Teachers recruitment: ಶಿಕ್ಷಕ 15000 ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರದಿಂದ ಚಾಲನೆ, ಹೊಸ ನಿಯಮಗಳೇನು?

Kannadaprabha News   | Kannada Prabha
Published : Jul 16, 2026, 05:51 AM IST
Karnataka Teachers jobs 2026 Recruitment of 15000 School rav

ಸಾರಾಂಶ

: ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಬೋಧನಾ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಮೂಲಕ 15 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದೆ.

ಬೆಂಗಳೂರು (ಜು.16): ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಬೋಧನಾ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಮೂಲಕ 15 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದೆ.

15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಅಧಿಕೃತ ಚಾಲನೆ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಅದಕ್ಕಾಗಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು 2026ನ್ನು ಪ್ರಕಟಿಸಲಾಗಿದೆ. ಈ ಕರಡು ಅಧಿಸೂಚನೆಯಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-I ಮತ್ತು II), ಗಣಕ ವಿಜ್ಞಾನ ಶಿಕ್ಷಕರು (ಹೊಸ ವೃಂದ) ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ಉದ್ದೇಶಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ 16 ಸದಸ್ಯರ ಪರೀಕ್ಷಾ ಪ್ರಾಧಿಕಾರ ರಚಿಸಲಾಗಿದೆ.

ಅಧಿಸೂಚನೆಯಲ್ಲಿರುವ ನಿಯಮಾವಳಿಯಂತೆ ಅಭ್ಯರ್ಥಿಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉಳಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ವೇಟೇಜ್‌ ಆಧಾರದ ಮೇಲೆ ಮೆರಿಟ್‌ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಅಭ್ಯರ್ಥಿಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ಪತ್ರಿಕೆಯಲ್ಲೂ ಕನಿಷ್ಠ ಶೇ. 35 ಅಂಕ ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷೆಯು ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮದಲ್ಲಿ ನಡೆಯಲಿದೆ.

ಇನ್ನು, ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕಿದೆ. ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಮತ್ತು ವಿಶೇಷ ಚೇತನರಿಗೆ 43 ವರ್ಷಗಳು, ಪ್ರವರ್ಗ-2ಎ, 2ಬಿ, 3ಎ, 3ಬಿಗೆ 41 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.

ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ವಸ್ತು ನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರಲಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರಡು ನಿಯಮಗಳ ಕುರಿತಂತೆ ಆಕ್ಷೇಪಣೆಗಳಿದ್ದರೆ ಅಥವಾ ಸಲಹೆಗಳಿದ್ದರೆ ರಾಜ್ಯಪತ್ರ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್‌.ಅಂಬೇಡ್ಕರ್‌ ವೀದಿ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಹುದ್ದೆಗಳ ವಿವರ:

ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿ) 900, ದೈಹಿಕ ಶಿಕ್ಷಕರು (1ರಿಂದ 8ನೇ ತರಗತಿ) 150, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ) 8500, ಗಣಕ ವಿಜ್ಞಾನ ಶಿಕ್ಷಕರು 500, ಪ್ರೌಢಶಾಲಾ ಸಹ ಶಿಕ್ಷಕರು 4500, ದೈಕ್ಷಿಕ ಶಿಕ್ಷಣ ಶಿಕ್ಷಕರು 450 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 6967, ಕಲ್ಯಾಣ ಕರ್ನಾಟಕೇತರ ಭಾಗದವರಿಗೆ 8033 ಸೇರಿ ಒಟ್ಟು 15 ಸಾವಿರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಗಿ 'ED'ತದಿಂದ ನಿರಾಳ: ಜಾರಕಿಹೊಳಿ ಸೋದರಿ, ಭಾವ ವಿರುದ್ಧ ಆತುರದ ಕ್ರಮ ಬೇಡ: ಹೈಕೋರ್ಟ್‌ ಮಹತ್ವದ ಆದೇಶ!
Bidadi Township row: ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ..; ಪಿಂಡ ಪಿಂಡ ಪ್ರದಾನ ಮಾಡಿದ ಬಿಡದಿ ರೈತರು!