
ರಾಜ್ಯ ಸರ್ಕಾರದ ವಿರುದ್ಧ ಬಿಡದಿ ರೈತರ ಆಕ್ರೋಶ । ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ: ಘೋಷಣೆ
ರಾಮನಗರ (ಜು.16): ಬಿಡದಿ ಟೌನ್‌ಶಿಪ್ ಯೋಜನೆ(Bidadi Township projec) ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು(Farmers protest) ಬುಧವಾರ ರಾಜ್ಯ ಸರ್ಕಾರದಿಂಧ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಬಿಡದಿ-ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಪಿಂಡ ಪ್ರದಾನದ ಅಣಕು ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ಬುಧವಾರ ತಟ್ಟೆಯಲ್ಲಿ ಮಣ್ಣು ಹಿಡಿದುಕೊಂಡು ವಾಹನಗಳನ್ನು ತಡೆದು ಪ್ರತಿಭಟಿಸಿದ ರೈತರು, ರಾಜ್ಯ ಸರ್ಕಾರಕ್ಕೆ ಪಿಂಡ ಪ್ರದಾನ ಮಾಡಿ ನಮ್ಮ ಪಾಲಿಗೆ ಸರ್ಕಾರ ಸತ್ತೋಗಿದೆ ಎಂದು ಘೋಷಣೆ ಕೂಗಿದರು.
ರೈತರ ಪ್ರತಿಭಟನೆಯನ್ನು ಜೆಡಿಎಸ್ ಕೃಪಾಪೋಷಿತ ನಾಟಕ ಎಂದು ಹೇಳುವ ಮೂಲಕ ಶಾಸಕ ಬಾಲಕೃಷ್ಣ ರೈತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸ್ವಾಭಿಮಾನದಿಂದ ಜೀವನ ಮಾಡುತ್ತಿರುವ ಮಹಿಳೆಯರನ್ನು ನಾಟಕ ಮಾಡುವವರು ಅಂದಿದ್ದಾರೆ. ಕೂಡಲೇ ಬಾಲಕೃಷ್ಣ ರೈತ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದರೆ ಬಾಲಕೃಷ್ಣ ಮನೆ ಮುಂದೆ ಧರಣಿ ನಡೆಸುವುದಾಗಿ ರೈತ ಮಹಿಳೆಯರು ಎಚ್ಚರಿಕೆ ನೀಡಿದರು.
ಕಳೆದ 495 ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯೋಜನೆಯನ್ನು ವಿರೋಧ ಮಾಡುತ್ತಿದ್ದೇವೆ. ಆದರೂ ಸಹ ನಮ್ಮ ಮಾತಿಗೆ ಮನ್ನಣೆ ನೀಡದೆ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ನೀಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದರು.
ರೈತರು ರಸ್ತೆ ಮಧ್ಯದಲ್ಲಿ ಕುರ್ಚಿಗಳ ಮೇಲೆ ಕುಳಿತು ಒನಕೆ ಹಿಡಿದು ಪ್ರತಿಭಟಿಸಿದ್ದರಿಂದ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಪೊಲೀಸರು ರೈತರ ಮನವೊಲೀಸಿ ರಸ್ತೆ ತಡೆ ತೆರವುಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ