
ಬೆಂಗಳೂರು (ಜೂ.24): ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾನೂನು ಹೋರಾಟ ತೀವ್ರಗೊಂಡಿದೆ. ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು ಪಾಟೀಸವಾಲು (Cross-examination) ನಡೆಸಲು ಅನುಮತಿ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 2ಕ್ಕೆ ಮುಂದೂಡಿದೆ.
ಈ ಹಿಂದೆ ಜನವರಿ ತಿಂಗಳಿನಲ್ಲಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್, ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು 'ಪ್ರತಿಕೂಲ ಸಾಕ್ಷಿ' (Hostile Witness) ಎಂದು ಪರಿಗಣಿಸಿ, ಅವರನ್ನು ಪಾಟೀಸವಾಲು ನಡೆಸಲು ಅನುಮತಿ ನೀಡುವಂತೆ ಕೋರಿತ್ತು. ಆದರೆ, ಪ್ರಾಸಿಕ್ಯೂಷನ್‌ನ ಈ ಮನವಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿತ್ತು. ಕೆಳಹಂತದ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಹಾಜರಾಗಿ, ವಾದ ಮಂಡಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ದರ್ಶನ್ ಮತ್ತು ತಂಡದ ವಿರುದ್ಧದ ಈ ಕೊಲೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು, ಸಾಕ್ಷಿಗಳ ವಿಚಾರಣೆ ಮತ್ತು ಪಾಟೀಸವಾಲು ಪ್ರಕ್ರಿಯೆಗಳು ಅತ್ಯಂತ ನಿರ್ಣಾಯಕವಾಗಿವೆ. ರತ್ನಪ್ರಭಾ ಅವರ ಸಾಕ್ಷ್ಯವು ಈ ಪ್ರಕರಣದಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಹೈಕೋರ್ಟ್ ಜುಲೈ 2 ರಂದು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ