ರಾಜಧಾನಿ ಬೆಂಗಳೂರಿನಲ್ಲಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾಮ್‌ರ್ ಮೂಲಕ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವ ಗುಜರಾತಿನ ಅಮುಲ್ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಇದೀಗ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಬೆಂಗಳೂರು (ಏ.11) :ರಾಜಧಾನಿ ಬೆಂಗಳೂರಿನಲ್ಲಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾಮ್‌ರ್ ಮೂಲಕ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವ ಗುಜರಾತಿನ ಅಮುಲ್ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಇದೀಗ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಸೋಮವಾರ ಬೆಳಗ್ಗೆ ಮೈಸೂರು ಬ್ಯಾಂಕ್ ವೃತ್ತದ ಸಮೀಪ ಟಿ.ಎ.ನಾರಾಯಣಗೌಡ(TA Narayanagowda) ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ(Karnataka rakshana vedike) (ಕರವೇ) ಕಾರ್ಯಕರ್ತರು ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಸ್ ಸೇರಿದಂತೆ ಅಮುಲ್ ಉತ್ಪನ್ನಗಳನ್ನು ರಸ್ತೆಗೆ ಸುರಿದು ಭಾರೀ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಅಮುಲ್ ಪ್ರತಿಕೃತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಸುತ್ತಮುತ್ತ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಇನ್ನು 10 ವರ್ಷ ಕಳೆದರೂ ನಂದಿನಿಗೆ ನಾವು ಸ್ಪರ್ಧೆ ನೀಡಲಾಗದು: ಅಮುಲ್
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ, ಅಮುಲ್ ಸಂಸ್ಥೆ ಕನ್ನಡಿಗರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಕನ್ನಡಿಗರು ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎಫ್‌ನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರ ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸಲು ಯತ್ನಿಸುತ್ತಿದೆ. ಇಂಥದ್ದೇನಾದರೂ ನಡೆದರೆ ಕರ್ನಾಟಕದ ಜನತೆ ದಂಗೆ ಏಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಟಿ.ಎ.ಧರ್ಮರಾಜ್‌ಗೌಡ ಮಾತನಾಡಿ, ಅಮುಲ್ ಹಟಮಾರಿತನ ಮುಂದುವರೆಸಿ ಹಾಲು-ಮೊಸರು ವ್ಯಾಪಾರ ಮುಂದುವರೆಸಿದರೆ ರಾಜ್ಯದಲ್ಲಿ ಅಮುಲ್‌ನ ಎಲ್ಲ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಬೇಕಾಗುತ್ತದೆ. ಅಮುಲ್ ಐಸ್ ಕ್ರೀಂ ನಿಂದ ಹಿಡಿದು ಬಿಸ್ಕೆಟ್‌ವರೆಗೆ ಯಾವ ಉತ್ಪನ್ನವನ್ನೂ ಮಾರಾಟ ಮಾಡಲು ಬಿಡುವುದಿಲ್ಲ. ಹೀಗಾಗಿ ಅಮುಲ್ ಕೂಡಲೇ ಆನ್‌ಲೈನ್‌ನ ಹಾಲು, ಮೊಸರು ವ್ಯಾಪಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ಮಾತನಾಡಿದರು.
ಪೊಲೀಸರ ವಶಕ್ಕೆ:
ಪ್ರತಿಭಟನೆಯಲ್ಲಿ ಅಮುಲ್ ಪ್ರತಿಕೃತಿ ದಹಿಸಲು ಮುಂದಾದ ಕರವೇ ಕಾರ್ಯಕರ್ತರನ್ನು ತಡೆದರು. ಆದರೂ, ಲೆಕ್ಕಿಸದೆ ಪೊಲೀಸರೊಂದಿಗೆ ವಾಗ್ವಾದದಲ್ಲಿ ತೊಡಗಿ, ಪ್ರತಿಕೃತಿಗೆ ಬೆಂಕಿ ಹಚ್ಚಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಆ ನಂತರ ಬಿಡುಗಡೆಗೊಳಿಸಿದರು.
Nandini VS Amul: ಮಹಿಳಾ ಕಾಂಗ್ರೆಸ್‌ನಿಂದ ನಂದಿನಿ ಉತ್ಪನ್ನಗಳ ಖರೀದಿಸುವ ಅಭಿಯಾನ
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಶ್ವೇತಾ ಮೋಹನ್, ಗೋಮೂರ್ತಿ ಯಾದವ್, ವೀರಭದ್ರ, ಕುಮಾರ್ (ಆಟೋ ಘಟಕ), ಕೆ.ಪಿ.ನರಸಿಂಹ, ಕಾರ್ತಿಕ್, ಲಕ್ಷ್ಮಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.