Karnataka SSLC results 2026: ಇಂದು ಎಸ್‌ಎಸ್‌ಎಲ್ಸಿ ರಿಸಲ್ಟ್‌: 3ನೇ ಭಾಷೆಗೆ ಗ್ರೇಡ್‌ ಬದಲು, ಅಂಕ

Kannadaprabha News   | Kannada Prabha
Published : Apr 23, 2026, 05:50 AM IST
Karnataka SSLC Results Today

ಸಾರಾಂಶ

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ ಪ್ರಕಟವಾಗಲಿದೆ. ಹೈಕೋರ್ಟ್ ಆದೇಶದಂತೆ, ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕಗಳನ್ನು ಪರಿಗಣಿಸಿ ಫಲಿತಾಂಶ ನೀಡಲು ಸರ್ಕಾರ ನಿರ್ಧಾರ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು karresults.nic.in ನಲ್ಲಿ ನೋಡಬಹುದು

ಬೆಂಗಳೂರು (ಏ.23): 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ಮೊದಲೇ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಅದರಂತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಇನ್ನು ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಹೈಕೋರ್ಟ್‌ ಆದೇಶದಂತೆ ಗ್ರೇಡ್‌ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್‌ ಮಾತ್ರ ನೀಡುವ ಪರಿಷ್ಕೃತ ಮೌಲ್ಯಮಾಪನ ಪದ್ಧತಿ ಬಳಸದಂತೆ ಹೈಕೋರ್ಟ್‌ ಆದೇಶ ನೀಡಿದೆ. ಪರೀಕ್ಷೆ ನಡೆದ ನಂತರ ಹೊಸ ಪದ್ಧತಿ ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಈ ಕುರಿತು ಅಧಿಸೂಚನೆ ಕೂಡ ಹೊರಡಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂಕಗಳನ್ನೇ ನೀಡಲು ತೀರ್ಮಾನಿಸಲಾಗಿದೆ.

ನ್ಯಾಯಾಲಯ ಆದೇಶ ಮತ್ತು ಇಲಾಖೆಯ ನಿರ್ಧಾರದ ಕುರಿತು ಬುಧವಾರ ಸಂಜೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಅಡ್ವೊಕೇಟ್‌ ಜನರಲ್ ಶಶಿಕಿರಣ್‌ ಶೆಟ್ಟಿ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಮಾನ ಪಾಲನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕೃಪಾಂಕದ ಬಗ್ಗೆ ಇಂದು ನಿರ್ಧಾರ:

ಗ್ರೇಡ್‌ ನೀಡುವುದಾಗಿ ಹೇಳಿದ್ದರಿಂದ ಹೆಚ್ಚಿನ ಮಕ್ಕಳು ಪರೀಕ್ಷೆ ಬರೆಯುವ ವೇಳೆ ತೃತೀಯ ಭಾಷೆಗೆ ಹೆಚ್ಚು ಗಮನ ನೀಡಿರಲಿಲ್ಲ. ಅಂಕಗಳಿಗೆ ಆದ್ಯತೆ ಇಲ್ಲದ ಕಾರಣ ಹಲವು ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಪರೀಕ್ಷೆ ಬರೆದಿದ್ದರು. ಈಗ ಅಂತಹವರಿಗೆ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಿ ಅಂಕ ನೀಡಿದರೆ ಅವರ ಭವಿಷ್ಯಕ್ಕೆ ಕುತ್ತು ಉಂಟಾಗಬಹುದು. ಹೀಗಾಗಿ ಕೃಪಾಂಕ ನೀಡುವ ಸಾಧ್ಯತೆಯಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ‘ಕೃಪಾಂಕ ನೀಡುವ ವಿಚಾರವನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುತ್ತದೆ. ಸದ್ಯಕ್ಕೆ ಯಾವುದೇ ವಿಷಯವನ್ನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಫಲಿತಾಂಶವೇ ಉತ್ತರ ನೀಡುತ್ತದೆ’ ಎಂದಷ್ಟೇ ಹೇಳಿದರು.

ಮಾ.18 ರಿಂದ ಏ.2 ರವರೆಗೆ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ 8.65 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ನಿಮ್ಮ ಫಲಿತಾಂಶವನ್ನು ಈ ವೆಬ್‌ನಲ್ಲಿ ಪರೀಕ್ಷಿಸಿಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವು https://karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಜತೆಗೆ karnatakaOne ಮೊಬೈಲ್‌ ಆ್ಯಪ್‌ ಮೂಲಕವೂ ಫಲಿತಾಂಶ ಪಡೆಯಬಹುದು. ಜತೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಅಥವಾ ಎಸ್ಎಂಎಸ್‌ ಸಂದೇಶದ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ರವಾನಿಸಲಿದೆ.

ಮಕ್ಕಳೇ, ಡಿಜಿಲಾಕರ್‌ಮೂಲಕ ಅಂಕ ಪಟ್ಟಿ ಹೀಗೆ ಪಡೆದುಕೊಳ್ಳಿ

ಈ ವರ್ಷ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿ ಡಿಜಿಲಾಕರ್‌ ಮೂಲಕ ಏ.23 ರಂದು ಮಧ್ಯಾಹ್ನ 12 ಗಂಟೆಗೆ ಲಭ್ಯವಿರುವಂತೆ ಮಾಡಲಾಗುವುದು. https://www.digilocker.gov.in ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡಿಜಿಲಾಕರ್‌ನಿಂದ ಅಂಕ ಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವ ಪ್ರಕ್ರಿಯೆಯನ್ನು https://tinyurl.com/mw84wmh9 ಲಿಂಕ್‌ ಬಳಸಿ ತಿಳಿದುಕೊಳ್ಳಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ವರ್ಷ ಮತ್ತೆಗ್ರೇಡ್‌ ವ್ಯವಸ್ಥೆ ಜಾರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯದ ಆದೇಶ ಹಾಗೂ ವಸ್ತು ಸ್ಥಿತಿ ಬಗ್ಗೆ ವಿವರಿಸಿದ್ದೇವೆ. ಅವರು ಈ ವರ್ಷ ನ್ಯಾಯಾಲಯ ಆದೇಶದಂತೆ ನಡೆದುಕೊಳ್ಳಿ. ಮುಂದಿನ ವರ್ಷ ಅದಕ್ಕೆ (ಗ್ರೇಡ್‌ ವ್ಯವಸ್ಥೆ ಜಾರಿಗೆ) ಏನು ವ್ಯವಸ್ಥೆ ಮಾಡಿಕೊಳ್ಳಬೇಕೋ ಮಾಡಿ. ತೊಂದರೆ ಇಲ್ಲ ಎಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಆ ಮೂಲಕ ಮುಂದಿನ ವರ್ಷ ತೃತೀಯ ಭಾಷೆಗೆ ಗ್ರೇಡ್‌ ವ್ಯವಸ್ಥೆ ಜಾರಿ ಆಗುವ ಸಾಧ್ಯತೆಯಿದ್ದು, ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟತೆ ಸಿಗಲಿದೆ.

ಸಂತೋಷದ ಫಲಿತಾಂಶ

ಮುಖ್ಯಮಂತ್ರಿಗಳಿಗೆ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ಫಲಿತಾಂಶದ ಬಗ್ಗೆ ತುಂಬಾ ಖುಷಿಯಾಗಿದ್ದಾರೆ. ಗುರುವಾರ ಫಲಿತಾಂಶ ಪ್ರಕಟವಾದ ಬಳಿಕ ಎಲ್ಲರಿಗೂ ಸಂತೋಷ ಆಗುತ್ತದೆ. ಮಕ್ಕಳು ಸಹ ಉತ್ತಮ ರೀತಿ ಉತ್ತರ ಕೊಟ್ಟಿದ್ದಾರೆ. ನಾವು ಫಾಸ್ಟ್‌ ಇರುವುದರಿಂದ ಒಂದು ದಿನ ಮೊದಲೇ ಫಲಿತಾಂಶ ನೀಡುತ್ತಿದ್ದೇವೆ.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Middle East crisis: ರಸಗೊಬ್ಬರ ಬೇಕಿದ್ರೆ ಎಫ್‌ಐಡಿ ತೋರಿಸೋದು ಕಡ್ಡಾಯ!
Karnataka CET exam 2026 ಸಿಇಟಿ: ಇಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ