
ಬೆಂಗಳೂರು (ಮೇ.15) ವಿವಿಧ ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ ಕಳೆದ ಕೆಲ ವರ್ಷಗಳಿಂದ ಸಾರಿಗೆ ನೌಕರರು ಪ್ರತಿಭಟನೆ, ಮುಷ್ಕರ ನಡೆಸುತ್ತಲೇ ಬಂದಿದ್ದಾರೆ. ಆದರೆ ಸಾರಿಗೆ ನೌಕರರ ಬೇಡಿಕೆಗಳು ಪೂರ್ಣವಾಗಿ ಈಡೇರಿಕೆಯಾಗಿಲ್ಲ. ಬಿಕ್ಕಟ್ಟು ತೀವ್ರಗೊಂಡಾ ಎಸ್ಮಾ ಜಾರಿ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಇದ್ಯಾವುದಕ್ಕೂ ಜಗ್ಗದೆ ಇದೀಗ ಸಾರಿಗೆ ನೌಕರರು ಪ್ರತಿಭಟನೆ ತೀವ್ರಗೊಳಿಸಲು ಎಚ್ಚರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಮೇ.20ರಂದು ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಾರಿಗೆ ನೌಕರರ ಮುಖಂಡರು ಮಹತ್ವದ ನಿರ್ಧಾರ ಘೋಷಿಸಿದ್ದಾರೆ ಮೇ. 20 ರಂದು ಎಲ್ಲಾ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ. ರಾಜ್ಯ ಸರ್ಕಾರ ಪ್ರತಿ ಬಾರಿ ನಮ್ಮ ಬೇಡಿಕೆ ಈಡೇರಿಸಲು ಹಿಂದೇಟು ಹಾಕಿ ಸಂಧಾನ ನಡೆಸುತ್ತದೆ. ಈ ಬಾರಿ ಯಾವುದೇ ಮಾತುಕತೆಗೆ ಜಗ್ಗುವುದಿಲ್ಲ. ಬೇಡಿಕೆ ಈಡೇರಿಸದಿದ್ದರೆ ಭಾರಿ ಪ್ರತಿಭಟನೆ ನಡೆಸುವುದಾಗಿ ಸಾರಿಗೆ ಮುಖಂಡ ವಿಜಯ್ ಭಾಸ್ಕರ್ ಎಚ್ಚರಿಸಿದ್ದಾರೆ.
ಮೇ 20 ರಂದು ಬಸ್ ಮುಷ್ಕರ ನಡೆಸಿದರೆ, ಮೇ. 19 ರಂದು ಕಾಂಗ್ರೆಸ್ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶಿಸವುದಾಗಿ ಎಚ್ಚರಿಸಿದ್ದಾರೆ. ನಿಮ್ಮ ಸಾಧನೆ ನಮಗೆ ನೋವು ತಂದಿದೆ. ತುಮಕೂರಿನ ಸಮಾವೇಶದಲ್ಲಿ ನಮ್ಮ ಪ್ರತಿಭಟನೆ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಆಗಮಿಸುವ ರಾಹುಲ್ ಗಾಂಧಿ ನಮ್ಮ ಕಪ್ಪು ಬಾವುಟ ನೋಡಬೇಕು, ಪ್ರತಿಭಟನೆ ಬಿಸಿ ತಟ್ಟಬೇಕು ಎಂದು ವಿಜಯ್ ಭಾಸ್ಕರ್ ಹೇಳಿದ್ದಾರೆ. ಈ ಬಾರಿ ಮುಷ್ಕರ ತಣ್ಣಗೆ ಆಗುವುದಿಲ್ಲ. ಬೇಡಿಕೆ ಈಡೇರಿಕೆ ಮಾತ್ರ ಸರ್ಕಾರದ ಮುಂದಿರುವ ದಾರಿ ಎಂದು ವಿಜಯ್ ಭಾಸ್ಕರ್ ಎಚ್ಚರಿಸಿದ್ದಾರೆ.
ಸಾರಿಗೆ ನೌಕರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಪೈಕಿ ಇತ್ತೀಚೆಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ 12.5% ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದ ಆದೇಶ ವಿರುದ್ದ ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. 15%-25% ವರೆಗೆ ವೇತನ ಪರಿಷ್ಕರಿಸಲು ಜಂಟಿಕ್ರಿಯಾ ಸಮಿತಿ ಬೇಡಿಕೆ ಇಟ್ಟಿತ್ತು. ಇದೇ ವೇಳೆ 1-1-2024ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಸಾರಿಗೆ ನೌಕರರ ಜಂಟಿಕ್ರಿಯಾ ಸಮಿತಿ ಬೇಡಿಕೆ ಇಟ್ಟಿತ್ತು. ಆದರೆ ಸರ್ಕಾರ 12.50% ವೇತನ ಪರಿಷ್ಕರಿಸಿ ಸರ್ಕಾರ ಆದೇಶ ಮಾಡಿದೆ.
ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತಗೊಂಡಿದೆಂದು ಆಕ್ರೋಶ ವ್ಯಕ್ತಪಡಿಸಿತ್ತು. ಸರ್ಕಾರದ ಆದೇಶದ ಹೊರಬಂದ ಬೆನ್ನಲ್ಲೇ ಮೇ.20ರಂದು ಮುಷ್ಕರದ ಎಚ್ಚರಿಕೆ ನೀಡಿತ್ತು. ಇದೀಗ ಪ್ರತಿಭಟನೆ ತೀವ್ರಗೊಂಡಿದೆ. ಹೀಗಾಗಿ ಮೇ. 20 ರಂದು ಸಾರಿಗೆ ಬಸ್ ಲಭ್ಯವಿರುವ ಸಾಧ್ಯತೆಗಳು ಕ್ಷೀಣಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ