
ಬೆಂಗಳೂರು : ಮುಕ್ತಾಯವಾಗುವ ಹಂತದಲ್ಲಿರುವ ಮುಂಗಾರು ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ್ದು, ಸಿಡಿಲು ಬಡಿದು ಒಂದೇ ದಿನ 7 ಜನ ಸಾವನ್ನಪ್ಪಿದ ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.
ದಾವಣಗೆರೆ ಜಿಲ್ಲೆಯಲ್ಲಿ ನಾಲ್ವರು, ಹಾವೇರಿ ಜಿಲ್ಲೆಯಲ್ಲಿ ಇಬ್ಬರು, ರಾಯಚೂರು ಜಿಲ್ಲೆಯಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ರಾಯಚೂರು, ಹಾವೇರಿ, ದಾವಣಗೆರೆ, ಬೆಂಗಳೂರಿನಲ್ಲಿ ಉತ್ತಮ ಮಳೆ ಸುರಿದಿದೆ.
ದಾವಣಗೆರೆಯಲ್ಲಿ ತಾಯಿ, ಮಗಳ ಸಾವು: ಹರಪನಹಳ್ಳಿ ತಾಲೂಕಿನ ಚೆನ್ನಹಳ್ಳಿ ತಾಂಡಾದ ಲಲಿತಾ ಬಾಯಿ (28 ವರ್ಷ), ಮಗಳು ಶ್ವೇತಾ (10), ಜಗಳೂರು ತಾಲೂಕಿನ ಗೌಡಿಕಟ್ಟೆಯ ರೈತ ಮಹಿಳೆ ಶಾಂತಮ್ಮ (46) ಹಾಗೂ ಕಲ್ಲೇನಹಳ್ಳಿ ಗ್ರಾಮದ ರೈತ ಅಜ್ಜಯ್ಯ (38) ಸಿಡಿಲಿಗೆ ಬಲಿಯಾದ ವ್ಯಕ್ತಿಗಳಾಗಿದ್ದಾರೆ.
ಚೆನ್ನಹಳ್ಳಿ ತಾಂಡಾದ ಲಲಿತಾ ಬಾಯಿ ಮಗಳು ಶ್ವೇತಾ ಜತೆ ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಮಳೆಯಿಂದ ರಕ್ಷಿಸಿಕೊಳ್ಳಲು ಕೂಲಿಗಳು ಊರಿಗೆ ವಾಪಸ್ಸಾಗಿದ್ದಾರೆ. ಲಲಿತಾಬಾಯಿ ಮತ್ತು ಮಗಳು ಶ್ವೇತಾ ಹೊಲದಲ್ಲೇ ಮರವೊಂದರ ಕೆಳಗೆ ತಾಡುಪಾಲು ಹಾಕಿಕೊಂಡು, ಊಟ ಮಾಡುತ್ತಾ ಕುಳಿತಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಜತೆಗಿದ್ದ ಅಜಯ್, ಕವನಾ ಎಂಬ ಮಕ್ಕಳಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಜಗಳೂರು ತಾಲೂಕು ಗೌಡಿಕಟ್ಟೆಗ್ರಾಮದ ಶಾಂತಮ್ಮ ಗಿಡ್ಡಪ್ಪ (48 ವರ್ಷ) ಮೆಕ್ಕೆಜೋಳ ಮುರಿಯಲು ಹೊಲಕ್ಕೆ ಹೋಗಿ, ವಾಪಾಸ್ಸಾಗುತ್ತಿದ್ದರು. ಆಗ ಜೋರಾಗಿ ಮಳೆ ಸುರಿಯುತ್ತಿದ್ದುದರಿಂದ ತರಾತುರಿಯಲ್ಲಿ ಮನೆಯತ್ತ ಹೆಜ್ಜೆ ಹಾಕಿದ್ದ ಶಾಂತಮ್ಮನಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ತಾಲೂಕಿನ ಕಲ್ಲೇನಹಳ್ಳಿ ಗ್ರಾಮದ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಯ್ಯ(38 ವರ್ಷ)ನಿಗೆ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಹಾವೇರಿಯಲ್ಲಿ ಇಬ್ಬರ ಸಾವು: ಸವಣೂರ ತಾಲೂಕು ಕುಣಿಮೆಳ್ಳಿಹಳ್ಳಿ ಗ್ರಾಮದ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಸಣ್ಣಭರಮಣ್ಣನವರ(22) ಹಾಗೂ ಹಾನಗಲ್ ತಾಲೂಕು ನರೇಗಲ್ಲ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರಪ್ಪ ಕೋತಿನ(50) ಸಿಡಿಲು ಬಡಿದು ಮೃತರಾಗಿದ್ದಾರೆ. ಶಿವಪುರದಲ್ಲಿ 9ನೇ ತರಗತಿ ವಿದ್ಯಾರ್ಥಿ ಜಾಫರ್ ಸಾಬ್ ಮಸೂತಿ(14) ಸಿಡಿಲಿನಿಂದ ಗಾಯಗೊಂಡಿದ್ದಾರೆ. ಹಾವೇರಿ, ರಾಣಿಬೆನ್ನೂರು, ಸವಣೂರು, ಹಾನಗಲ್, ಶಿಗ್ಗಾಂವಿಯಲ್ಲಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಆರಂಭವಾದ ಮಳೆ ಸುಮಾರು 1 ಗಂಟೆಗಳ ಕಾಲ ಸುರಿದಿದೆ.
ರಾಯಚೂರಿನಲ್ಲಿ ಒಬ್ಬರ ಸಾವು: ಸಿರವಾರ ತಾಲೂಕಿನಲ್ಲಿ ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ಬ್ಯಾಗವಾಟ ಗ್ರಾಮದ ರೈತ ನಾಗಪ್ಪ ನಾಯಕ ಜಮೀನು ಕೆಲಸಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಮಳೆ ಆರಂಭವಾಗಿತ್ತು. ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಮರದ ಅಡಿಯಲ್ಲಿ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಿರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಪರೀತ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ