
ಬೆಂಗಳೂರು (ಡಿ.25): ಹೊಸ ವರ್ಷದ ಸಂಭ್ರಮದ ಹೊತ್ತಲ್ಲೇ ಕರ್ನಾಟಕದ ಹೆದ್ದಾರಿಗಳು ರಕ್ತಸಿಕ್ತವಾಗುತ್ತಿವೆ. ಮೈಕೊರೆಯುವ ಚಳಿ, ದಟ್ಟವಾಗಿ ಆವರಿಸುವ ಮಂಜು ಮತ್ತು ಚಾಲಕರ ನಿದ್ರೆ ಮಂಪು ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿವೆ. ಗುರವಾರ ನಸುಕಿನ ಜಾನ ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಸೀಬರ್ಡ್ ಬಸ್ ದುರಂತವು ಚಳಿಗಾಲದ ರಸ್ತೆ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಪೊಲೀಸ್ ಇಲಾಖೆಯ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023ರಲ್ಲಿ ದಾಖಲೆಯ 43,440 ಅಪಘಾತಗಳು ಸಂಭವಿಸಿವೆ. 2024ರಲ್ಲಿ ಸುಮಾರು 39,000 ಅಪಘಾತಗಳು ವರದಿಯಾಗಿವೆ. ವಿಶೇಷವೆಂದರೆ, ಇವುಗಳಲ್ಲಿ ಹೆಚ್ಚಿನ ಭೀಕರ ಅಪಘಾತಗಳು ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲೇ ನಡೆದಿವೆ.
ರಾಜ್ಯದ ರಾಷ್ಟ್ರೀಯ ಹೆದ್ದಾರಿ 48 (ಬೆಂಗಳೂರು-ಪುಣೆ) ಮತ್ತು ರಾಷ್ಟ್ರೀಯ ಹೆದ್ದಾರಿ 75 ಅಪಘಾತಗಳ 'ಬ್ಲಾಕ್ ಸ್ಪಾಟ್'ಗಳಾಗಿ ಮಾರ್ಪಟ್ಟಿವೆ. 2021ರ ಜ. 15ರಂದು ದಾವಣಗೆರೆಯಿಂದ ಗೋವಾದತ್ತ ಪ್ರವಾಸಕ್ಕೆ ಹೊರಟಿದ್ದ ಮಹಿಳೆಯರಿದ್ದ ಮಿನಿಬಸ್‌ಗೆ ಟಿಪ್ಪರ್ ಡಿಕ್ಕಿಯಾಗಿ 12 ಜನ ಸಾವು ಕಂಡಿದ್ದರು. ಈ ಅಪಘಾತ ಕೂಡ ರಾಷ್ಟ್ರೀಯ ಹೆದ್ದಾರಿ 48ನಲ್ಲೇ ನಡೆದಿತ್ತು.
ಇನ್ನು 2023ರ ಡಿಸೆಂಬರ್ 25 ರಂದು ಸ್ಲೀಪರ್ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಜನ ಸಾವು ಕಂಡಿದ್ದರೆ, ಈ ವರ್ಷದ ಜನವರಿ 22 ರಂದು ಕಾರವಾರದಲ್ಲಿ ಟ್ರಕ್ ಕಂದಕಕ್ಕೆ ಬಿದ್ದು 10 ಜನ ದಾರುಣ ಸಾವು ಕಂಡಿದ್ದರು. ಇನ್ನೂ ಸ್ವಲ್ಪ ವರ್ಷ ಹಿಂದೆ ಹೋದರೆ, 2020ರ ಜನವರಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಏಳು ಜನ ಮೃತಪಟ್ಟಿದ್ದರು. 2016ರ ಡಿಸೆಂಬರ್‌ನಲ್ಲಿ ತುಮಕೂರು ಜಿಲ್ಲೆಯಲ್ಲಿ ಬಸ್ ಹಾಗೂ ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 10 ಜನರ ಸಾವಾಗಿತ್ತು.
ಕಳೆದ ವರ್ಷದ ಜನವರಿ 29 ರಂದು ಜಮಖಂಡಿ ತಾಲೂಕಿನಲ್ಲಿ ಟ್ರ್ಯಾಕ್ಟರ್ ಹಾಗೂ ಶಾಲಾ ವಾಹನ ನಡುವೆ ಢಿಕ್ಕಿ ಆಗಿತ್ತು. ಅದೇ ವರ್ಷದ ಡಿಸೆಂಬರ್ 2 ರಂದು ಹಾಸನದಲ್ಲಿ ರಸ್ತೆ ಅಪಘಾತ ಸಂಭವಿಸಿ ಐಪಿಎಸ್ ಅಧಿಕಾರಿ ಸಾವು ಕಂಡಿದ್ದರು. 2022ರ ಡಿಸೆಂಬರ್ 15ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಶಾಲಾ ವಾಹನ ಅಪಘಾತ ಕಂಡಿತ್ತು. ಅದಕ್ಕೂ ಮುನ್ನ ಅಂದರೆ, 2019ರಲ್ಲಿ ದೊಡ್ಡಬಳ್ಳಾಪುರ-ತುಮಕೂರು ರಸ್ತೆಯಲ್ಲಿ ಟ್ರಕ್ ಪಲ್ಟಿ ಆಗಿದ್ದರಿಂದ ಉದ್ಯಮಿ ಕುಟುಂಬವೊಂದರ 4 ಮಂದಿ ದಾರುಣ ಸಾವು ಕಂಡಿದ್ದರು.
ಚಳಿಗಾಲದಲ್ಲಿ ಅಪಘಾತಗಳು ಹೆಚ್ಚಾಗಲು ಸಂಶೋಧನೆ ಮತ್ತು ಪೊಲೀಸ್ ತನಿಖೆಗಳು ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಿವೆ:
ದಟ್ಟ ಮಂಜು (Low Visibility): ಮುಂಜಾನೆ ಹರಡುವ ಮಂಜಿನಿಂದಾಗಿ ರಸ್ತೆಯ ಮುಂದಿರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ.
ನಿದ್ರೆ ಮಂಪು (Driver Fatigue): ನಸುಕಿನ ಜಾವ 3 ರಿಂದ 6 ಗಂಟೆಯ ಅವಧಿಯಲ್ಲಿ ಚಾಲಕರಿಗೆ ಆವರಿಸುವ ನಿದ್ರೆ ನಿಯಂತ್ರಣ ತಪ್ಪಲು ಮುಖ್ಯ ಕಾರಣ.
ಅತಿಯಾದ ವೇಗ: ಖಾಲಿ ಇರುವ ಹೆದ್ದಾರಿಗಳಲ್ಲಿ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುವುದು ಮುಖಾಮುಖಿ ಢಿಕ್ಕಿಗೆ ದಾರಿ ಮಾಡಿಕೊಡುತ್ತಿದೆ.
ವರ್ಷಾಂತ್ಯದ ಪ್ರವಾಸ: ಡಿಸೆಂಬರ್‌ನಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಒತ್ತಡ ಹೆಚ್ಚಿರುತ್ತದೆ.
ನಸುಕಿನ ಪ್ರಯಾಣ ಬೇಡ: ಸಾಧ್ಯವಾದಷ್ಟು ಬೆಳಗಿನ ಜಾವದ ಪ್ರಯಾಣವನ್ನು ತಪ್ಪಿಸಿ, ಸೂರ್ಯೋದಯದ ನಂತರ ಸಂಚಾರ ಆರಂಭಿಸಿ.
ಫಾಗ್ ಲೈಟ್ ಬಳಸಿ: ಮಂಜು ಇದ್ದಾಗ ವಾಹನದ ಫಾಗ್ ಲೈಟ್‌ಗಳನ್ನು ಕಡ್ಡಾಯವಾಗಿ ಬಳಸಿ ಮತ್ತು ವೇಗ ಕಡಿಮೆ ಇರಲಿ.
ವಿಶ್ರಾಂತಿ ಅಗತ್ಯ: ದೀರ್ಘಕಾಲದ ಚಾಲನೆ ಮಾಡುವಾಗ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಿ.
ಸೂಚನೆ ಪಾಲಿಸಿ: ಹೆದ್ದಾರಿಗಳಲ್ಲಿ ಅಳವಡಿಸಿರುವ ವೇಗ ಮಿತಿ ಮತ್ತು ಸೂಚನಾ ಫಲಕಗಳನ್ನು ಗಮನಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ