
ಬೆಂಗಳೂರು (ಆ.19): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾರಿಗೊಳಿಸಲಾಗುತ್ತಿರುವ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯ (ಮನೆ ಯಜಮಾನಿಗೆ ಮಾಸಿಕ 2000 ರೂ. ನೆರವು) ಚಾಲನೆ ದಿನಾಂಕವನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಮುಂದೂಡಿಕೆ ಮಾಡಿದೆ. ಈಗಾಗಲೇ ಆ.16ರಂದು ಚಾಲನೆ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಮುಂದೂಡಿಕೆ ಮಾಡಿ ಆ.30ಕ್ಕೆ ದಿನಾಂಕ ನಿಗದಿ ಮಾಡಿದೆ.
ಹೌದು, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ರಚಿಸಿ ಎರಡೇ ತಿಂಗಳಲ್ಲಿ ಮೂರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ನಾಲ್ಕನೇ ಗ್ಯಾರಂಟಿಯಾಗಿ ಪ್ರತಿಷ್ಠಿತ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಆದರೆ, ಈ ಯೋಜನೆಯನ್ನು ಆಗಸ್ಟ್ ತಿಂಗಳ ಆರಂಭದಲ್ಲಿಯೇ ಜಾರಿಗೆ ತರವುದಾಗಿ ತಿಳಿಸಿತ್ತು. ಇನ್ನು ಆ.15ರ ವೇಳೆಗೆ ಫಲಾನುಭವಿ ಮಹಿಳೆಯರಿಗೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿಯೂ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಈವರೆಗೆ ಯೋಜನೆ ಜಾರಿಯಾಗಿಲ್ಲ.
ರಾಜಕೀಯ ನನಗೆ ಅನಿವಾರ್ಯವಲ್ಲ, ಆಕಸ್ಮಿಕ: ಲೋಕಸಭೆಗೂ ಮುನ್ನ ಟ್ವಿಸ್ಟ್ ಕೊಟ್ಟ ಸುಮಲತಾ ಅಂಬರೀಶ್
ಆ.30ಕ್ಕೆ ಮುಂದೂಡಿಕೆಯಾದ ಚಾಲನೆ ದಿನಾಂಕ: ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, 1.5 ಕೋಟಿ ಮಹಳೆಯರಿಂದ ಅರ್ಜಿಗಳೂ ಸಲ್ಲಿಕೆಯಾಗಿವೆ. ಇನ್ನು ಆ.16ರಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದ ಸರ್ಕಾರ, ಯೋಜನೆಗೆ ಚಾಲನೆ ದಿನಾಂಕವನ್ನು ಆ.27ಕ್ಕೆ ಮುಂದೂಡಿಕೆ ಮಾಡಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಆಹ್ವಾನಿಸುವ ದೃಷ್ಟಿಯಿಂದಾಗಿ ಮತ್ತೆ ಗೃಹಲಕ್ಷ್ಮಿ ಯೋಜನೆಯ ಚಾಲನೆ ದಿನಾಂಕವನ್ನು ಆ.30ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಬೆಳಗಾವಿ ಬದಲು ಮೈಸೂರಿಗೆ ಶಿಫ್ಟ್: ಈಗಾಗಲೇ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆಯಲ್ಲಿ ಉದ್ಘಾಟನೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಈಗ ಯೋಜನೆಯ ಉದ್ಘಾಟನಾ ದಿನಾಂಕವನ್ನು ಆ.30ಕ್ಕೆ ಮುಂದೂಡಿಕೆ ಮಾಡಿರುವುದರ ಜೊತೆಗೆ, ಉದ್ಘಾಟನಾ ಸ್ಥಳವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ನಿರ್ಧಾರ ಮಾಡಲಾಗಿದೆ.
ಕೆಪಿಎಸ್‌ಸಿಗೆ ಭ್ರಷ್ಟರನ್ನು ನೇಮಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
ಯೋಜನೆ ಉದ್ಘಾಟನೆಗೆ ರಾಹುಲ್‌ಗಾಂಧಿ ಆಗಮನ: ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಆಗಮಿಸಲಿದ್ದಾರೆ. ಇನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಆಗಮಿಸಲಿದ್ದಾರೆ. ಇನ್ನು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ವರ್ಚುವಲ್ ಆಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದಾದ ನಂತರ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ