ಉತ್ತರಾಖಂಡ ನೆರೆಯಲ್ಲಿ ರಾಜ್ಯದ ಎಲ್ಲ 96 ಜನ ಸುರಕ್ಷಿತ: ಅಶೋಕ್‌

By Kannadaprabha NewsFirst Published Oct 22, 2021, 7:15 AM IST
Highlights

*   ಶೀಘ್ರದಲ್ಲೇ ಎಲ್ಲರೂ ಸುರಕ್ಷಿತವಾಗಿ ರಾಜ್ಯಕ್ಕೆ
*   ಭೂಕಂಪನದ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ
*   ಚಾಮುಂಡಿಬೆಟ್ಟ ಕುಸಿತ ಬಗ್ಗೆ ವರದಿಗೆ ಸೂಚನೆ
 

ಬೆಂಗಳೂರು(ಅ.22):  ಉತ್ತರಾಖಂಡ(Uttarakhand) ಪ್ರವಾಹದ(Flood) ವೇಳೆ ಆ ರಾಜ್ಯದಲ್ಲಿ ಸಿಲುಕಿಕೊಂಡಿರುವ ನಮ್ಮ ರಾಜ್ಯದ(Karnataka) ಎಲ್ಲ 96 ಮಂದಿಯೂ ಸುರಕ್ಷಿತವಾಗಿದ್ದು, ಎಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌(R Ashok) ಹೇಳಿದ್ದಾರೆ.

ಕನ್ನಡಿಗರ(Kannadigas) ರಕ್ಷಣೆಗೆ ಕಂದಾಯ ಇಲಾಖೆಯಿಂದ ಸಹಾಯವಾಣಿ(Helpline) ಸ್ಥಾಪಿಸಲಾಗಿದ್ದು, ಈವರೆಗೆ ಹತ್ತು ಕುಟುಂಬಗಳು ಕರೆ ಮಾಡಿವೆ. ಕನ್ನಡಿಗರು ಹಾಗೂ ಅಲ್ಲಿನ ಸರ್ಕಾರದ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಹೀಗಾಗಿ ಎಲ್ಲಾ ಕನ್ನಡಿಗರೂ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು. ಈವರೆಗೆ 96 ಮಂದಿ ಮಾತ್ರ ನಮ್ಮನ್ನು ಸಂಪರ್ಕ ಮಾಡಿದ್ದಾರೆ. ಇನ್ನೂ ಯಾರಾದರೂ ಸಹಾಯವಾಣಿಗೆ ಸಂಪರ್ಕಿಸಿದರೆ ಅವರನ್ನೂ ಕರೆತರುವ ಪ್ರಯತ್ನ ಮಾಡುತ್ತೇವೆ. ಈವರೆಗೆ ಸಿಂದಗಿ, ಉಡುಪಿ ಹಾಗೂ ಬೆಂಗಳೂರಿನ ಯಲಹಂಕ, ರಾಜಾಜಿನಗರ, ಪೂಣ್ಯ, ಹೆಬ್ಬಾಳ ಭಾಗದಿಂದ ಪ್ರವಾಸಿಗರು(Tourists)ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದರು.

ಭೀಕರ ಮಳೆ: ಉತ್ತರಾಖಂಡದಲ್ಲಿ 96 ಕನ್ನಡಿಗರು ಅತಂತ್ರ

ಕೇರಳಕ್ಕೆ ಅಗತ್ಯ ವಸ್ತುಗಳ ಪೂರೈಕೆ:

ಕೇರಳ ಪ್ರವಾಹದ(Kerala Flood) ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸಹಾಯಹಸ್ತ ನೀಡುವುದಾಗಿ ಹೇಳಿದ್ದಾರೆ. ಪ್ರವಾಹಪೀಡಿತ ಪ್ರದೇಶದಲ್ಲಿರುವವರ ನೆರವಿಗೆ ಬಟ್ಟೆ, ಬ್ರಶ್‌, ಟೂತ್‌ಪೇಸ್ಟ್‌, ತಿಂಡಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಸತೀಶ್‌ರೆಡ್ಡಿ ಅವರಿಗೆ ಆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಚಾಮುಂಡಿಬೆಟ್ಟ ಕುಸಿತ ಬಗ್ಗೆ ವರದಿಗೆ ಸೂಚನೆ:

ಮೈಸೂರಿನಲ್ಲಿ(Mysuru) ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ(Landslide) ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುಡ್ಡ ಕುಸಿತ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ರೆಡ್‌ ಹಾಗೂ ಯೆಲ್ಲೋ ಅಲರ್ಟ್‌(Yellow Alert) ಕಳಿಸಲಾಗುತ್ತಿದೆ. ಇದರಂತೆ ಮಳೆ ಹೆಚ್ಚಿರುವ ಕಡೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಏನೇ ಸಮಸ್ಯೆಯಾದರೂ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸಜ್ಜಾಗಿದೆ ಎಂದರು.

ಭೂಕಂಪನದ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ:

ಕಲಬುರಗಿಯಲ್ಲಿ(Kalaburagi) ಭೂಮಿ ಕಂಪಿಸುತ್ತಿರುವ(Earthquake) ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಜತೆಗೆ ಅಲ್ಲಿನ ಕುಟುಂಬಗಳ ಜತೆಯೂ ಮಾತನಾಡಿದ್ದೇನೆ. ಭೂಮಿಯ ಕೆಳ ಪದರದಲ್ಲಿ ಸುಣ್ಣದ ಅಂಶ ಹೆಚ್ಚಾಗಿರುವುದರಿಂದ ಈ ರೀತಿ ಆಗುತ್ತಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಬಿಜಾಪುರದಲ್ಲೂ(Vijayapura) ಇದೇ ರೀತಿ ಆಗಿದೆ. ತಜ್ಞರು ನೀಡಿರುವ ಪ್ರಾಥಮಿಕ ಅಭಿಪ್ರಾಯದ ಪ್ರಕಾರ ಆತಂಕಪಡುವ ಅಗತ್ಯವಿಲ್ಲ. ಒಂದು ವಾರದಲ್ಲಿ ಅಂತಿಮ ವರದಿ ಬರಲಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕ ಶೆಡ್‌ ಹಾಕುವ ಕೆಲಸ ಮಾಡುತ್ತಿದ್ದೇವೆ. ಜತೆಗೆ ಎಲ್ಲಾ ರೀತಿಯ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
 

click me!