ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ನೀಡುವುದು ತಾರತಮ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್‌ ಕಿಡಿ!

ಸರ್ಕಾರಿ ಗುತ್ತಿಗೆಯಲ್ಲಿ ಒಂದು ಸಮುದಾಯಕ್ಕೆ ಮೀಸಲಾತಿ ನೀಡಿ ಇತರರನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ನೀಡಿ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

JDS nikhil kumaraswamy outraged against congress contract reservation to Muslims issue rav

ಬೆಂಗಳೂರು (ಏ.2): ಸರ್ಕಾರಿ ಗುತ್ತಿಗೆಯಲ್ಲಿ ಒಂದು ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ನೀಡಿ ಇತರ ಸಮುದಾಯಗಳನ್ನು ಕಡೆಗಣಿಸಲಾಗಿದ್ದು, ಕಾಂಗ್ರೆಸ್‌ ಸರ್ಕಾರವು ಮೀಸಲಾತಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆಯಲ್ಲಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಓಲೈಕೆ ಮಾಡುತ್ತಿದೆ. ಜೈನ್‌, ಕೈಸ್ತ್ರ ಅಲ್ಪಸಂಖ್ಯಾತರಿಗೆ ಮೀಸಲಾತಿ ಯಾವ ಕಾರಣಕ್ಕಾಗಿ ನೀಡಿಲ್ಲ. 3ಎ, 3ಬಿ ವರ್ಗದವರು ಏನು ದ್ರೋಹ ಮಾಡಿದ್ದಾರೆ. ಚುನಾವಣೆಯಲ್ಲಿ ಉಳಿದ ಸಮುದಾಯಗಳು ಅವರ ಜತೆ ನಿಲ್ಲಲಿಲ್ಲವೇ? ಕಾಂಗ್ರೆಸ್‌ ತನ್ನ ಅಜೆಂಡಾ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Latest Videos

ಇದನ್ನೂ ಓದಿ: 4 ಅಜೆಂಡಾ ಜತೆ ಇಂದಿನಿಂದ ಸಿದ್ದು ದಿಲ್ಲಿ ಯಾತ್ರೆ: ಹೈಕಮಾಂಡ್ ಭೇಟಿಯ ರಹಸ್ಯವೇನು?

ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಸಂವಿಧಾನವನ್ನು ಉಳಿಸುತ್ತೇವೆ ಎಂದು ಸಂವಿಧಾನದ ಪುಸ್ತಕವನ್ನ ಕೈಯಲ್ಲಿ ಹಿಡಿದು ಹೇಳುತ್ತಾರೆ. ಆದರೆ ರಾಜ್ಯ ನಾಯಕರು ಸಂವಿಧಾನದ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿರುವುದನ್ನು ವಿರೋಧಿಸುತ್ತಿಲ್ಲ. ಆದರೆ, ಉಳಿದ ಸಮುದಾಯಗಳಿಗೆ ಅದೇ ರೀತಿ ಮೀಸಲಾತಿ ನೀಡಬೇಕಲ್ಲವೇ? ಓಲೈಕೆ ರಾಜಕೀಯ ಮಾಡಿ ಏಕ ಸಮುದಾಯವನ್ನ ಮೆಚ್ಚಿಸುವುದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ

ಜೆಡಿಎಸ್‌-ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಕಾಂಗ್ರೆಸ್‌ ಸರ್ಕಾರ ಯಾವ ರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತಿದೆ ಎಂಬುದರ ಕುರಿತು ಜೆಡಿಎಸ್ ವತಿಯಿಂದ ಜನಜಾಗೃತಿ ಮೂಡಿಸಿ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ರೂಪುರೇಷೆ ರೂಪಿಸಲಾಗುತ್ತಿದೆ.

-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ

vuukle one pixel image
click me!