ಲಾಕ್‌ಡೌನ್‌ 3.0: ಕೇಂದ್ರದ ನಿಯಮ ಯಥಾವತ್‌ ಜಾರಿ!

By Suvarna NewsFirst Published May 3, 2020, 9:43 AM IST
Highlights

ಲಾಕ್‌ಡೌನ್‌ 3.0: ಕೇಂದ್ರದ ನಿಯಮ ಯಥಾವತ್‌ ಜಾರಿ| ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ|  ಜಿಲ್ಲೆಯಿಂದ ಜಿಲ್ಲೆಗೆ ಬಸ್‌ ಇಲ್ಲ, ಆಟೋ, ಟ್ಯಾಕ್ಸಿ, ಮಾಲ್‌, ದೇಗುಲ ಬಂದ್‌

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಮೇ 3ರ ನಂತರ ಎರಡು ವಾರ ಕಾಲ ದೇಶಾದ್ಯಂತ ಲಾಕ್‌ಡೌನ್‌ ವಿಸ್ತರಿಸಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಕೂಡ ಯಥಾವತ್ತಾಗಿ ಕೇಂದ್ರದ ಅಂಶಗಳನ್ನೇ ಒಳಗೊಂಡ ತನ್ನದೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಶನಿವಾರ ಆದೇಶ ಹೊರಡಿಸಿದೆ.

ಕೇಂದ್ರ ಮಾರ್ಗಸೂಚಿ ಅನುಸಾರ ಮೇ 4ರಿಂದ ಕೆಂಪು ವಲಯದ ಜಿಲ್ಲೆಯ ಒಳಗೆ ಮತ್ತು ಅಂತರ್‌ ಜಿಲ್ಲೆಗಳ ನಡುವೆ ಬಸ್ಸುಗಳ ಸೇವೆ ನಿರ್ಬಂಧ, ಆಟೋ, ಟ್ಯಾಕ್ಸಿ, ಸೈಕಲ್‌ ರಿಕ್ಷಾ ಸಂಚಾರ ನಿರ್ಬಂಧ (ಅನುಮತಿಸಿದ ಸೇವೆ ಹೊರತುಪಡಿಸಿ) ಸೇರಿದಂತೆ ಲಾಕ್‌ಡೌನ್‌ನ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದರೆ, ಈ ವಲಯಗಳ ಗ್ರಾಮೀಣ ಪ್ರದೇಶ ಹಾಗೂ ಟೌನ್‌ಶಿಪ್‌ ವ್ಯಾಪ್ತಿಯ ಕೈಗಾರಿಕೆಗಳನ್ನು ಶೇ.33ರಷ್ಟುಸಿಬ್ಬಂದಿಯೊಂದಿಗೆ ಆರಂಭಿಸಲು ಅನುಮತಿ ನೀಡಬಹುದು.

ಕಿತ್ತಲೆ ವಲಯದಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರನ್ನೊಳಗೊಂಡ ಕ್ಯಾಬ್‌, ಬೈಕ್‌ ಸಂಚಾರಕ್ಕೆ ಷರತ್ತಿನ ಅನುಮತಿ ಕಲ್ಪಿಸಲಾಗಿದೆ. ಇನ್ನು, ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ವಿನಾಯಿತಿ ಕಲ್ಪಿಸಿದ್ದು, ಆಯಾ ಬಸ್‌ ಡಿಪೋಗಳಲ್ಲಿರುವ ಅರ್ಧದಷ್ಟುಬಸ್ಸುಗಳನ್ನು ಕಾರ್ಯಾಚರಣೆಗಿಳಿಸಿ ಶೇ.50ರಷ್ಟುಸಾಮರ್ಥ್ಯದ ಪ್ರಯಾಣಿಕರೊಂದಿಗೆ ಸಂಚರಿಸಲು ಅವಕಾಶ ಕಲ್ಪಿಸಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಮಾರ್ಗಸೂಚಿ ಹೊರಡಿಸಿದ್ದಾರೆ.

ಉಳಿದಂತೆ ದೇಶಾದ್ಯಂತ ನಿರ್ಬಂಧ ವಿಧಿಸಿರುವ ಬಸ್‌ (ಹಸಿರು ಜಿಲ್ಲೆ ಬಿಟ್ಟು) ರೈಲು, ವಿಮಾನ, ಮೆಟ್ರೋ, ಶಾಲಾ ಕಾಲೇಜು, ಸಾಮಾಜಿಕ, ಧಾರ್ಮಿಕ ರಾಜಕೀಯ ಸಭೆ ಸಮಾರಂಭಗಳಿಗೆ ರಾಜ್ಯದ ಎಲ್ಲ ವಲಯಗಳಲ್ಲೂ ನಿರ್ಬಂಧ ಮುಂದುವರೆಸಲಾಗಿದೆ. 65 ವರ್ಷ ಮೇಲ್ಪಟ್ಟವರು, ಮಕ್ಕಳು, ಗರ್ಭಿಣಿಯರು ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಅಗತ್ಯವಲ್ಲದ ಎಲ್ಲ ಸೇವೆಗಳನ್ನೂ ರಾತ್ರಿ 7ರಿಂದ ಬೆಳಗ್ಗೆ 7ರ ವರೆಗೆ ಸ್ಥಗಿತಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ.

click me!