
ರಾಜ್ಯದಲ್ಲಿ ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಆರ್ಥಿಕ ಹೊಡೆತ ಬೀಳುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ನೀರಿನ ಬಿಲ್, ವಿದ್ಯುತ್ ಬಿಲ್‌ಗಳ ಹೆಚ್ಚಳದಿಂದ ಜನಸಾಮಾನ್ಯರ ಬದುಕು ಕಷ್ಟಕರವಾಗಿರುವ ಈ ಹೊತ್ತಿನಲ್ಲಿ, ರಾಜ್ಯದ ಜನರಿಗೆ ಶೀಘ್ರದಲ್ಲೇ ಮತ್ತೊಂದು ದೊಡ್ಡ ಬರೆ ಎದುರಾಗುವ ಸಾಧ್ಯತೆ ಇದೆ.
ಸ್ವಂತ ಮನೆ ಹೊಂದಬೇಕೆಂಬ ಕನಸನ್ನು ಸಾಕಷ್ಟು ವರ್ಷಗಳಿಂದ ಹೊತ್ತುಕೊಂಡು, ಕಷ್ಟಪಟ್ಟು ಹಣ ಕೂಡಿಟ್ಟು ಸೈಟ್, ಮನೆ ಅಥವಾ ಫ್ಲ್ಯಾಟ್ ಖರೀದಿಗೆ ಮುಂದಾಗಿರುವವರಿಗೆ ಇದು ಖಂಡಿತವಾಗಿಯೂ ಶಾಕಿಂಗ್ ಸುದ್ದಿಯೇ ಸರಿ. ರಾಜ್ಯ ಸರ್ಕಾರವು ಸೈಟ್, ಮನೆ ಹಾಗೂ ಫ್ಲ್ಯಾಟ್‌ಗಳ ಸರ್ಕಾರಿ ಮಾರುಕಟ್ಟೆ ಮೌಲ್ಯ (ಗೈಡ್‌ಲೈನ್ ವ್ಯಾಲ್ಯೂ) ಹೆಚ್ಚಳಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಗಳ ಪ್ರಕಾರ, ಏಪ್ರಿಲ್ ತಿಂಗಳಿಂದ ಶೇ.15ರಿಂದ ಶೇ.30ರಷ್ಟು ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ಕುರಿತಂತೆ ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದ್ದು, ರಾಜ್ಯದಾದ್ಯಂತ ಇರುವ ಕೃಷಿ ಮತ್ತು ಕೃಷಿಯೇತರ ಭೂಮಿಗಳ ಸರ್ಕಾರಿ ಮೌಲ್ಯ ಕೂಡ ಹೆಚ್ಚಳವಾಗಲಿದೆ. ಇದರಿಂದಾಗಿ ಸೈಟ್, ಮನೆ ಹಾಗೂ ಫ್ಲ್ಯಾಟ್ ಖರೀದಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಈ ಹಿಂದೆಯೂ ಸರ್ಕಾರ ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಳ ಮಾಡಿದ್ದ ಉದಾಹರಣೆಗಳಿವೆ. 2019ರಲ್ಲಿ ಶೇ.15ರಷ್ಟು, 2023ರಲ್ಲಿ ಶೇ.12ರಿಂದ 15ರಷ್ಟು ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 2026ರ ಹೊತ್ತಿಗೆ ಶೇ.15ರಿಂದ 30ರಷ್ಟು ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿರುವುದು ಮನೆ ಕನಸು ಕಾಣುತ್ತಿರುವ ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಭಾರೀ ಆಘಾತವಾಗಿದೆ.
ಗೈಡ್‌ಲೈನ್ ವ್ಯಾಲ್ಯೂ ಹೆಚ್ಚಾದರೆ ಅದರ ನೇರ ಪರಿಣಾಮ ಮಾರುಕಟ್ಟೆ ದರದ ಮೇಲೆಯೇ ಬೀಳುತ್ತದೆ. ಸರ್ಕಾರಿ ಮೌಲ್ಯ ಏರಿಕೆಯಾದ ಕೂಡಲೇ ಸೈಟ್, ಮನೆ ಹಾಗೂ ಫ್ಲ್ಯಾಟ್‌ಗಳ ಮಾರುಕಟ್ಟೆ ಬೆಲೆ ಗಗನಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರೊಂದಿಗೆ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಸರ್ಜ್ ಚಾರ್ಜ್ ಸೇರಿದಂತೆ ವಿವಿಧ ತೆರಿಗೆಗಳ ಮೊತ್ತವೂ ಗಣನೀಯವಾಗಿ ಹೆಚ್ಚಳವಾಗಲಿದೆ. ಪರಿಣಾಮವಾಗಿ ಮನೆ ಖರೀದಿಸುವವರು ಸ್ಟ್ಯಾಂಪ್ ಡ್ಯೂಟಿಯನ್ನು ದ್ವಿಗುಣವಾಗಿ ಕಟ್ಟುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು.
ಒಟ್ಟಾರೆ, ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನೊಂದು ಕಡೆ ತೆರಿಗೆ ಹಾಗೂ ಶುಲ್ಕಗಳ ಹೆಚ್ಚಳ – ಈ ಎಲ್ಲದರ ನಡುವೆ ಸಾಮಾನ್ಯ ಜನರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. “ತಮಗೊಂದು ಸೂರು ಬೇಕು” ಎಂಬ ಸಾಮಾನ್ಯ ಕನಸು ಇನ್ನಷ್ಟು ದೂರ ಸರಿಯುವ ಭೀತಿ ಎದುರಾಗಿದೆ. ಗೈಡ್‌ಲೈನ್ ವ್ಯಾಲ್ಯೂ ಏರಿಕೆಯ ನಿರ್ಧಾರ ಮುಂದುವರೆದರೆ, ಸಾವಿರಾರು ಜನರ ಮನೆ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ