ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ!

By Kannadaprabha NewsFirst Published Apr 25, 2020, 7:57 AM IST
Highlights

ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ| ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭ| ಬೆಳಗ್ಗೆ 8.30ಕ್ಕೆ ರಾಮುಲು, ಸುಧಾಕರ್‌ರಿಂದ ಚಾಲನೆ

ಬೆಂಗಳೂರು(ಏ.25): ಕೊರೋನಾ ವೈರಸ್‌ ಮಹಾಮಾರಿಯಿಂದ ಗುಣಪಡಿಸುವ ಮಹತ್ವದ ಚಿಕಿತ್ಸೆಯಾಗಿರುವ ‘ಪ್ಲಾಸ್ಮಾ ಥೆರಪಿ’ ಪ್ರಯೋಗ ರಾಜ್ಯದಲ್ಲೂ ಶನಿವಾರ ನಡೆಯಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಶನಿವಾರ (ಏ.25) ಬೆಳಗ್ಗೆ 8.30ಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಚಾಲನೆ ನೀಡಲಿದ್ದಾರೆ.

ರಾಜ್ಯದಲ್ಲೂ ಶೀಘ್ರ ಪ್ಲಾಸ್ಮಾ ಥೆರಪಿ: ಕೇಂದ್ರ ಸರ್ಕಾರದ ಅನುಮತಿ!

ಕೊರೋನಾ ಸೋಂಕು ಗುಣಪಡಿಸುವ ಪ್ಲಾಸ್ಮಾ ಥೆರಪಿ ಆರಂಭಿಸುವ ಕುರಿತು ರಾಜ್ಯ ಸರ್ಕಾರದ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕ್ಯಾನ್ಸರ್‌ ತಜ್ಞ ಡಾ. ಯು.ಎಸ್‌. ವಿಶಾಲ್‌ ರಾವ್‌ ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಸೋಂಕಿತರ ಮೇಲೆ ಈಗಾಗಲೇ ಪ್ಲಾಸ್ಮಾ ಪ್ರಯೋಗ ಮಾಡಲಾಗುತ್ತಿದೆ. ಅಧಿಕೃತವಾಗಿ ಸಚಿವರು ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಕೇರಳ ರಾಜ್ಯದಲ್ಲಿ ಚಿಕಿತ್ಸೆ ನೀಡಿ ಯಶಸ್ವಿಯಾಗಿರುವುದರಿಂದ ರಾಜ್ಯದಲ್ಲಿಯೂ ಪ್ಲಾಸ್ಮಾ ಥೆರಪಿ ಆರಂಭವಾಗಲಿದ್ದು, ಇದು ಕೊರೋನಾ ಪೀಡಿತರಿಗೆ ವರದಾನ ಎಂದೇ ಭಾವಿಸಲಾಗುತ್ತಿದೆ.

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಏನಿದು ಪ್ಲಾಸ್ಮಾ ಥೆರಪಿ?:

ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡಿರುವವರ ದೇಹದಿಂದ ರಕ್ತ ಪಡೆದು ಅದರಲ್ಲಿನ ರೋಗ ನಿರೋಧಕ ಕಣಗಳನ್ನು (ಪ್ಲಾಸ್ಮಾ) ಬೇರ್ಪಡಿಸಿ ಅದನ್ನು ಮತ್ತೊಬ್ಬ ಸೋಂಕಿತ ರೋಗಿಯ ದೇಹಕ್ಕೆ ಸೇರಿರುವುದೇ ಪ್ಲಾಸ್ಮಾ ಥೆರಪಿ. ಕೊರೋನಾದಿಂದ ಚೇತರಿಸಿಕೊಂಡವರ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿದ್ದ ಕಣಗಳು ಇನ್ನೊಬ್ಬರ ದೇಹ ಸೇರಿದಾಗಲೂ ಇದೇ ಹೋರಾಟ ಮುಂದುವರಿಸಲಿದೆ. ಅಷ್ಟರೊಳಗೆ ರೋಗಿಯ ದೇಹದಲ್ಲಿಯೂ ಪ್ರತಿರೋಧ ಕಣಗಳು ಸಕ್ರಿಯವಾಗಲಿವೆ. ರೋಗಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ.

click me!