
ಬೆಂಗಳೂರು (ಜೂ. 1): ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶಾಲಾ ಮಕ್ಕಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಾಠಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರು ಈ ಆದೇಶವನ್ನು ತಕ್ಷಣದಿಂದ ಅನುಸರಿಸಬೇಕು.
ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಶಾಲೆಗೆ ಕಳುಹಿಸಬಾರದು: ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಕೊರೊನಾ ಸಂಬಂಧಿತ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ, ಅವರನ್ನು ಶಾಲೆಗೆ ಕಳುಹಿಸದೆ ತಕ್ಷಣವೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಕೊಡಿಸಬೇಕು.
ಪೂರ್ಣ ಗುಣಮುಖವಾದ ನಂತರವೇ ಶಾಲೆಗೆ ಕಳುಹಿಸಿ: ಕೊರೊನಾ ಸೋಂಕು ಇರುವುದು ಅಥವಾ ಸೋಂಕಿನ ಲಕ್ಷಣಗಳು ಇರುವುದು ಖಚಿತವಾದಲ್ಲಿ ಮಕ್ಕಳು ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇದ್ದು ಗುಣಮುಖರಾಗಬೇಕು. ಇನ್ನು ಕೊರೊನಾ ಸೋಂಕಿನಿಂದ ತೀವ್ರವಾಗಿ ಅಥವಾ ಸಣ್ಣ ಮಟ್ಟದಲ್ಲಿ ಬಳಲಿದ ಮಕ್ಕಳು ವೈದ್ಯಕೀಯ ದೃಷ್ಟಿಯಿಂದ ಸಂಪೂರ್ಣವಾಗಿ ಗುಣಮುಖರಾದ ನಂತರವೇ ಶಾಲೆಗೆ ಹಾಜರಾಗಬೇಕು.
ಲಕ್ಷಣಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು: ಶಾಲೆಗೆ ಬಂದಿರುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ಪೋಷಕರಿಗೆ ಮಾಹಿತಿ ನೀಡಬೇಕು. ಜೊತೆಗೆ ಸಂಬಂಧಪಟ್ಟ ಪೋಷಕರಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಸೂಕ್ತ ಸಲಹೆ ನೀಡಬೇಕು.
ಶಾಲಾ ಸಿಬ್ಬಂದಿಗೂ ಸೂಕ್ತ ಜಾಗೃತಿ: ಶಿಕ್ಷಕರು ಅಥವಾ ಬೇರೆ ಸಿಬ್ಬಂದಿಗಳಿಗೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ, ಅವರಿಗೂ ಕೂಡ ವೈದ್ಯಕೀಯ ಸಲಹೆಯೊಂದಿಗೆ ವಿಶ್ರಾಂತಿ ನೀಡಬೇಕು. ಸೋಂಕಿನ ಲಕ್ಷಣಗಳಿದ್ದರೂ ಶಾಲೆಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಆದೇಶದಂತೆ ನಿರ್ವಹಣೆ ಕಡ್ಡಾಯ: ಶಾಲಾ ಆಡಳಿತ ಮಂಡಳಿಗಳು ಈ 5 ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಆದೇಶದಲ್ಲಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯವೇ ಮೊದಲ ಆದ್ಯತೆ, ಶಿಕ್ಷಣ ಇಲಾಖೆ ಸೂಚನೆ:
ಕೋವಿಡ್‌ನ ಹೊಸ ರೂಪಾಂತರಗಳು ಮಕ್ಕಳಲ್ಲಿ ತೀವ್ರವಾದ ಪರಿಣಾಮ ಉಂಟುಮಾಡಬಹುದೆಂಬ ಆತಂಕದ ನಡುವಿನಲ್ಲಿ, ಶಿಕ್ಷಣ ಇಲಾಖೆಯ ಈ ಕ್ರಮವನ್ನು ರಾಜ್ಯದ ಆರೋಗ್ಯ ತಜ್ಞರು ಸ್ವಾಗತಿಸಿದ್ದಾರೆ. ಮಕ್ಕಳ ಶಿಕ್ಷಣ ಎಷ್ಟೇ ಮುಖ್ಯವಾದರೂ, ಅವರ ಆರೋಗ್ಯ ಹಾಗೂ ಸುರಕ್ಷತೆ ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 17 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಪ್ರಸ್ತುತ ರಾಜ್ಯದಲ್ಲಿ 253 ಜನರು ಸಕ್ರಿಯ ಕೊರೋನಾ ಸೋಂಕಿತರಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್‌ಗೆ 4 ಮಂದಿ ಬಲಿಯಾಗಿದ್ದಾರೆ. ಇನ್ನು ಕೊರೊನಾ ಪಾಸಿಟಿವಿಟಿ ರೇಟ್ ಶೇ.6.1 ಆಗಿದೆ. ಆದರೆ, ನಿನ್ನೆಗೆ ಹೋಲಿಕೆ ಮಾಡಿದರೆ ಪಾಸಿಟಿವ್ ರೇಟ್ ಕಡಿಮೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ