
ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸುವ ಮತ್ತು ಖಾಸಗಿ ಹೂಡಿಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧೆಡೆ 314 ಕೋಟಿ ರು. ಮೊತ್ತದ 18 ಹೊಸ ಹೋಟೆಲ್‌ಗಳ ಯೋಜನೆಗಳಿಗೆ 47.23 ಕೋಟಿ ರು. ಸಹಾಯಧನ ನೀಡಲು ಪ್ರವಾಸೋದ್ಯಮ ಇಲಾಖೆಯ ಎಂಪವರ್ಡ್ ಸಮಿತಿ ಅನುಮೋದನೆ ನೀಡಿದೆ. ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಗರದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ (ಎಂಪವರ್ಡ್) ಸಮಿತಿ ಸಭೆಯಲ್ಲಿ ಈ ಯೋಜನೆಗಳಿಗೆ ಸಹಾಯಧನ ಅನುಮೋದನೆ ನೀಡಲಾಯಿತು.
ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಹಾಗೂ 10 ಬಜೆಟ್ ಹೋಟೆಲ್‌ಗಳು ಸೇರಿ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ₹314.93 ಕೋಟಿ ಹೂಡಿಕೆಯಾಗಿದ್ದು, 1,542 ಉದ್ಯೋಗಗಳು ಸೃಷ್ಟಿಯಾಗಿದೆ. ಈ ಯೋಜನೆಗಳಿಗೆ ಅಂದಾಜು ₹47.23 ಕೋಟಿ ಸಹಾಯಧನ ನೀಡಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇದೇ ಸಭೆಯಲ್ಲಿ 2024–29ರ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 35 ಪ್ರೀಮಿಯಂ ಹಾಗೂ 43 ಬಜೆಟ್ ಹೋಟೆಲ್‌ಗಳು ಸೇರಿ ಒಟ್ಟು 78 ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು ಅನುಷ್ಠಾನಗೊಂಡ ಬಳಿಕ ರಾಜ್ಯದಲ್ಲಿ ₹1,080.97 ಕೋಟಿ ಹೂಡಿಕೆಯಾಗಲಿದ್ದು, 3,424 ಹೊಸ ಹೋಟೆಲ್ ಕೊಠಡಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ 3,707 ಉದ್ಯೋಗಗಳು ಸೃಷ್ಟಿಯಾಗಲಿವೆ.
ಹೊಸ ಹೋಟೆಲ್ ಯೋಜನೆಗಳಿಂದ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಹೆಚ್ಚಳವಾಗಲಿದೆ. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ರಾಮ್‌ಪ್ರಸಾತ್ ಮನೋಹರ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ