
ಬೆಂಗಳೂರು (ಜೂ.1) : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂತಿದ್ದೇನೆ ಎಂಬುದಾಗಿ ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವೀಟರ್)ನಲ್ಲಿ ಅವರು, ಮುಖ್ಯಮಂತ್ರಿಗಳ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ. ಅದು ನನಗೆ ಬೇಡವೇ ಬೇಡ. ಆದರೆ ಜೂ.4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೋ? ಜೂ.4ರ ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೋ ನೋಡೋಣ ಎಂದು ಟೀಕಿಸಿದ್ದಾರೆ.
ನಿಮ್ಮ ಅಜ್ಞಾನ ಪ್ರದರ್ಶನ ಬಿಡಿ: ಆರ್. ಅಶೋಕ್‌ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಅಪರೂಪಕ್ಕೆ ತಮ್ಮ ನಿದ್ದೆಯಿಂದ ಎದ್ದು ನನ್ನ ಒಂದು ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಮೊದಲು ಅದಕ್ಕೆ ಅಭಿನಂದನೆಗಳು. ಆದರೆ ಅದರಲ್ಲೂ ಮೈಯೆಲ್ಲಾ ಎಣ್ಣೆ ಸವರಿಕೊಂಡಿರುವಂತೆ ತಮ್ಮ ಕರ್ತವ್ಯದಿಂದ ಜಾರಿಕೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿರುವುದರ ಭಂಡತನಕ್ಕೆ ಏನು ಹೇಳಬೇಕು ಎಂದು ಹರಿಹಾಯ್ದಿದ್ದಾರೆ.
ಪತ್ರಿಕೆಗಳಲ್ಲಿ ಹತ್ತಾರು ಕೋಟಿ ರು. ಖರ್ಚು ಮಾಡಿ ಪುಟಗಟ್ಟಲೆ ಜಾಹೀರಾತು ಕೊಡುವಾಗ ಅದು ಕಾಂಗ್ರೆಸ್ ಯೋಜನೆ. ಹಸಿರು ಬಾವುಟ ತೋರಿಸಿ ಬಸ್ಸಿಗೆ ಚಾಲನೆ ನೀಡುವಾಗಲೂ ಸರ್ಕಾರದ ಕೊಡುಗೆ. ಆದರೆ ಅದರಲ್ಲಿ ನ್ಯೂನತೆಗಳು ಕಂಡು ಬಂದರೆ, ಅದು ಕೇಂದ್ರ ಸರ್ಕಾರದ ಹೊಣೆ. ಇದು ಯಾವ ಸೀಮೆ ಆಡಳಿತ? ತಮಗೆ ಕರ್ನಾಟಕದ ಜನತೆ ಅಧಿಕಾರ ಕೊಟ್ಟಿರುವುದು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳಲಿ ಅಂತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಆರ್ ಅಶೋಕ್ ತೀವ್ರ ವಾಗ್ದಾಳಿ
ನಿಜವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತಲ್ಲ? ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮತ್ತು ಎಲ್ಲದಕ್ಕೂ ಕೇಂದ್ರ ಮಂತ್ರಿಗಳಿಗೆ ಮನವಿ ಪತ್ರ ಕೊಡುವ ತಾವು ಇದಕ್ಕೆ ಮಾತ್ರ ಯಾಕೆ ಮಾಡಲಿಲ್ಲ. ಅಸಲಿಗೆ ವಿಷಯ ಪ್ರಸ್ತಾಪ ಮಾಡುವವರೆಗೂ ನಿಮಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ಮುಖ್ಯಮಂತ್ರಿಗಳ ಆಡಳಿತ ವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ಅಹಂಕಾರದ ಮಾತುಗಳು ಆಡಿದ ಮಾತ್ರಕ್ಕೆ ಪ್ರತಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ತಿಳಿದಿದ್ದರೆ, ಅದು ತಮ್ಮ ಭ್ರಮೆ. ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ, ಆಲ್ ದಿ ಬೆಸ್ಟ್! ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ