
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಸಾರ್ವಜನಿಕ ಪರೀಕ್ಷೆಗಳು ಹಾಗೂ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರವು ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವರ್ಗಾಯಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಮುಖ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದ್ದು, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯ ಪಾವಿತ್ರ್ಯ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಅಚಲ ಬದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪರೀಕ್ಷೆಗಳು ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ, ಅಕ್ರಮ ವಿಧಾನಗಳು ಅಥವಾ ಯಾವುದೇ ರೀತಿಯ ದುರುಪಯೋಗ ನಡೆದಿರುವ ಆರೋಪಗಳು ಕಂಡುಬಂದರೆ, ಅವುಗಳನ್ನು ಯಾವುದೇ ವ್ಯಕ್ತಿಯ ಸ್ಥಾನಮಾನವನ್ನು ಪರಿಗಣಿಸದೆ, ನಿರ್ಭಯವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಿರುವುದು ಸ್ವತಂತ್ರ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ತನಿಖೆ ನಡೆಸುವ ಸರ್ಕಾರದ ದೃಢ ಸಂಕಲ್ಪದ ಪ್ರತೀಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳ ವಿಶ್ವಾಸವನ್ನು ಉಳಿಸುವುದು ಹಾಗೂ ಪ್ರತಿಭೆ ಮತ್ತು ಅರ್ಹತೆಗೆ ನ್ಯಾಯ ಒದಗಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾರ್ವಜನಿಕ ಪರೀಕ್ಷೆಗಳ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಅರ್ಹತೆ ಆಧಾರಿತ ನೇಮಕಾತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 40 ಲಕ್ಷದಿಂದ 80 ಲಕ್ಷದವರೆಗೆ ಭ್ರಷ್ಟಾಚಾರವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಕೆಪಿಎಸ್‌ಸಿಯ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ.
ಈ ಅಕ್ರಮದ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಥವಾ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ನಾಯಕರ ನಿಯೋಗವು ಆಯೋಗದ ಅಧ್ಯಕ್ಷರನ್ನು ಆಗ್ರಹಿಸಿದೆ.
ಸೋಮವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗವು ಆಯೋಗದ ಕಚೇರಿಗೆ ಭೇಟಿ ನೀಡಿ ಹಂಗಾಮಿ ಅಧ್ಯಕ್ಷ ಡಾ। ಪ್ರಭುದೇವ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಪ್ರತಿ ಹುದ್ದೆಗೆ ₹80 ಲಕ್ಷ ಲಂಚ ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಕೇಳಿ ಬಂದಿವೆ. ಈ ಬೆಳವಣಿಗೆಗಳು ಕೆಪಿಎಸ್‌ಸಿಯ ವಿಶ್ವಾಸಾರ್ಹತೆ ಪ್ರಶ್ನಿಸುವಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಮನವಿ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕೆಪಿಎಸ್ಸಿ ಅಧ್ಯಕ್ಷರು ಕೂಡ ಅಕ್ರಮ ಮಾಡಿ ಅಮಾನತು ಆಗಿದ್ದಾರೆ. ನೀಟ್ ಬಗ್ಗೆ ರಾಹುಲ್ ಗಾಂಧಿ ಹೋರಾಟ ಮಾಡಿದ್ದರು. ಆದರೆ ಇಲ್ಲಿ ಇಷ್ಟೆಲ್ಲ ಆದರೂ ಹೋರಾಟ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತಾಡಿಲ್ಲ. 400 ಹುದ್ದೆಯಲ್ಲಿ ಅಕ್ರಮ ನಡೆದಿದೆ ಎಂದರೆ ಒಟ್ಟು ₹800 ಕೋಟಿ ಡೀಲ್ ನಡೆದಿದೆ ಎಂದರ್ಥ. ಪ್ರತಿಭಾವಂತರು 350 ಅಂಕ ಪಡೆಯಲು ಕಷ್ಟಪಟ್ಟರೆ, ಸಾಮಾನ್ಯ ವಿದ್ಯಾರ್ಥಿಗಳು 400 ಅಂಕ ಗಳಿಸಿದ್ದಾರೆ ಎಂದು ಕಿಡಿಕಾರಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೆಪಿಎಸ್ಸಿ ಎಂದರೆ, ಬುದ್ಧಿವಂತರನ್ನು ದಡ್ಡರಾಗಿ, ದಡ್ಡರನ್ನು ಬುದ್ಧಿವಂತರಾಗಿ ಮಾಡುವ ಸಂಸ್ಥೆಯಾಗಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಬ್ಯಾಗ್ ಲಾಗ್ ಹುದ್ದೆಗಳ ಭರ್ತಿ ಮಾಡಲಾಗಿದೆ. ಈ ನೇಮಕಾತಿ ರದ್ದುಪಡಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ