ಮಳೆ ಹಾನಿ: 600 ಕೋಟಿ ಪರಿಹಾರ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

By Govindaraj SFirst Published Sep 6, 2022, 4:15 AM IST
Highlights

ರಾಜ್ಯದ ಹಲವೆಡೆ ಸತತವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತಾಗಿ 600 ಕೋಟಿ ರು. ಘೋಷಿಸಿದ್ದಾರೆ. 

ಬೆಂಗಳೂರು (ಸೆ.06): ರಾಜ್ಯದ ಹಲವೆಡೆ ಸತತವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತಾಗಿ 600 ಕೋಟಿ ರು. ಘೋಷಿಸಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣಾ ದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಪ್ರವಾಹ ಪೀಡಿತ ಪ್ರದೇಶಗಳ ಜನರ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಸೂಚಿಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟುಹಾನಿಯಾಗಿದೆ. ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂಧ ಬೆಂಗಳೂರಿಗೆ ಮಾತ್ರ 300 ಕೋಟಿ ರು. ನೀಡಲಾಗಿದೆ. ಇನ್ನುಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ 300 ಕೋಟಿ ರು. ಒದಗಿಸಲಾಗಿದೆ. ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ 6 ಹೊಸ ನಗರ ನಿರ್ಮಾಣಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಸಂತ್ರಸ್ತರಿಗೆ ಒಂದು ವಾರದಲ್ಲಿ ಪರಿಹಾರ ಒದಗಿಸಬೇಕು. ಜನ-ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವರುಣನ ಆರ್ಭಟದಿಂದ ಆಸ್ತಿ ಹಾನಿಯ ಜತೆಗೆ ಬೆಳೆ ಹಾನಿಯೂ ಸಂಭವಿಸಿದೆ. ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ತಂಡ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಷ್ಟದ ಪ್ರಮಾಣ ಮತ್ತಷ್ಟುಹೆಚ್ಚಾಗಲಿದೆ. ಈವರೆಗೆ 11 ಸಾವಿರ ಕೋಟಿ ರು. ನಷ್ಟದ ಅಂದಾಜು ಮಾಡಲಾಗಿತ್ತು. ಆದರೆ, ಈಗ ಇದರ ಮೊತ್ತವು ಮತ್ತಷ್ಟುಹೆಚ್ಚಾಗಲಿದೆ. ಈ ಬಗ್ಗೆ ಕೇಂದ್ರದ ತಂಡದ ಗಮನಕ್ಕೆ ತಂದು ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗುವುದು ಎಂದರು.

ಬೆಂಗಳೂರಿನಲ್ಲಿ ಹಲವು ರಸ್ತೆಗಳು ಜಲಾವೃತಗೊಂಡಿವೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆರೆಗಳಂತಾಗಿವೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಎಸ್‌ಡಿಆರ್‌ಎಫ್‌ ಪಡೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೂ ಎರಡು ಪಡೆಯನ್ನು ನೀಡಲಾಗುವುದು. ಅಲ್ಲದೇ, ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಟ್ರ್ಯಾಕ್ಟರ್‌ ಮೂಲಕ ಜನರಿಗೆ ಸ್ವಚ್ಛವಾದ ನೀರನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಅರ್ಧ ಬೆಂಗಳೂರಿಗೆ ಕುಡಿವ ನೀರು ಬಂದ್‌: ಭಾನುವಾರ ತಡರಾತ್ರಿ ಸುರಿದ ಮಹಾಮಳೆಗೆ ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿಯ ನೀರು ಸಂಸ್ಕರಣಾ ಘಟಕದ ಯಂತ್ರಗಾರ ಜಲಾವೃತಗೊಂಡಿದೆ. ಪರಿಣಾಮ ಬೆಂಗಳೂರಿನ ಅರ್ಧಕ್ಕಿಂತಲು ಹೆಚ್ಚು ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಬಹುತೇಕ ಸ್ಥಗಿತವಾಗಿದ್ದು, ನೀರಿನ ಮಿತಿ ಬಳಕೆ ಮಾಡುವಂತೆ ಜಲಮಂಡಳಿ ಸಾರ್ವಜನಿಕರನ್ನು ಕೋರಿದೆ.

ಮಂಡ್ಯಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ತೊರೆಕಾಡನಹಳ್ಳಿಯಲ್ಲಿರುವ (ಟಿ.ಕೆ.ಹಳ್ಳಿ) ಬೆಂಗಳೂರು ಜಲಮಂಡಳಿಯ ನೀರು ಸಂಸ್ಕರಣಾ ಘಟಕಕ್ಕೆ ನೀರುನುಗ್ಗಿ ಬಹುತೇಕ ಯಂತ್ರಗಾರ ಜಲಾವೃತಗೊಂಡಿವೆ. ಹೀಗಾಗಿ, ಬೆಂಗಳೂರಿನ ಹಲವು ಬಡಾವಣೆಗಳಿಗೆ ಭಾನುವಾರ ತಡರಾತ್ರಿಯಿಂದಲೇ ನೀರು ಪೂರೈಕೆ ಸ್ಥಗಿತಗೊಂಡಿದೆ. ಸೋಮವಾರ ಬೆಳಿಗ್ಗೆಯಿಂದಲೇ ಸಂಸ್ಕರಣಾ ಘಟಕದ ಮಳೆನೀರು ತೆರವು, ಯಂತ್ರಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಆದರೆ, ಮಳೆ ಸೋಮವಾರವೂ ಮುಂದುವರೆದಿದ್ದು, ದುರಸ್ತಿ ಕಾರ್ಯ ತಡವಾಗುವ ಆತಂಕ ಎದುರಾಗಿದೆ. ಈ ಬೆನ್ನೆಲ್ಲೆ ಬೆಂಗಳೂರು ಜಲಮಂಡಳಿಯು ಸಾರ್ವಜನಿಕರಿಗೆ ನೀರಿನ ಮಿತಬಳಕೆಗೆ ಸೂಚಿಸಿದೆ.

ಧಾರವಾಡದಲ್ಲಿ ಎನ್‌ಡಿಎ ಮಾದರಿಯ ತರಬೇತಿ ಕೇಂದ್ರ: ಸಿಎಂ ಬೊಮ್ಮಾಯಿ

ಬೆಂಗಳೂರಿಗೆ ತೊಂದರೆಯಾಗದಂತೆ ಕ್ರಮ-ಸಿಎಂ: ಹಲಗೂರಿಗೆ ಸಮೀಪದ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ನೀರು ಪೂರೈಸುವ ಪಂಪ್‌ಹೌಸ್‌ಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಸ್ಥಳಕ್ಕೆ ಖುದ್ದು ಭೇಟಿ ಪರಿಶೀಲನೆ ನಡೆಸಿದರು. ಪಂಪ್‌ಹೌಸ್‌ನಿಂದ 11 ಅಡಿ ನೀರು ಹೊರತೆಗೆಯಬೇಕಿದ್ದು, ಮಂಗಳವಾರ ಬೆಳಗ್ಗೆಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಬೆಂಗಳೂರಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಂದೆ ಹೀಗಾಗದಂತೆ ಪಂಪ್‌ಹೌಸ್‌ ಸುತ್ತ ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದರು.

click me!