
ರಾಮನಗರ (ಮೇ 23): ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾನು ಬೇಡ, ಸುಮನ್ನಾನು ಬೇಡ. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿ ಸಾಕು. ಎಲ್ಲರೂ ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ ಎಂದು ಎಂದು ಕನ್ನಡಪರ ಹೋರಾಟಗಾರ ಹಾಗೂ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಆಗ್ರಹಿಸಿದ್ದರು.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರ್ ಸ್ಯಾಂಡಲ್ ಸೋಪ್ ಗೆ ತಮನ್ನಾ ಭಾಟಿಯಾ ರನ್ನ ರಾಯಭಾರಿಯಾಗಿ ನೇಮಕ ಮಾಡುವುದು ಬೇಡ. ಮುಖ್ಯವಾಗಿ ನಮ್ಮ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಯಾರನ್ನೂ ಆಯ್ಕೆ ಮಾಡುವುದು ಬೇಡ. ಅದರಲ್ಲಿಯೂ ಕನ್ನಡದವರು ಹೊರತಾಗಿ ತಮಿಳು, ತೆಲುಗಿನವರು ಯಾರು ಬೇಡ. ಕರ್ನಾಟಕದ ಶ್ರೀಗಂಧ, ದರಸಾ ನಡೆಯುವ ಮೈಸೂರು ಪ್ರಪಂಚದಲ್ಲೇ ಬ್ರಾಂಡ್ ಆಗಿವೆ. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿ ಸಾಕು. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದರೆ ಅವರೇ ದೊಡ್ಡ ರಾಯಭಾರಿಗಳು ಆದಂತೆ ಎಂದರು.
ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾನು ಬೇಡ, ಸುಮನ್ನಾನು ಬೇಡ. ತಮನ್ನಾಗಿ 6 ಕೋಟಿ ಕೊಟ್ಟಿರೋದರಲ್ಲಿ ದೊಡ್ಡ ರಾಜಕೀಯ ಇದೆ. ಸಿಕ್ಕಸಿಕ್ಕವರಿಗೆ ಕೋಟಿ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಮೈಸೂಡು ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿ ಆಗುತ್ತೇನೆ ಎಂದು ಆಗ್ರಹಿಸಿದರು.
ರಾಜ್ಯದ ಆನೆಗಳನ್ನು ಆಂಧ್ರಕ್ಕೆ ಕೊಟ್ಟ ವಿಚಾರದ ಬಗ್ಗೆ ಮಾತನಾಡಿ, ಅವನು ಯಾರೋ ಪವನ್ ಅನ್ನೋನು ಬಂದು ಕನ್ನಡದಲ್ಲಿ ಮಾತನಾಡಿಬಿಟ್ಟನಂತೆ, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಇವರಿಗೆ ಸ್ವರ್ಗ ಬಂದ ಹಾಗೆ ಆಗೋಗಿದೆ. ಅಲ್ಲಿ ತಿರುಪತಿ ಹೋದರೆ, ಸರಿಯಾಗಿ ನೋಡಿಕೊಳ್ಳಲ್ಲ. ಆನೆಗಳನ್ನು ನಾವು ಇಲ್ಲಿ ಸಾಕಿದ್ದೇವೆ. ನಾವು ಸಾಕಿದ ಮಗುವನ್ನ ಬೇರೆಯವರಿಗೆ ಕೊಟ್ರೆ ಹೇಗೆ? ನಾವು ಸಾಕಿದ್ದೇವೆ, ಪಳಗಿಸಿದ್ದೇವೆ. ನಮ್ಮಲ್ಲಿ ಯಾರು ದಿಕ್ಕಿಲ್ಲ ಅಂತಾ ಬೇವರ್ಸಿಗಳ ತರ ಕೊಡಬಾರದು ಎಂದು ತಿಳಿಸಿದರು.
ಪ್ರಾಣಿಗಳಿಗೆ ಮಾಡಿದಂತಹ ಮಹಾ ದ್ರೋಹ. ಎರಡು ರಾಜ್ಯದ ಸಂಬಂಧಗಳ ಬಾಂದವ್ಯಕ್ಕೆ ಆನೆ ಕೊಟ್ಟಿದ್ದಾರೆ ಎನ್ನುತ್ತಾರೆ. ರಾಜ್ಯಗಳ ಬಾಂಧವ್ಯಕ್ಕೆ ಆನೆಗಳನ್ನೇ ಯಾಕೆ ಕೊಡಬೇಕು, ಹುಲಿ ಕೊಡಲಿ. ಕರ್ನಾಟಕದಲ್ಲಿ ಆನೆಗಳು ಅದ್ಬುತವಾಗಿವೆ. ನಮ್ಮ ರಾಜ್ಯ ಬಿಟ್ಟು ಹೋಗುವಾಗ ಆನೆಗಳು ಕಣ್ಣೀರು ಹಾಕಿದ್ದವು. ಆನೆಗಳ ಕಣ್ಣಲ್ಲಿ ನೀರು ಬರಬಾರದು. ಪವನ್ ಕಲ್ಯಾಣ್‌ಗೆ ಹೇಳಿ ವಾಪಸ್ ಆನೆಗಳನ್ನ ಕರೆಸಿಕೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಆಗ್ರಹಿಸಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಅವರ ನೇತೃತ್ವದಲ್ಲಿ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ಕುರಿತು ಮಾತನಾಡಿದ ಅವರು, ರಾಮನಗರ ಎಂಬುದೊಂದು ಇತಿಹಾಸಪೂರ್ಣ ಹೆಸರಾಗಿದೆ. ರಾಮನ ವನವಾಸದ ಕಾಲದಲ್ಲಿ ಈ ಪ್ರದೇಶದಲ್ಲಿ ಅವರ ಓಡಾಟ ನಡೆದಿರುವ ಕುರಿತು ಪೌರಾಣಿಕ ದಾಖಲೆಗಳಿವೆ. ವಿಶ್ವಪ್ರಸಿದ್ಧ ಶೋಲೆ ಚಲನಚಿತ್ರದ ಚಿತ್ರೀಕರಣವೂ ಇಲ್ಲಿ ನಡೆದಿದ್ದು, ಈ ಪ್ರದೇಶಕ್ಕೆ ವಿಶೇಷ ಗುರುತನ್ನು ನೀಡಿದೆ. ಈ ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಅದು ತನ್ನ ಐತಿಹಾಸಿಕ ಮಹತ್ವವನ್ನು ಕಳೆದುಕೊಳ್ಳುತ್ತದೆ. ಇಡೀ ದೇಶದಲ್ಲಿ ಹೆಸರು ಪಡೆದಿರುವ ಈ ಜಿಲ್ಲೆಗೆ ಕೆಂಗಲ್ ಹನುಮಂತಯ್ಯರು ಹೆಸರಿಟ್ಟಿದ್ದನ್ನು ಮರೆಯಬಾರದು ಎಂದು ಆಗ್ರಹಿಸಿದರು.
ಬೆಂಗಳೂರು ದಕ್ಷಿಣಕ್ಕೆ ಸೇರಿಸಿರುವುದು ಸರ್ಕಾರದ ಪಾಪದ ಕೆಲಸ:
ಇದೀಗ ಐತಿಹಾಸಿಕ ರಾಮನಗರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುವುದು ಸರ್ಕಾರದ ಪಾಪದ ಕೆಲಸ. ಇದು ಯಾವುದೇ ಒಳ್ಳೆಯ ಬೆಳವಣಿಗೆ ಅಲ್ಲ. ಮರುನಾಮಕರಣದಿಂದ ಜಿಲ್ಲೆಯ ಸಾರ್ವಭೌಮತ್ವ ಮತ್ತು ಶಕ್ತಿ ಕಡಿಮೆಯಾಗುತ್ತದೆ. ಡಿ.ಕೆ. ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಮತ್ತು ವ್ಯಾಪಾರದ ಪರವಾಗಿ ಯೋಚಿಸುತ್ತಿದ್ದಾರೆ. ಅವರ ಚಿಂತನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಅವರು ಜಿಲ್ಲೆಯ ಹೆಸರನ್ನೇ ಬದಲಾಯಿಸಲು ಮುಂದಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಸವಾಲಿನ ರಾಜಕೀಯ ಮಾಡುವ ಬದಲು, ರಾಮನಗರದ ಇತಿಹಾಸ, ಪರಂಪರೆ ಮತ್ತು ಗೌರವ ಉಳಿಸಿಕೊಳ್ಳುವ ಕಾರ್ಯ ಮಾಡಬೇಕು. ಈ ಜಿಲ್ಲೆ ಮರುನಾಮಕರಣವಾದರೆ, ನಾವೆಲ್ಲರೂ ಬೀದಿಗೆ ಇಳಿಯಲು ತಯಾರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ