
ಬೆಂಗಳೂರು (ಏ.18): ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರಕು ಸಾಗಣೆ ಲಾರಿ ಮಾಲೀಕರು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಗುರುವಾರ ಅಂತ್ಯವಾಗಿದೆ. ಲಾರಿ ಮಾಲೀಕರ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದಿರುವುದಾಗಿ ಲಾರಿ ಮಾಲೀಕರು ಘೋಷಿಸಿದರು.
ಡೀಸೆಲ್ ಬೆಲೆ ಇಳಿಕೆ ಸೇರಿ ಪ್ರಮುಖವಾಗಿ 5 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಏ.14ರ ಮಧ್ಯರಾತ್ರಿಯಿಂದ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸರಕು ಸಾಗಣೆ ಲಾರಿ ಮುಷ್ಕರ ನಡೆಸಲಾಗುತ್ತಿತ್ತು. ಮುಷ್ಕರ ಕೈ ಬಿಡುವಂತೆ ಮಂಗಳವಾರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾರಿ ಮಾಲೀಕರೊಂದಿಗೆ ಸಭೆ ನಡೆಸಿದ್ದರು. ಆದರೆ, ಲಾರಿ ಮಾಲೀಕರು ಮುಷ್ಕರದಿಂದ ಹಿಂದೆ ಸರಿದಿರಲಿಲ್ಲ. ಗುರುವಾರ ಸಂಜೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಲಾರಿ ಮಾಲೀಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ, ಲಾರಿ ಮಾಲೀಕರ ಬೇಡಿಕೆಗಳ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ಅವುಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದಕ್ಕೆ ಒಪ್ಪಿದ ಲಾರಿ ಮಾಲೀಕರು, ಸಂಜೆಯಿಂದಲೇ ಮುಷ್ಕರ ಹಿಂಪಡೆದಿರುವುದಾಗಿ ಘೋಷಿಸಿದರು.
ಇದನ್ನೂ ಓದಿ: ಮಂಗಳೂರು: ವಕ್ಫ್ ಪ್ರತಿಭಟನೆ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ, ಎಲ್ಲೆಲ್ಲಿ?
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಡೀಸೆಲ್ ದರ ಹೆಚ್ಚಳವಾಗುತ್ತಿದ್ದರೂ ಲಾರಿ ಮಾಲೀಕರಿಗೆ ಸಮರ್ಪಕವಾಗಿ ಬಾಡಿಗೆ ದರ ನಿಗದಿ ಮಾಡಿಲ್ಲ. ಹೀಗಾಗಿ ಆಟೋ, ಟ್ಯಾಕ್ಸಿ ಮಾದರಿಯಲ್ಲಿ ಲಾರಿಗಳಿಗೂ ನಿಗದಿತ ಬಾಡಿಗೆ ಮೊತ್ತ ಸರ್ಕಾರದಿಂದಲೇ ನಿಗದಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಒಂದು ತಿಂಗಳಲ್ಲಿ ಲಾರಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಬಾಡಿಗೆ ದರ ನಿಗದಿ ಮಾಡಲು ಸಾರಿಗೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಅದರೊಂದಿಗೆ ಗಡಿ ಭಾಗದಲ್ಲಿನ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ತೆಗೆದುಹಾಕುವ ಸಂಬಂಧ ಹೊರರಾಜ್ಯಗಳಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಭರವಸೆ ಒಪ್ಪಿ ಮುಷ್ಕರ ಹಿಂಪಡೆಯಲಾಗಿದೆ ಎಂದರು. ನಗರದೊಳಗೆ ಸರಕು ಸಾಗಣೆ ವಾಹನಗಳ ಪ್ರವೇಶ ನಿಷೇಧದ ಸಮಯವನ್ನು ಸಡಿಲಗೊಳಿಸುವಂತೆ ಕೋರಲಾಗಿತ್ತು. ಅದಕ್ಕೆ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಕೃಷಿ ಪರವಾನಗಿ ಹೊಂದಿದ ಟ್ರ್ಯಾಕ್ಟರ್‌ಗಳು ನಗರದಲ್ಲಿ ಕಟ್ಟಡ ತ್ಯಾಜ್ಯ ಸಾಗಿಸುವ ಕೆಲಸ ಮಾಡುತ್ತಿರುವುದಕ್ಕೆ ತಡೆಯೊಡ್ಡಿ, ಅದಕ್ಕೆ ಲಾರಿಗಳನ್ನು ಬಳಸುವಂತೆ ನಿಯಮ ರೂಪಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಲಾರಿ ಮುಷ್ಕರಕ್ಕೆ ಸಿಟ್ಟಿಗೆದ್ದ Dk Shivakumar । Suvarna News
ಲಾರಿ ಮಾಲೀಕರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ಅದರಲ್ಲಿ ಸಾಧ್ಯವಾಗುವ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೇನೆ. ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ತೆರವಿಗೆ ಸಂಬಂಧಿಸಿ ಅಧ್ಯಯನ ನಡೆಸಿ ವರದಿ ಪಡೆದು ಮುಂದೆ ಕ್ರಮ ಕೈಗೊಳ್ಳಲಾಗುವುದು. ಹೀಗೆ ಲಾರಿ ಮಾಲೀಕರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದೇವೆ. ಹೀಗಾಗಿ ಲಾರಿ ಮುಷ್ಕರ ಹಿಂಪಡೆದಿದ್ದಾರೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ