* ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್
* ಒಂದು ವಾರದಿಂದ ರಾಜ್ಯಾದ್ಯಂತ ಸತತ ಮಳೆ
* ನೆಲಕಚ್ಚಿದ ಭತ್ತ, ಜೋಳ, ರಾಗಿ, ಹುರುಳಿ, ಕಾಫಿ
* 75ಕ್ಕೂ ಕುರಿ, 10ಕ್ಕೂ ಹೆಚ್ಚು ಹಸು-ಎಮ್ಮೆ ಬಲಿ
ಬೆಂಗಳೂರು(ನ.18): ಬಂಗಾಳ ಕೊಲ್ಲಿಯಲ್ಲಿ (Bay Of Bengal) ವಾಯುಭಾರ ಕುಸಿತದಿಂದಾಗಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿರುವುದರಿಂದ ರಾಜ್ಯಾದ್ಯಂತ ಕೃಷಿಗೆ (Agriculture) ಅಪಾರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜೊತೆಗೆ, ಮಳೆ ಸಂಬಂಧಿ ಕಾರಣಗಳಿಗಾಗಿ ಒಟ್ಟಾರೆ 75ಕ್ಕೂ ಹೆಚ್ಚು ಕುರಿ, 10ಕ್ಕೂ ಹೆಚ್ಚು ಹಸು ಮತ್ತು ಎಮ್ಮೆಗಳು ಮೃತಪಟ್ಟಿದ್ದು, ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏತನ್ಮಧ್ಯೆ ಸತತ ಮಳೆಯಿಂದಾಗಿ ಬುಧವಾರ ಮತ್ತೆ ವಿವಿಧೆಡೆ 70ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
undefined
ಬೆಳಗಾವಿ, ಚಿತ್ರದುರ್ಗ (Chitradurga), ದಾವಣಗೆರೆ, ಚಾಮರಾಜನಗರ, ಮೈಸೂರು, ಧಾರವಾಡ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದರೆ, ರಾಜಧಾನಿ ಬೆಂಗಳೂರು, ಕೋಲಾರ, ಹಾವೇರಿ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮತ್ತು ತುಂತುರು ಮಳೆಯಾಗಿದೆ.
ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆ ತೀವ್ರ ಅವಾಂತರ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಸೇರಿ ಜಿಲ್ಲೆಯ ಬಹುಭಾಗದಲ್ಲೂ ಮಂಗಳವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಸುಮಾರು 715 ಎಕರೆ ಬತ್ತದ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಎರಡು ಎಕರೆ ಭತ್ತ, ಹೊಸದುರ್ಗದಲ್ಲಿ ಎರಡು ಎಕರೆ ರಾಗಿ ಬೆಳೆ ಹಾನಿಯಾಗಿದೆ.
ಬೆಳಗಾವಿಯಲ್ಲೂ ನೆಲಕಚ್ಚಿದ ಭತ್ತ:
ಬೆಳಗಾವಿ (Belagavi) ಜಿಲ್ಲೆಯಲ್ಲೂ ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಹಲವೆಡೆ ಭತ್ತದ ಬೆಳೆ ನಾಶವಾಗಿದೆ. ಬೆಳಗಾವಿ ತಾಲೂಕಿನ ಯಳ್ಳೂರು, ಬಳ್ಳಾರಿಯ ನಾಲೆ, ಖಾನಾಪುರ ಸುತ್ತಮುತ್ತಲು ಭಾರಿ ಮಳೆಯಾಗಿ ನೀರು ಹರಿದುಬಂದ ಪರಿಣಾಮ ಭತ್ತದ ಜಮೀನು ಜಲಾವೃತಗೊಂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಾತ್ರವಲ್ಲದೆ ಈಗಾಗಲೇ ಕಟಾವು ಮಾಡಿ ಬಣವೇ ಹಾಕಿದ್ದ ಭತ್ತಕ್ಕೂ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಭತ್ತ ನಾಶವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದು, ಹೊಲ, ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾನಿಯಾಗಿದೆ. ತೋಟಗಳಲ್ಲಿನ ಕಾಫಿಹಣ್ಣು ಸಂಪೂರ್ಣ ಉದುರಿ ಹೋಗಿದ್ದು, ಬೆಳೆಗಾರರು ಒಣಗಲು ಹರಡಿದ್ದ ಕಾಫಿ ಬೀಜಗಳೂ ಸಂಪೂರ್ಣ ಕೊಚ್ಚಿಹೋಗಿ ತೀವ್ರ ಸಂಕಷ್ಟಎದುರಿಸುವಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ, ಹತ್ತಿ, ಈರುಳ್ಳಿ ಸೇರಿದಂತೆ ಕಟಾವು ಮಾಡಿದ ಬೆಳೆ ನಾಶವಾಗಿದೆ. ಹೊಲ್ತಿಕೋಟೆಯ 40 ಎಕರೆ ಕೆರೆಯ ಒಡ್ಡು ಒಡೆದಿದ್ದರಿಂದ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.
75ಕ್ಕೂ ಹೆಚ್ಚು ಕುರಿ ಬಲಿ:
ಚಿತ್ರದುರ್ಗ ಜಿಲ್ಲೆಯಲ್ಲಿ ಸಿಡಿಲಿಗೆ 40 ಕುರಿಗಳು ಮೃತಪಟ್ಟಿವೆ. ಚಳ್ಳಕೆರೆಯಲ್ಲಿ 7, ಹೊಸದುರ್ಗದಲ್ಲಿ 10 ಕುರಿಗಳು ನೀರಿನಲ್ಲಿ ಮುಳುಗಿದ್ದು, 23 ಕುರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು ಚಾಮರಾಜನಗರ ಜಿಲ್ಲೆ ಶಾಗ್ಯ ಗ್ರಾಮದಲ್ಲಿ 2 ಹಸುಗಳು ಸಿಡಿಲಿಗೆ ಮೃತಪಟ್ಟಿವೆ. ಧಾರವಾಡ ಜಿಲ್ಲೆಯ ಅಳ್ನಾವರದ ಶಿವನಗರದಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಎರಡು ಎಮ್ಮೆ ಮೃತಪಟ್ಟಿವೆ.
70ಕ್ಕೂ ಹೆಚ್ಚು ಮನೆಗಳಿಗೆ ಹಾನಿ:
ಚಿತ್ರದುರ್ಗ ಜಿಲ್ಲೆಯಲ್ಲಿ 41 ಮನೆಗಳಿಗೆ ಹಾನಿಯಾಗಿದ್ದು ಜನ ಜೀವ ಕೈಯ್ಯಲ್ಲಿ ಹಿಡಿದು ಕೂರುವಂತಾಗಿದೆ. ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು 16 ಮತ್ತು ಹಿರಿಯೂರಿನಲ್ಲಿ 14 ಮನೆಗಳು ನಿರಂತರ ಮಳೆಗೆ ಶಿಥಿಲಗೊಂಡು ಕುಸಿದಿವೆ. ದಾವಣಗೆರೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿ ಸಂಭವಿಸಿದ್ದರೆ, ಧಾರವಾಡ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಗೊಳಗಾಗಿವೆ. ಮೈಸೂರಿನಲ್ಲೂ ಮಳೆ ಅವಾಂತರಕ್ಕೆ 4 ಮನೆಗಳು ಕುಸಿದಿವೆ.
ಅವಶೇಷಗಳಡಿ ಸಿಲುಕಿದ್ದ ವೃದ್ಧನ ರಕ್ಷಣೆ:
ಮೈಸೂರು ಜಿಲ್ಲೆಯಲ್ಲಿ 4 ಮನೆಗಳ ಗೋಡೆಗಳು ಮತ್ತು ಚಾವಣಿಗಳು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಇದೇವೇಳೆ ನಗರದ ಅಗ್ರಹಾರದ ಉತ್ತರಾದಿ ಮಠದ ಬಳಿ ಕಟ್ಟಡವೊಂದು ಕುಸಿದು ಬಿದ್ದ ಅದರ ಅವಶೇಷಗಡಿ ಸಿಕ್ಕಿದ್ದ ರಾಮನಾಥ್(62) ಎಂಬವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾನಿ ಸಮೀಕ್ಷೆ ಪೂರ್ಣ: ಶೀಘ್ರ ಪರಿಹಾರದ ಚರ್ಚೆ
ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ತರಕಾರಿ ಮತ್ತು ಕೃಷಿ ಹಾನಿಯ ಬಗ್ಗೆ ಕೃಷಿ ಇಲಾಖೆ ಜೊತೆ ಸಮಗ್ರ ಚರ್ಚೆ ನಡೆದಿದೆ. ಶೀಘ್ರದಲ್ಲೇ ಪರಿಹಾರ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಮಳೆ ನಿಂತ ತಕ್ಷಣ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ