'ಪದಗ್ರಹಣಕ್ಕೆ ಸ್ಲೀವ್‌ಲೆಸ್‌ ರವಿಕೆ ತೊಡಬೇಡಿ': ಲಿಪ್‌ಸ್ಟಿಕ್‌, ಸ್ಕರ್ಟ್‌ಗೆ ಕಾಂಗ್ರೆಸ್‌ ಬ್ಯಾನ್‌!

By Web DeskFirst Published Nov 18, 2018, 8:21 AM IST
Highlights

ಪದ​ಗ್ರ​ಹಣ ಸಮಾ​ರಂಭಕ್ಕೆ ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಬೌಸ್‌ ತೊಡಬೇಕು. ಲಿಪ್‌ಸ್ಟಿಕ್‌ ಹಚ್ಚಿ​ಕೊ​ಳ್ಳು​ವುದು ಸೇರಿದಂತೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳಬಾ​ರದು. ಭಾರಿ ಒಡ​ವೆ​ಗ​ಳನ್ನು ತೊಡ​ಬಾ​ರದು. ಸ್ಕರ್ಟ್‌ ಹಾಗೂ ಸ್ಲೀವ್‌ಲೆಸ್‌ ಉಡುಪು ತೊಟ್ಟು ಬರಬಾ​ರದು ಎಂದು ಮಹಿಳಾ ಕಾರ್ಯ​ಕ​ರ್ತ​ರಿಗೆ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಡ್ರೆಸ್‌ ಕೋಡ್‌ ವಿಧಿ​ಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು[ನ.18]: ತಮ್ಮ ಪದ​ಗ್ರ​ಹಣ ಸಮಾ​ರಂಭಕ್ಕೆ ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಬೌಸ್‌ ತೊಡಬೇಕು. ಲಿಪ್‌ಸ್ಟಿಕ್‌ ಹಚ್ಚಿ​ಕೊ​ಳ್ಳು​ವುದು ಸೇರಿದಂತೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳಬಾ​ರದು. ಭಾರಿ ಒಡ​ವೆ​ಗ​ಳನ್ನು ತೊಡ​ಬಾ​ರದು. ಸ್ಕರ್ಟ್‌ ಹಾಗೂ ಸ್ಲೀವ್‌ಲೆಸ್‌ ಉಡುಪು ತೊಟ್ಟು ಬರಬಾ​ರದು ಎಂದು ಮಹಿಳಾ ಕಾರ್ಯ​ಕ​ರ್ತ​ರಿಗೆ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಡ್ರೆಸ್‌ ಕೋಡ್‌ ವಿಧಿ​ಸಿದ್ದಾರೆ ಎನ್ನ​ಲಾ​ಗಿದ್ದು, ಇದು ಪಕ್ಷ​ದಲ್ಲೇ ವ್ಯಾಪಕ ಟೀಕೆಗೆ ಒಳ​ಗಾ​ಗಿ​ದೆ.

ನೂತನ ಮಹಿಳಾ ಕಾಂಗ್ರೆಸ್‌ ಅಧ್ಯ​ಕ್ಷ​ರಾಗಿ ಆಯ್ಕೆ​ಯಾ​ಗಿ​ರುವ ಪುಷ್ಪಾ ಅವರ ಪದ​ಗ್ರ​ಹಣ ಸಭೆಯನ್ನು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜಯಂತಿ ದಿನವಾದ ನ.19ರಂದು ಆಯೋ​ಜನೆ ಮಾಡ​ಲಾ​ಗಿದೆ. ಈ ಸಭೆ ಪೂರ್ವ​ಭಾವಿ ಸಿದ್ಧತೆ ನಡೆ​ಸಲು ಇತ್ತೀ​ಚೆಗೆ ಆಯೋ​ಜಿ​ಸ​ಲಾ​ಗಿದ್ದ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯ​ಕ್ಷರ ಸಭೆ​ಯಲ್ಲಿ ಪುಷ್ಪಾ ಅವರು ಈ ಸೂಚನೆ ನೀಡಿ​ದ್ದಾರೆ ಎನ್ನ​ಲಾ​ಗಿ​ದೆ.

ಇದು ತೀವ್ರ ವಿವಾದ ಹುಟ್ಟು​ಹಾ​ಕಿದೆ. ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಪುಷ್ಪಾ ಅವರು ಪದಗ್ರಹಣ ಸಮಾರಂಭಕ್ಕೆ ಕಾರ್ಯಕರ್ತರು ಮೈತುಂಬಾ ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಬೌಸ್‌ ತೊಟ್ಟು ಬರಬೇಕು. ತುಟಿಗೆ ಲಿಪ್‌ಸ್ಟಿಕ್‌ ಹಚ್ಚುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಮೇಕಪ್‌ ಮಾಡಿಕೊಂಡು, ಒಡವೆ ಆಭರಣ ತೊಟ್ಟುಕೊಂಡು ಅದ್ಧೂರಿಯಾಗಿ ಬರಬಾರದು, ಸ್ಕರ್ಟ್‌, ಸ್ಲೀವ್‌ಲೆಸ್‌ ಉಡುಪು ತೊಟ್ಟು ಬರುವಂತಿಲ್ಲ ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ.

ಇದಕ್ಕೆ ಪಕ್ಷದ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತ​ವಾ​ಗಿ​ದೆ. ರಾಜ್ಯ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆಯಾದ ತಕ್ಷಣ ಇಂತಹ ಸೂಚನೆ ನೀಡುವುದು ಎಷ್ಟುಸರಿ? ನಾವು ಯಾವ ರೀತಿ ದಿರಿಸು ತೊಡಬೇಕು ಎಂದು ಅಧ್ಯಕ್ಷೆ ತೀರ್ಮಾನ ಮಾಡಬೇಕಾ? ಇಷ್ಟವಾದ ಬಟ್ಟೆತೊಟ್ಟು, ಅಲಂಕಾರ ಮಾಡಿಕೊಂಡು ಬರುವುದು ಅವರವರ ವೈಯಕ್ತಿಕ ವಿಚಾರ. ಇಂತಹ ವಿಚಾರಗಳಲ್ಲಿ ಅಧ್ಯಕ್ಷೆಯಾದವರು ಮೂಗು ತೂರಿಸುವುದು, ವಸ್ತ್ರಸಂಹಿತೆಯ ನಿರ್ಬಂಧ ಹೇರುವುದು ಸರಿಯಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

ಆದರೆ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ವಿವಾದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಗ್ರಹಣ ಸಮಾರಂಭಕ್ಕೆ ಇಂತಹದ್ದೇ ವಸ್ತ್ರ ತೊಟ್ಟು ಬರಬೇಕೆಂದು ಮಹಿಳಾ ಘಟಕದ ಅಧ್ಯಕ್ಷರು ಹೇಳಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ನಾನೇ ಲಿಪ್‌ಸ್ಟಿಕ್‌ ಹಚ್ತೇನೆ, ಏಕೆ ಬೇಡ ಎನ್ನಲಿ?: ಪುಷ್ಪಾ

ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಷ್ಪಾ ಮಂಜುನಾಥ್‌, ನನ್ನ ಪದಗ್ರಹಣ ಸಮಾರಂಭಕ್ಕೆ ಆಗಮಿಸುವ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ನಾನು ಯಾವುದೇ ವಸ್ತ್ರಸಂಹಿತೆಯ ನಿರ್ಬಂಧ ಹೇರಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥಮಾಡಿಕೊಂಡು ಯಾರೋ ಈ ರೀತಿಯ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋ​ಪಿ​ಸಿ​ದ್ದಾ​ರೆ.

ಇತ್ತೀಚೆಗೆ ನಡೆದ ಬ್ಲಾಕ್‌ ಕಾಂಗ್ರೆಸ್‌ ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪದಾಧಿಕಾರಿಗಳು ತಾವು ಮತ್ತು ತಮ್ಮ ಬೆಂಬಲಿಗರು ಒಂದೊಂದು ರೀತಿಯ, ಬಣ್ಣದ ಸೀರೆ ಉಟ್ಟು ಬರುತ್ತೇವೆ ಎಂದು ಹೇಳಿದರು. ಅದಕ್ಕೆ ನಾನು ಒಪ್ಪಿ ಹಾಗೆಯೇ ಬನ್ನಿ ಎಂದು ಹೇಳಿದೆ. ಆದರೆ, ನ.19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ದಿನವೂ ಆಗಿರುವುದರಿಂದ ಶಿಸ್ತಿನಿಂದ ಬನ್ನಿ, ಮದುವೆಗೆ ಬರುವಂತೆ ರೇಷ್ಮೆ ಸೀರೆ, ಸಿಕ್ಕಾಪಟ್ಟೆಒಡವೆ ತೊಟ್ಟು ಬರಬೇಡಿ ಎಂದು ಹೇಳಿದ್ದೆ ಅಷ್ಟೆ. ಯಾರಿಗೂ ಅಲಂಕಾರ ಮಾಡಿಕೊಳ್ಳಬೇಡಿ, ಲಿಪ್‌ಸ್ಟಿಕ್‌ ಹಚ್ಚಬೇಡಿ ಎಂದೆಲ್ಲಾ ಹೇಳಿರಲಿಲ್ಲ. ನಾನೇ ಅಲಂಕಾರ ಮಾಡಿಕೊಳ್ಳುತ್ತೇನೆ, ಸ್ವಲ್ಪ ಲಿಪ್‌ಸ್ಟಿಕ್‌ ಅನ್ನೂ ಹಚ್ಚುತ್ತೇನೆ. ಮಹಿಳೆಯರು ಅಲಂಕಾರ ಮಾಡಿಕೊಂಡು ಬಂದರೇ ಚೆನ್ನ. ಹೀಗಿರುವಾಗ ನಾನೇಕೆ ಆ ರೀತಿ ಹೇಳಲಿ? ಚೆನ್ನಾಗಿ ಬನ್ನಿ ಎಂದು ಹೇಳಿದ್ದೇನೆಯೇ ಹೊರತು ಯಾವುದೇ ವಸ್ತ್ರ ಸಂಹಿತೆಯ ಕಟ್ಟುಪಾಡು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

click me!