
ಬೆಂಗಳೂರು (ಜ.24): ಪ್ರತಿವರ್ಷ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತನ್ನ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯ ಮೂಲಕ ಗಮನ ಸೆಳೆಯುತ್ತಿದ್ದ ಕರ್ನಾಟಕಕ್ಕೆ ಈ ಬಾರಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಾಗುವ ಸ್ತಬ್ಧಚಿತ್ರಗಳ ಪಟ್ಟಿಯಿಂದ ಕರ್ನಾಟಕದ ಹೆಸರನ್ನು ಕೈಬಿಟ್ಟಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ರಾಜ್ಯ ಸರ್ಕಾರ ಈ ಬಾರಿ 'ಮಿಲೆಟ್ಸ್ ಟು ಮೈಕ್ರೋಚಿಪ್' (ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ) ಎಂಬ ವಿನೂತನ ವಿಷಯದಡಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿತ್ತು. ಕೃಷಿ ಮತ್ತು ತಂತ್ರಜ್ಞಾನ ಎರಡರಲ್ಲೂ ರಾಜ್ಯ ಸಾಧಿಸಿರುವ ಪ್ರಗತಿಯನ್ನು ಜಗತ್ತಿಗೆ ಸಾರುವ ಉದ್ದೇಶ ಇದಾಗಿತ್ತು. ಆದರೆ, ಸಮಯದ ನಿರ್ಬಂಧ ಮತ್ತು ಪರ್ಯಾಯ ರಾಜ್ಯಗಳಿಗೆ ಅವಕಾಶ ನೀಡುವ ನೀತಿಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇದಕ್ಕೆ ಪರೇಡ್‌ನಲ್ಲಿ ಅವಕಾಶ ನಿರಾಕರಿಸಿದೆ. ಬದಲಾಗಿ ಕೆಂಪುಕೋಟೆಯಲ್ಲಿ ನಡೆಯುವ 'ಭಾರತ್ ಪರ್ವ್'ನಲ್ಲಿ ಪ್ರದರ್ಶಿಸಲು ಸೂಚಿಸಿದೆ.
ಈ ಬೆಳವಣಿಗೆಯ ಕುರಿತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. 'ಇದು ಕರ್ನಾಟಕದ ಏಳು ಕೋಟಿ ಜನರಿಗೆ ಮತ್ತು ಮತದಾರರಿಗೆ ಮಾಡುತ್ತಿರುವ ಅಪಮಾನ. ನೆರೆಯ ಕೇರಳ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿದೆಯೇ? 'ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಸಂಸದರ ವಿರುದ್ಧ ಹರಿಹಾಯ್ದ ಅವರು, 'ನಮ್ಮ ರಾಜ್ಯದ ಪರ ಧ್ವನಿ ಎತ್ತದ ನಾಲಾಯಕ್ ಸಂಸದರನ್ನು ಜನ ಗಮನಿಸಬೇಕಿದೆ. ತೇಜಸ್ವಿ ಸೂರ್ಯ, ಸೋಮಣ್ಣ, ಅಶೋಕ್ ಅವರೇ.. ನಮ್ಮ ಟ್ಯಾಬ್ಲೋಗೆ ಆಗಿರುವ ಅನ್ಯಾಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಅಧಿಕಾರಕ್ಕಾಗಿ ಹೋರಾಡುವ ನೀವು ರಾಜ್ಯದ ಅಸ್ಮಿತೆಗಾಗಿ ಧ್ವನಿ ಎತ್ತಿ' ಎಂದು ಸವಾಲು ಹಾಕಿದ್ದಾರೆ.
ಸಂಸತ್ತಿನಲ್ಲಿ ರಾಜ್ಯದ ಪ್ರತಿನಿಧಿಗಳು ಮೌನವಾಗಿರುವುದು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಪ್ರದೀಪ್ ಈಶ್ವರ್ ಟೀಕಿಸಿದ್ದಾರೆ. 30 ಸ್ತಬ್ಧಚಿತ್ರಗಳಲ್ಲಿ 17 ಚಿತ್ರಗಳು ಕರ್ತವ್ಯ ಪಥದಲ್ಲಿ ಸಾಗಲಿವೆ, ಆದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವನ್ನು ಸೈಡ್‌ಲೈನ್ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗಣರಾಜ್ಯೋತ್ಸವದ ಸಂಭ್ರಮದ ನಡುವೆಯೇ ಈ 'ಸ್ತಬ್ಧಚಿತ್ರ ರಾಜಕೀಯ' ಈಗ ದೆಹಲಿ ಮತ್ತು ಬೆಂಗಳೂರು ನಡುವಿನ ಸಮರಕ್ಕೆ ನಾಂದಿ ಹಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ