ಕಾರವಾರ ಬಂದರಿನಲ್ಲಿದ್ದ 38 ಸಾವಿರ ಮೆ. ಟನ್ ಕಬ್ಬಿಣ ಅದಿರಿಗೆ ವಾರಸುದಾರರೇ ಇಲ್ಲ: 13 ವರ್ಷದ ಬಳಿಕ ವಿಲೇವಾರಿ

By Sathish Kumar KHFirst Published May 31, 2023, 11:20 PM IST
Highlights

ಬಳ್ಳಾರಿಯಿಂದ ಕಾರವಾರ ಬಂದರಿನ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಾಣೆಯಾಗುತ್ತಿದ್ದ ಕಬ್ಬಿಣದ ಅದಿರನ್ನು ಸಿಬಿಐ ಅಧಿಕಾರಿಗಳು ಸೀಜ್‌ ಮಾಡಿ ಸಂಗ್ರಹಿಸಿಟ್ಟಿದ್ದು, ಬರೋಬ್ಬರಿ 13 ವರ್ಷಗಳ ಬಳಿಕ ಅದನ್ನು ವಿಲೇವಾರಿ ಮಾಡಲಾಗಿದೆ. 

ವರದಿ - ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್‌ ಸುವರ್ಣ ನ್ಯೂಸ್
ಉತ್ತರ ಕನ್ನಡ (ಮೇ 31): ಬಳ್ಳಾರಿಯಿಂದ ಕಾರವಾರ ಬಂದರಿನ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಾಣೆಯಾಗುತ್ತಿದ್ದ ಕಬ್ಬಿಣದ ಅದಿರನ್ನು ಸಿಬಿಐ ಅಧಿಕಾರಿಗಳು ಸೀಜ್‌ ಮಾಡಿ ಸಂಗ್ರಹಿಸಿಟ್ಟಿದ್ದು, ಬರೋಬ್ಬರಿ 13 ವರ್ಷಗಳ ಬಳಿಕ ಅದನ್ನು ವಿಲೇವಾರಿ ಮಾಡಲಾಗಿದೆ. 

ಬಳ್ಳಾರಿಯಿಂದ ವಿದೇಶಗಳಿಗೆ ಸಾಗಣೆ ಮಾಡಲಾಗುತ್ತಿದ್ದ ಕಬ್ಬಿಣದ ಅದಿರು ಸಾಗಣೆಯಲ್ಲಿ ಅಕ್ರಮದ ವಾಸನೆ ಬಂದು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಸಾವಿರಾರು ಟನ್‌ ಅದಿರನ್ನು ಕಾರವಾರ ಬಂದರಿನಲ್ಲಿಯೇ ಸಂಗ್ರಹಣೆ ಮಾಡಲಾಗಿತ್ತು. ಈಗ 13 ವರ್ಷಗಳ ಬಳಿಕ ಕಾರವಾರದ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 38,200 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಹರಾಜು ಮಾಡಲಾಗಿದ್ದು, ಕೊನೆಗೂ ಚೀನಾಕ್ಕೆ‌ ರಫ್ತಾಗಿದೆ. 

ಮಾಜಿ ಸಿಎಂ ಯಡಿಯೂರಪ್ಪಗೂ ಅದಿರಿನ ಉರುಳು: ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಗಣಿಗಾರಿಕೆ ಬಳ್ಳಾರಿಯ ಗಣಿ-ಧಣಿಗಳಿಗೆ ಮಾತ್ರವಲ್ಲದೇ, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕೂಡಾ ಕಂಟಕಪ್ರಾಯವಾಗಿತ್ತು. ಈ ಅಕ್ರಮ ಅದಿರನ್ನು ಕರಾವಳಿಯ ಕಾರವಾರ ಮತ್ತು ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ಸಾಗಿಸಲಾಗುತ್ತಿದ್ದಾಗ ಆ ಸಂದರ್ಭದಲ್ಲಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಸಾವಿರಾರು ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಬಂದರಲ್ಲಿ ವಶಕ್ಕೆ ಪಡೆದು ಕೇಸ್ ದಾಖಲು ಮಾಡಿದ್ದರು.

ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಕಾಂಗ್ರೆಸ್‌ ಸರ್ಕಾರ

ರಫ್ತು ಮಾಡದಂತೆ ನಿಷೇಧ ಹೇರಿಕೆ: 2010ರಲ್ಲಿ ಕಾರವಾರದ ಬಂದರಿನಲ್ಲಿ ಅಕ್ರಮ ಅದಿರು ಜಪ್ತಿ ಮಾಡಿದ ಬಳಿಕ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆಗ ಕೋರ್ಟ್ ಕರ್ನಾಟಕದ ಅದಿರನ್ನು ಎಲ್ಲಿಗೂ ರಫ್ತಾಗದಂತೆ ನಿಷೇಧಿಸಿ ಆದೇಶ ಮಾಡಿತ್ತು. 2010ರಲ್ಲಿ ಅದಿರು ಸಾಗಾಟಕ್ಕೆ ನಿಷೇಧ ಹೇರಿದ್ದ ಸುಪ್ರೀಂ ಕೋರ್ಟ್, 2020 ಅಕ್ಟೋಬರ್ ನಲ್ಲಿ ನಿಷೇಧವನ್ನು ಹಿಂಪಡೆಯಿತು. ನಂತರದಲ್ಲಿ ಅಂದರೆ 2020 ಅಕ್ಟೋಬರ್ ನಿಂದ 2023 ರ ವರಗೆ ಜಿಲ್ಲಾ ಟಾಸ್ಕ್ ಪೋರ್ಸ್ ಜಪ್ತಾಗಿದ್ದ ಅದಿರನ್ನು ಹರಾಜು ಪ್ರಕ್ರಿಯೆಗೆ ಕರೆದಿದ್ದರು. 

7 ಬಾರಿ ಹರಾಜು ಮಾಡಿದರೂ ಖರೀದಿ ಆಗಿರಲಿಲ್ಲ: ಆದರೆ ಏಳು ಬಾರಿಯೂ ಹರಾಜು ಪ್ರಕ್ರಿಯೆಯಲ್ಲಿ ಗೋವಾದ ವೇದಾಂತ ಸೆಸಾ ಕಂಪೆನಿ ಮಾತ್ರ ಬಾಗಿಯಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಕನಿಷ್ಟ 3 ಕಂಪೆನಿಗಳಾದರೂ ಭಾಗಿಯಾಗಬೇಕು ಎನ್ನುವ ನಿಯಮವಿದ್ದದ್ದರಿಂದ‌ ಅದಿರು ಹರಾಜಾಗದೇ ಹಾಗೆಯೇ ಬಿದ್ದಿತ್ತು. ಅದಿರು ಟೆಂಪರ್ ಕಳೆದುಕೊಂಡಿದೆ ಎಂಬ ಊಹೆ ಮೇರೆಗೆ ಇದನ್ನು ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ. ಆದರೆ, ಜನವರಿ 20ನೇ ತಾರೀಕು ಎಂಟನೇ ಬಾರಿಯ ಹರಾಜಿನಲ್ಲಿ ಮಂಗಳೂರಿನ ಗ್ಲೋರಿ ಶಿಪ್ಟಿಂಗ್, ಗೋವಾದ ವೇದಾಂತ ಸೆಸಾ ಹಾಗೂ ಇತರ ಕಂಪೆನಿಗಳು ಪಾಲ್ಗೊಂಡಿದ್ದವು. ಆದರೆ, ಕೊನೆಗೆ 16 ರಾಶಿಯನ್ನು 9 ಕೋಟಿ ರೂ.ಗೆ ಗ್ಲೋರಿ ಶಿಪ್ಟಿಂಗ್, 2 ರಾಶಿಯನ್ನು 75 ಲಕ್ಷ ರೂ.ಗೆ ವೇದಾಂತ ಸೆಸಾ ಗೋವಾ ಕಂಪನಿಗಳು ತಮ್ಮದಾಗಿಸಿಕೊಂಡವು. ಇದರಿಂದಾಗಿ ಕೊನೆಗೂ 13 ವರ್ಷಗಳ ಬಳಿಕ ಹಡಗುಗಳು ಈ ಅದಿರುಗಳನ್ನು ಹೊತ್ತು ಚೀನಾದತ್ತ ಸಾಗಿದೆ‌‌. 

ಕಬ್ಬಿಣದ ಅದಿರಿನ ಮಾಲೀಕರೇ ಬಂದಿಲ್ಲ: ಈ ಹಿಂದೆ ಜಪ್ತಿಯಾಗಿದ್ದ ಅದಿರು ನ್ಯಾಯ ಬದ್ಧವಾಗಿದೆ ಎಂದು ಯಾರು ಕೂಡಾ ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಆದರೆ, ರಾಜಮಹಲ್ ಸ್ಟೀಲ್‌ ಎಂಬ ಕಂಪೆನಿ ಮಾತ್ರ ತಮ್ಮ 16 ಸಾವಿರ ಮೆಟ್ರಿಕ್ ಟನ್ ನ್ಯಾಯ ಬದ್ಧವಾಗಿ ನಮಗೆ ಸೇರಬೇಕು ಎಂದು ದಾಖಲೆ ಸಮೇತ ನ್ಯಾಯಾಲಯದ ಮೊರೆ ಹೋಗಿದ್ದರು. ದಾಖಲೆ ಪರಿಶೀಲನೆ ಮಾಡಿ ಅದಿರು ರಫ್ತಿಗೆ ಅವಕಾಶ ನೀಡಿತ್ತು. ಆದರೆ, ಉಳಿದವರು ನ್ಯಾಯಲಯದ ಮೊರೆ ಹೋಗದೆ ನಾವು ಬದುಕಿದ್ರೆ ಸಾಕು ಅಂತಾ ಸುಮ್ಮನೆ ಕುಳಿತಿದ್ದರು. ಇದರಿಂದಾಗಿ ಕಾರವಾರ ಬಂದರಿನಲ್ಲಿ 18  ದಿಬ್ಬ ಅದಿರು ಅಂದರೆ ಅಂದಾಜು 52 ಸಾವಿರ ಮೆಟ್ರಿಕ್‌ ಟನ್‌ಗೂ ಹೆಚ್ಚಿನ ಅದಿರು ಉಳಿದಿತ್ತು.

ಕರ್ನಾಟಕ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆ ಹೆಚ್ಚಳ: ಜನವರಿಯಿಂದ ಪೂರ್ವಾನ್ವಯ

18 ಅದಿರಿನ ದಿಬ್ಬಗಳಲ್ಲಿ 16ಕ್ಕೆ ಮುಕ್ತಿ:  ಪ್ರಸ್ತುತ 18 ಅದಿರಿನ ದಿಬ್ಬದಲ್ಲಿ 16 ದಿಬ್ಬ ಅಂದರೆ 38,200 ಮೆಟ್ರಿಕ್ ಟನ್ ಅದಿರನ್ನು ಮಂಗಳೂರು ಮೂಲದ ಗ್ಲೋರಿ ಶಿಪ್ಪಿಂಗ್ ಎನ್ನುವ ಸಂಸ್ಥೆಯು ಹರಾಜಿನಲ್ಲಿ  ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಳಿದ 2 ದಿಬ್ಬಗಳು ಅಂದರೆ 25,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಗೋವಾದ ವೇದಾಂತ ಸೇಸಾ ರಿಸೋರ್ಸ್ ಲಿಮಿಟೆಡ್ ಪಡೆದುಕೊಂಡಿದ್ದಾರೆ. ಆದರೆ, ವೇದಾಂತ ಸೇಸಾ ಕಂಪೆನಿಯವರು ಹಣ ಪಾವತಿಸಲು ಬಾಕಿಯಿರೋದ್ರಿಂದ ಹರಾಜಾಗಿರುವ ಅದಿರು ಈಗಲೂ ಬಂದರಿನಲ್ಲಿದೆ. 13 ವರ್ಷಗಳಿಂದ ಗಾಳಿ, ಮಳೆ, ಬಿಸಿಲು ಧೂಳು, ಗಿಡ ಮರಗಳ ಮದ್ಯ ಸಿಕ್ಕಿದ್ದ ಅದಿರನ್ನು ಎರಡು ತಿಂಗಳುಗಳ ಕಾಲ ಸ್ವಚ್ಛಗೊಳಿಸಿ ಹರಾಜು ಮೂಲಕ ರಫ್ತು ಮಾಡಿಸುವಲ್ಲಿ ಅಧಿಕಾರಿಗಳು ಕೊನೆಗೂ ಸಫಲರಾಗಿದ್ದಾರೆ. 

ಒಟ್ಟಿನಲ್ಲಿ 13 ವರ್ಷಗಳ ಕಾಲ ಬಂದರಿನಲ್ಲೇ ಬಾಕಿಯಾಗಿದ್ದ ಅದಿರು ಮಾರಾಟವಾಗಿ ಕೊನೆಗೂ ಸರಕಾರಕ್ಕೆ ಉತ್ತಮ ಲಾಭವಾಗಿದ್ದಲ್ಲದೇ, ಬಂದರಿನಲ್ಲಿ ಈವರೆಗೆ ಉಪಯೋಗಿಸಲಾಗದೇ ಬಾಕಿಯಾಗಿದ್ದ ಒಂದೂವರೆ ಎಕರೆ ಜಾಗ ಖುಲ್ಲಾಗೊಂಡಿದೆ. ಇದರಿಂದ ಸರಕಾರ ಹಾಗೂ ಬಂದರು ಅಭಿವೃದ್ಧಿಗೆ ಮತ್ತಷ್ಟು ಅವಕಾಶ ದೊರಕಿದಂತಾಗಿದೆ. 

click me!