KEA ಪರೀಕ್ಷೆ ಅಕ್ರಮ: ಕೊನೆಗೂ ಸಿಐಡಿ ತನಿಖೆಗೆ ಆದೇಶಿಸಿದ ಗೃಹ ಇಲಾಖೆ

By Kannadaprabha NewsFirst Published Nov 12, 2023, 4:45 AM IST
Highlights

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಪರೀಕ್ಷಾ ಅಕ್ರಮ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಶನಿವಾರ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ. 

ಬೆಂಗಳೂರು/ಯಾದಗಿರಿ (ನ.12): ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಪರೀಕ್ಷಾ ಅಕ್ರಮ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಶನಿವಾರ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ. ಪರೀಕ್ಷಾ ಅಕ್ರಮ ಸಂಬಂಧ ಯಾದಗಿರಿಯಲ್ಲಿ ಐದು, ಕಲಬುರಗಿ ಟೌನ್‌ನಲ್ಲಿ ಎರಡು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಒಂದು ಸೇರಿದಂತೆ ಒಟ್ಟು ಎಂಟು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಇದೀಗ ಗೃಹ ಇಲಾಖೆಯು ಸಿಐಡಿಗೆ ತನಿಖೆಗೆ ಆದೇಶಿರುವ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಅವರು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳ ಸಂಬಂಧದ ದಾಖಲೆಗಳನ್ನು ತನಿಖಾಧಿಕಾರಿಗಳಿಂದ ಪಡೆದು ಸಿಐಡಿಗೆ ಹಸ್ತಾಂತರಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ಇನ್ನು ಮುಂದೆ ಸಿಐಡಿ ಆರ್ಥಿಕ ಅಪರಾಧಗಳ ಘಟಕದ ಎಸ್ಪಿ ಮಟ್ಟದ ಅಧಿಕಾರಿ ಈ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಈಗಾಗಲೇ ಕಲಬುರಗಿ ಪೊಲೀಸರು ಅಕ್ರಮದ ಕಿಂಗ್‌ಪಿನ್‌ ಎನ್ನಲಾದ ಆರ್‌.ಟಿ.ಪಾಟೀಲ್‌ನನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಈವರೆಗೆ ಅಭ್ಯರ್ಥಿಗಳು, ಮಧ್ಯವರ್ತಿಗಳು ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಸಿಐಡಿ ಅಧಿಕಾರಿಗಳು ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ಆರೋಪಿಗಳನ್ನು ವಶಕ್ಕೆ ಪಡೆದು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಇಎ ಪರೀಕ್ಷಾ ಅಕ್ರಮ: ಮೊಬೈಲ್‌ ಬದಲಿಸುತ್ತ ಯಾಮಾರಿಸುತ್ತಿರುವ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌

ಏನಿದು ಪರೀಕ್ಷಾ ಅಕ್ರಮ?: ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳ ಭರ್ತಿಗಾಗಿ ಕೆಇಎಯಿಂದ ಕಳೆದ ಅ.28 ಹಾಗೂ ಅ.29ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ಯಾದಗಿರಿಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಮೊದಲ ದಿನದ ಪರೀಕ್ಷೆಯಲ್ಲಿ ಇಲ್ಲಿನ ಐದು ಕೇಂದ್ರಗಳಲ್ಲಿ ಬ್ಲೂಟೂತ್‌ ಅಕ್ರಮ ಪತ್ತೆಯಾಗಿದ್ದರಿಂದ, ಅಫಜಲ್ಪುರ ತಾಲೂಕು ಹಾಗೂ ವಿಜಯಪುರ ಜಿಲ್ಲೆ ಮೂಲದ 11 ಜನ ಅಭ್ಯರ್ಥಿಗಳು ಹಾಗೂ ಐವರು ಮಧ್ಯವರ್ತಿಗಳು ಸೇರಿದಂತೆ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದರು. 

ಕಲಬುರಗಿಯಲ್ಲಿಯೂ ಇದೇ ತೆರನಾದ ಅಕ್ರಮ ಪತ್ತೆಯಾಗಿ, ಅಲ್ಲಿಯೂ ಹಲವರ ಬಂಧನವಾಗಿತ್ತು ಸೂಕ್ಷ್ಮವಾದ ಬ್ಲೂಟೂತ್‌ ಸ್ಪೀಕರ್‌ ಕಿವಿಯಲ್ಲಿಟ್ಟುಕೊಂಡು, ಹೊರಗಿನವರ ಮೂಲಕ ಮೊಬೈಲ್‌ನಲ್ಲಿ ಉತ್ತರ ಕೇಳಿಸಿಕೊಂಡು ಬರೆಯುತ್ತಿದ್ದವರನ್ನು ಬಂಧಿಸಲಾಗಿತ್ತು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಂತೆ ಇದೂ ಕೂಡ ನಡೆದಿತ್ತು. ಅದರ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ಹೆಸರೇ ಇಲ್ಲಿಯೂ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದರು. ಈ ಅಕ್ರಮ ಕೇವಲ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯೂ ನಡೆದಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಓಎಂಆರ್‌ ಶೀಟ್‌ ತಿರುಚುವಿಕೆ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ಅನುಮಾನ ವ್ಯಕ್ತಪಡಿಸಿದ್ದರು. 

ಕೆಇಎ ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್‌ ಖರ್ಗೆ

ತನಿಖೆಯನ್ನು ಸಿಐಡಿಗೆ ವಹಿಸಿದರೆ, ವಿವಿಧೆಡೆಯೂ ನಡೆದ ಅಕ್ರಮ ಬಯಲಾಗಬಹುದು ಎಂಬ ಸಲಹೆಗಳು ಮೂಡಿಬಂದಿದ್ದವು.< ಅಕ್ರಮದ ಬಗ್ಗೆ ‘ಕನ್ನಡಪ್ರಭ’ದಲ್ಲಿ ಬಂದಿದ್ದ ವಿಶೇಷ ವರದಿಗಳು ಸರ್ಕಾರದ ಗಮನ ಸೆಳೆದಿದ್ದವು. ಬ್ಲೂಟೂತ್‌ ಅಷ್ಟೇ ಅಲ್ಲ, ಓಎಂಆರ್‌ ಶೀಟ್‌ನಲ್ಲಿಯೂ ಅಕ್ರಮದ ಶಂಕೆ ಕಂಡುಬಂದಿದ್ದು, ರಾಜ್ಯದ ವಿವಿಧೆಡೆ ಅಕ್ರಮ ನಡೆದಿರುವ ಬಗ್ಗೆ ವರದಿಗಳು ಪ್ರಕಟಗೊಂಡಿದ್ದವು. ಪಿಎಸೈ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಿದಂತೆ, ಈ ಎಫ್‌ಡಿಎ ಪರೀಕ್ಷಾ ಅಕ್ರಮದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ‘ಕನ್ನಡಪ್ರಭ’ ನ.7ರಂದು ವರದಿ ಪ್ರಕಟಿಸಿತ್ತು.

click me!