'ಸೆಮಿಕಂಡಕ್ಟರ್ ವಲಯಕ್ಕೆ ಉಜ್ವಲ ಭವಿಷ್ಯ, ಕರ್ನಾಟಕವನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಗುರಿ'

By Suvarna News  |  First Published Oct 21, 2021, 6:38 PM IST

* ಸೆಮಿಕಂಡಕ್ಟರ್ ವಲಯಕ್ಕೆ ಉಜ್ವಲ ಭವಿಷ್ಯ
* ಕರ್ನಾಟಕವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಗುರಿ
* ಅಖಿಲ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಒಕ್ಕೂಟದಲ್ಲಿ ಹೇಳಿಕೆ


ಬೆಂಗಳೂರು, (ಅ.21): 2025ರ ಹೊತ್ತಿಗೆ ದೇಶದಲ್ಲಿ 220 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿರುವ ಎಲೆಕ್ಟ್ರಾನಿಕ್ಸ್ (Electronics) ಮತ್ತು ಸೆಮಿ-ಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕವನ್ನು(Karnataka) ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath narayan) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರ್ಚುಯಲ್ (Virtual) ನಲ್ಲಿ ನಡೆದ 16ನೇ ವರ್ಷದ ಅಖಿಲ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಒಕ್ಕೂಟದ (ಐಇಎಸ್ಎ) ಅಧಿವೇಶನವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ನ.17ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಕೂಡ ಈ ವಲಯದ ಬಗ್ಗೆ ಆದ್ಯತೆಯ ಮೇರೆಗೆ ಚರ್ಚಿಸಲಾಗುವುದು ಎಂದರು. 

Tap to resize

Latest Videos

ಆಧುನಿಕ ಕೋರ್ಸ್‌ ಗಳೊಂದಿಗಿನ ತರಬೇತಿ ನ.1ರಿಂದ ಆರಂಭ: ಅಶ್ವತ್ಥನಾರಾಯಣ

ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮದ ಬೆಳವಣಿಗೆಗೆ ಪೂರಕವಾದ ನೀತಿಗಳು ಚಾಲನೆ ಪಡೆದುಕೊಂಡಿದ್ದು, ಹುಬ್ಬಳ್ಳಿಯಲ್ಲಿ ಪರಿಪೋಷಣಾ ಕೇಂದ್ರವನ್ನು (ಇನ್ಕ್ಯುಬೇಷನ್ ಸೆಂಟರ್) ಸ್ಥಾಪಿಸಲಾಗಿದೆ. ಐಇಎಸ್ಎ ಮತ್ತು ರಾಜ್ಯದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯಗಳು ಇದಕ್ಕೆ ಕೈಜೋಡಿಸಿವೆ ಎಂದು ಅವರು ತಿಳಿಸಿದರು. 

ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ (ಇಎಸ್ ಡಿಎಂ) ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.64ರಷ್ಟಿದ್ದು, ಜಗತ್ತಿನ 85ಕ್ಕೂ ಹೆಚ್ಚು ಚಿಪ್ ವಿನ್ಯಾಸ ಕಂಪನಿಗಳು ಬೆಂಗಳೂರಿನಲ್ಲೇ ಇವೆ. ಈ ವಲಯವು ಮುಂಬರುವ ದಿನಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಿದೆ. ಇದರಿಂದಾಗಿ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಕನಸು ಕೂಡ ನನಸಾಗಲಿದೆ ಎಂದು ಸಚಿವರು ವಿವರಿಸಿದರು. 

ರಾಜ್ಯ ಸರಕಾರವು ಹೋದ ವರ್ಷವೇ ಇಎಸ್ ಡಿಎಂ ವಲಯವನ್ನು ಉತ್ತೇಜಿಸಲು ನೀತಿಯನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಕಂಪನಿಗಳಿಗೆ ಬಂಡವಾಳ ಹೂಡಿಕೆ ಮೇಲೆ ಸಬ್ಸಿಡಿ, ವಿದ್ಯುತ್ ದರದಲ್ಲಿ ರಿಯಾಯಿತಿ ಮತ್ತು ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹಧನ ಮುಂತಾದ ಸೌಲಭ್ಯಗಳನ್ನು ಕೊಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಡಿಯಲ್ಲಿ ಕೂಡ ಡಿಜಿಟಲ್ ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದ್ದು, ಇದಕ್ಕೆ ಬೆಂಗಳೂರಿನ ಐಐಐಟಿ ಸಹಯೋಗವಿದೆ. ಇದರಂತೆ, ಮುಂದಿನ 9 ತಿಂಗಳಲ್ಲಿ 180 ಡಿಸೈನ್ ಇಂಜಿನಿಯರುಗಳನ್ನು ಸಿದ್ಧಗೊಳಿಸಲಾಗುವುದು. `ಬಿಯಾಡ್ ಬೆಂಗಳೂರು’ ಉಪಕ್ರಮದಡಿ ಹುಬ್ಬಳ್ಳಿ-ಧಾರವಾಡದಂತಹ ಎರಡನೇ ಸ್ತರದ ನಗರಗಳಲ್ಲಿ ಸೆಮಿಕಂಡಕ್ಟರ್ ಸ್ಟಾರ್ಟಪ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಗೊಳ್ಳುವಂತೆ ಮಾಡುವುದು ಈಗಿರುವ ಗುರಿಯಾಗಿದೆ ಎಂದು ಅವರು ನುಡಿದರು. 

ಸಮಾವೇಶದಲ್ಲಿ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಖಾತೆಯ ಸಹಾಯಕ ಸಚಿವ ಸೋಮ್ ಪ್ರಕಾಶ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಗೌತಮ್ ರೆಡ್ಡಿ ಮತ್ತು ಡಿಕ್ಸಾನ್ ಕಂಪನಿಯ ಉಪಾಧ್ಯಕ್ಷ ಅತುಲ್ ಲಾಲ್ ಭಾಗವಹಿಸಿದ್ದರು. 

ಶಿಕ್ಷಣದಲ್ಲಿ ಸಮಗ್ರ ಸುಧಾರಣೆ (ಬಾಕ್ಸ್ ಐಟಂ) 
ಉದ್ಯಮಗಳ ಅಗತ್ಯ ಗಮನಿಸಿ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ತಂದಿರುವ ಮೊದಲ ರಾಜ್ಯ ನಮ್ಮದು. ಇದಕ್ಕೆ 600 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ದೀನದಯಾಳ್ ಉಪಾಧ್ಯಾಯ ಪ್ರೋತ್ಸಾಹ ಯೋಜನೆಯಡಿ ತಲಾ 40 ಸಾವಿರ ರೂ.ಗಳಿಂದ 2 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

click me!