಾಡಲಿ. ಬಿಜೆಪಿ ಸರ್ಕಾರವಿದ್ದಾಗ ಗೃಹ ಸಚಿವರೇ ಪಿಎಸ್‌ಐ ಹಗರಣದ ಮುಖ್ಯ ಆರೋಪಿ ಮನೆಗೆ ಹೋಗಿ ಕಾಜು-ಬದಾಮ್ ತಿಂದು ಬಂದಂತೆ ನಾವಂತೂ ತಿಂದಿಲ್ಲ. ಆರ್.ಡಿ.ಪಾಟೀಲ್‌ನನ್ನು ಹಿಡಿಯುತ್ತೇವೆ.
- ಪ್ರಿಯಾಂಕ್ ಖರ್ಗೆ ಕಲಬುರಗಿ ಉಸ್ತುವಾರಿ ಸಚಿವ