ಕಸ್ತೂರಿ ರಂಗನ್‌ ವರದಿ ವಿರೋಧಕ್ಕೆ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಭರವಸೆ ವರದಿಗೆ ಬೀಳುತ್ತಾ ಬ್ರೇಕ್?

Published : Sep 21, 2026, 08:17 AM IST
DK Shivakumar

ಸಾರಾಂಶ

ಸಕಲೇಶಪುರದಲ್ಲಿ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಉಪಗ್ರಹ ಆಧಾರಿತ ವರದಿಯನ್ನು ತಿರಸ್ಕರಿಸಿರುವ ಸ್ಥಳೀಯರು, ಭೌತಿಕವಾಗಿ ಮರು ಸರ್ವೇ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಕಲೇಶಪುರ: ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿಟ್ಟಿನಲ್ಲಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಮೂಲಕ ವರದಿಗೆ ತಾರ್ಕಿಕ ಅಂತ್ಯ ಹಾಡಲಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದ ಎಪಿಎಂಸಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆ ಹಾಗೂ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವರದಿ ಬಗ್ಗೆ ಜನಸಾಮಾನ್ಯರ ಅಹವಾಲು ಅಲಿಸುವ ಉದ್ದೇಶದಿಂದ ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ಕರೆತಂದಿದ್ದೇನೆ. ವಿಧಾನಸಭೆಯಲ್ಲಿ ಕುಳಿತು ತಜ್ಞರೊಂದಿಗೆ ಮಾತನಾಡಿ ವರದಿ ಬಗ್ಗೆ ನಿಲುವು ತಾಳಬಹುದಿತ್ತು. ಆದರೆ, ವರದಿ ಕುರಿತು ಜನರ ವಾಸ್ತವ ಸಮಸ್ಯೆಗಳನ್ನು ಅರಿಯುವ ದೃಷ್ಟಿಯಿಂದ ಸಮಸ್ಯೆ ಪೀಡಿತ ಜಿಲ್ಲೆಗಳಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.

ಕಳೆದ ವಿಧಾನಸಭಾ ಅಧಿವೇಶನದಲ್ಲೇ ಈ ಸಮಸ್ಯೆ ಕುರಿತು ಚರ್ಚಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ವಿರೋಧ ಪಕ್ಷದ ಸದಸ್ಯರು ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ಈ ನಿಟ್ಟಿನಲ್ಲಿ ಸಮಸ್ಯೆ ಪೀಡಿತ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ನಡೆಸಿ, ಎಲ್ಲರ ಒಪ್ಪಿಗೆ ಪಡೆದು ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳುವ ಉದ್ದೇಶ ಹೊಂದಿದ್ದೇನೆ ಎಂದರು.

ಕಸ್ತೂರಿ ರಂಗನ್‌ ವರದಿಯ ಮರು ಸರ್ವೇಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದಿದ್ದಾರೆ. ನಮ್ಮ ವಿರೋಧಿಗಳು ಜನರ ಭಾವನೆಯನ್ನು ಗುರಿಯಾಗಿ ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಆದರೆ, ನಾನು ಬದುಕಿನ ಮೇಲೆ ರಾಜಕಾರಣ ಮಾಡುತ್ತೇನೆ. ಜನರಿಗೆ ನಿಜವಾಗಿ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಚರ್ಚಿಸಲು ಎಲ್ಲೆಲ್ಲಿ ನಮ್ಮ ಶಾಸಕರಿಲ್ಲವೋ ಅಲ್ಲಿ ಜನರ ಧ್ವನಿಯಾಗಲು ನಾವು ಬಂದಿದ್ದೇವೆ. ಕಸ್ತೂರಿ ರಂಗನ್ ವರದಿ ಪರಾಮರ್ಶೆಗಾಗಿ ಸಂಜಯ್ ಮಿಶ್ರಾ ಎಂಬ ಅಧಿಕಾರಿಯನ್ನು ಕೇಂದ್ರ ಸರ್ಕಾರ ನೇಮಿಸಿದೆ. ಈ ವರದಿಯನ್ನು ನೀಡಲು 2017ರವರೆಗೆ ಸಮಯವಿದೆ ಎನ್ನಲಾಗುತ್ತಿದೆ. ಸಮಸ್ಯೆ ಪೀಡಿತ ತಾಲೂಕುಗಳ ಸಮಸ್ಯೆಗಳ ಬಗ್ಗೆ ನನಗೆ ಅರಿವಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ಜನರಲ್ಲಿ ಆತ್ಮ ವಿಶ್ವಾಸ ತುಂಬಿದರು.

ಪಶ್ಚಿಮಘಟ್ಟದಲ್ಲಿ ಮರು ಸರ್ವೇ ಮಾಡಿಸಲು ಸ್ಥಳೀಯರ ಒತ್ತಾಯ:

ಅತಿಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್‌ ವರದಿ ತಯಾರಿಸಿರುವುದು ಉಪಗ್ರಹ ಆಧಾರಿತ ಸರ್ವೇ ಮೂಲಕ. ಹಾಗಾಗಿ, ಇದು ವಾಸ್ತವದಿಂದ ದೂರದಲ್ಲಿದ್ದು, ಭೌತಿಕವಾಗಿ ಈ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿನ ಜನರನ್ನು ಮಾತನಾಡಿಸಿ, ಅವರ ಅಭಿಪ್ರಾಯ ಸಂಗ್ರಹಿಸಿ ಮರು ಸರ್ವೇ ಮಾಡಬೇಕು ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕಸ್ತೂರಿ ರಂಗನ್ ವರದಿ ಕುರಿತಂತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರು ಮಾತನಾಡಿ, ಅರಣ್ಯದಲ್ಲೇ ಹುಟ್ಟಿ ಬೆಳೆದಿರುವ ಮಲೆನಾಡಿಗರಿಂದ ಪಶ್ಚಿಮಘಟ್ಟದ ಅರಣ್ಯಕ್ಕೆ ಈವರೆಗೆ ಯಾವುದೇ ಹಾನಿಯಾಗಿಲ್ಲ. ಸರ್ಕಾರದ ಯೋಜನೆಗಳಿಂದಲೇ ಪಶ್ಚಿಮಘಟ್ಟಕ್ಕೆ ಹಾನಿ ಉಂಟಾಗಿದೆ. ಹಾಗಾಗಿ, ಎಲ್ಲೋ ಕುಳಿತು ಮಾಡಿದ ಕಸ್ತೂರಿ ರಂಗನ್‌ ವರದಿ ಮಲೆನಾಡಿಗರಿಗೆ ಮರಣ ಶಾಸನವೇ ಆಗುತ್ತದೆ. ಹಾಗಾಗಿ, ಈ ವರದಿಯ ಬದಲಾಗಿ ಪಶ್ಚಿಮಘಟ್ಟದಲ್ಲಿ ಮರು ಸರ್ವೇ ಆಗಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನರ ಬಳಿಗೆ ನಾವು ತೆರಳಿದರೆ ಜನರು ನಮಗೆ ವಿಶ್ವಾಸಿಗಳಾಗಿರುತ್ತಾರೆ. ರಾಹುಲ್‌ ಗಾಂಧಿ ನಡೆಸಿದ ಭಾರತ್‌ ಜೋಡೋ ಯಾತ್ರೆ ವೇಳೆ ನಮ್ಮ ಯಾತ್ರೆ ಎಲ್ಲೆಲ್ಲಿ ಹಾದು ಹೋಗಿತ್ತೋ, ಅಲ್ಲೆಲ್ಲಾ ಕಾಂಗ್ರೆಸ್ ಶಾಸಕರು ಗೆದ್ದಿದ್ದು, ನಮ್ಮ ಸರ್ಕಾರಕ್ಕೆ ಬೆಂಬಲವಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ನಿಮ್ಮ ಶತ್ರುಗಳಲ್ಲ, ಅರಣ್ಯ ಇಲಾಖೆಯ ಭಯದಿಂದ ಬದುಕು ನಡೆಸುವುದು ಬೇಡ. ಭಯ ಹೋಗಲಾಡಿಸಲು ನಾವಿದ್ದೇವೆ. ಜಿಲ್ಲೆಯ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಸಂಪ್ರದಾಯವಿದೆ. ಆದರೆ, ಅಧಿಕಾರಿಗಳು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಮಂಗಳೂರಿನ ಜನರ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಪ್ಯಾಕೇಜ್ ಘೋಷಿಸಿದ್ದೇನೆ. ಇದರಲ್ಲಿ ಮಲೆನಾಡನ್ನು ಸೇರಿಸಿದ್ದೇನೆ. ಇನ್ನು ಮುಂದೆ ಬಂಡವಾಳ ಹೂಡುವವರಿಗೆ ಸರ್ಕಾರವೇ ಮೂಲಭೂತ ಸೌಕರ್ಯ ಕಲ್ಪಿಸಲಿದೆ. ಇಂತಹ ಯೋಜನೆ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಕರ್ನಾಟಕ ಸರ್ಕಾರ ಕೂಡ ಈ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ತೇಗದ ಸಿರಿ ಯೋಜನೆಯನ್ನು ಜಾರಿಗೊಳಿಸಿದ್ದು, ಜಮೀನಿನ ಪಕ್ಕದಲ್ಲಿನ ಜಾಗದಲ್ಲಿ ಮರಗಳನ್ನು ನೆಟ್ಟು ಪೋಷಿಸಿದರೆ ಆದಾಯಗಳಿಸಬಹುದಾಗಿದೆ ಎಂದು ಅವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live Updates Today 21st Sep: ಇಂದಿನಿಂದ 3 ದಿನ ವಿಶೇಷ ಅಧಿವೇಶನ, ಪಶ್ಚಿಮಘಟ್ಟ ಕುರಿತ ಕಸ್ತೂರಿರಂಗನ್‌ ಸಮಿತಿ ವರದಿ ಚರ್ಚೆ
ಚುನಾವಣಾ ವ್ಯವಸ್ಥೆ ಸರಿ ಇಲ್ದಿದ್ರೆ ಮೊದಲೇ ದೂರ ಇರ್ಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯಗೆ, ಮಹದೇವಪ್ಪ ಟಾಂಗ್‌!