
ಬೆಂಗಳೂರು (ಜೂ.24): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಆನ್‌ಲೈನ್ ಸೇವೆಗಳ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುವ ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳ ಕಾಲ ಭಾರಿ ತೊಂದರೆ ಎದುರಾಗುವ ಸಾಧ್ಯತೆಯಿದೆ. ವಿವಿಧ ಇಲಾಖೆಗಳ ಡಿಜಿಟಲ್ ಸೇವೆಗಳಿಗೆ ಕೇಂದ್ರಬಿಂದುವಾಗಿರುವ 'ರಾಜ್ಯ ಡಾಟಾ ಸೆಂಟರ್'ನಲ್ಲಿ (State Data Center) ಮಹತ್ವದ ಮೂಲಸೌಕರ್ಯ ನವೀಕರಣ ಹಾಗೂ ಭದ್ರತಾ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಡಾಟಾ ಸೆಂಟರ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಡಿಜಿಟಲ್ ನೆಟ್‌ವರ್ಕ್ ಈ ಡಾಟಾ ಸೆಂಟರ್ ಮೂಲಕವೇ ಕಾರ್ಯನಿರ್ವಹಿಸುವುದರಿಂದ, ಮುಂದಿನ 48 ಗಂಟೆಗಳ ಕಾಲ ಕೆಳಕಂಡ ಪ್ರಮುಖ ಸೇವೆಗಳಲ್ಲಿ ಸಾರ್ವಜನಿಕರಿಗೆ ಭಾರಿ ಅಡಚಣೆಯಾಗಲಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕೃತ ವೆಬ್ ಪೋರ್ಟಲ್‌ಗಳು ಓಪನ್ ಆಗುವುದಿಲ್ಲ. ಅದರೊಂದಿಗೆ ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ದಾಖಲೆಗಳ ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಡೌನ್‌ಲೋಡ್ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಗ್ಯಾರಂಟಿ ಹಾಗೂ ಜನಕಲ್ಯಾಣ ಯೋಜನೆಗಳ ಡೇಟಾಬೇಸ್ ಸಿಗದ ಕಾರಣ ಪೂರಕ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಇಲಾಖೆಗಳ ಆಂತರಿಕ 'ಇ-ಆಫೀಸ್' ವ್ಯವಸ್ಥೆ ಕಾರ್ಯನಿರ್ವಹಿಸದ ಕಾರಣ ಕಚೇರಿಗಳಲ್ಲಿ ಸರ್ಕಾರಿ ಕಡತಗಳ ವರ್ಗಾವಣೆ ಹಾಗೂ ಆಡಳಿತಾತ್ಮಕ ಕೆಲಸಗಳು ತಾತ್ಕಾಲಿಕವಾಗಿ ನಿಲ್ಲಲಿವೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಡಿಜಿಟಲ್ ಸೇವೆಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಡಾಟಾ ಸಂಸ್ಕರಣಾ ಸಾಮರ್ಥ್ಯ, ಸೈಬರ್ ಭದ್ರತೆ ಮತ್ತು ಸರ್ವರ್ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ತಜ್ಞರ ಸಲಹೆ ಮೇರೆಗೆ ಈ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
"ಈ ಎರಡು ದಿನಗಳ ಅವಧಿಯಲ್ಲಿ ಸಾರ್ವಜನಿಕರು ಸರ್ಕಾರಿ ಆನ್‌ಲೈನ್ ಸೇವೆಗಳನ್ನು ಬಳಸುವಾಗ ಕೆಲವು ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬೇಕಾಗಬಹುದು. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಬಾರದೆಂಬ ಉದ್ದೇಶದಿಂದಲೇ ರಜಾ ದಿನಗಳಲ್ಲಿ ಈ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು" ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಇದು ಕೇವಲ ತಾತ್ಕಾಲಿಕ ಅಸೌಕರ್ಯವಾಗಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ರಾಜ್ಯದ ಇ-ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆಗೊಳ್ಳಲಿದೆ. ಭವಿಷ್ಯದಲ್ಲಿ ನಾಗರಿಕರಿಗೆ ಇನ್ನಷ್ಟು ವೇಗವಾಗಿ, ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಮತ್ತು ಸೈಬರ್ ದಾಳಿಗಳಿಂದ ಸುರಕ್ಷಿತವಾಗಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ನವೀಕರಣ ಅತ್ಯಂತ ಅಗತ್ಯವಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ತಂತ್ರಜ್ಞಾನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲೇ ಅತ್ಯುತ್ತಮ ಡಿಜಿಟಲ್ ಆಡಳಿತ ವ್ಯವಸ್ಥೆ ಹೊಂದಿರುವ ರಾಜ್ಯವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ