ಬೆಂಗಳೂರು(ಜೂ.01): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಗೆ ಮಹಿಳಾ ಅಧಿಕಾರಿಗಳನ್ನೇ ತನಿಖಾಧಿಕಾರಿಗಳನ್ನಾಗಿ ನೇಮಿಸುವ ಮೂಲಕ ಮಹಿಳಾ ಶೋಷಣೆ ವಿರುದ್ಧ ಎಸ್‌ಐಟಿ ಪರೋಕ್ಷ ಸಂದೇಶ ರವಾನಿಸಿದೆ.
ವಿದೇಶದ ಬಂದಿಳಿದ ಕೂಡಲೇ ಪ್ರಜ್ವಲ್ ಅವರನ್ನು ಎಸ್‌ಪಿ ಡಾ.ಸುಮನ್ ಡಿ.ಪೆನ್ನೇಕರ್ ನೇತೃತ್ವದ ಮಹಿಳಾ ಅಧಿಕಾರಿಗಳ ತಂಡ ಬಂಧಿಸಿತು. ಬಳಿಕ ಜೀಪಿನಲ್ಲಿ ಸಾಮಾನ್ಯ ಆರೋಪಿಯಂತೆ ಪ್ರಜ್ವಲ್‌ರನ್ನು ಮಧ್ಯದಲ್ಲಿ ಕೂರಿಸಿಕೊಂಡು ಅಜುಬಾಜಿನಲ್ಲಿ ಇನ್ಸ್‌ಪೆಕ್ಟರ್ ಗಳಾದ ಶೋಭಾ ಹಾಗೂ ಜಿ.ಶೋಭಾ ಕುಳಿತರು. ಮುಂದಿನ ಆಸನದಲ್ಲಿ ತನಿಖಾಧಿ ಕಾರಿ ಸುಮಾರಾಣಿ ಅಸೀನರಾಗಿದ್ದರು. ಈ ಜೀಪಿನ ಮುಂದೆ ಭದ್ರತೆಗೆ ಖುದ್ದು ಎಸ್ಪಿ ಸುಮನ್ ಅವರ ವಾಹನ ಸಾಗಿತು.
ಆನಂತರ ವೈದ್ಯಕೀಯ ತಪಾಸಣೆ ಹಾಗೂ ನ್ಯಾಯಾಲಯದಮುಂದೆ ಹಾಜರುಪಡಿಸಲು ಪ್ರಜ್ವಲ್ ಅವರನ್ನು ಮಹಿಳಾ ಅಧಿಕಾರಿಗಳು ಕರೆದೊಯ್ದರು. ಪ್ರಜ್ವಲ್ ವಿರುದ್ಧ ದಾಖಲಾಗಿರುವ ಮೂರು ಅತ್ಯಾಚಾರ ಪ್ರಕರಣಗಳ ತನಿಖಾಧಿಕಾರಿಗಳಾಗಿ ಮೂವರು ಮಹಿಳಾ ಇನ್ಸ್‌ಪೆಕ್ಟರ್‌ಗಳನ್ನೇ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇಮಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಕೋರ್ಟ್‌ಗೆ ಹಾಜರುಪಡಿಸಿದ SIT: ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ !
ಅದೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಸಂಸದರ ತಂದೆ ಹಾಗೂ ಮಾಜಿ ಸಚಿವ ರೇವಣ್ಣರವರ ಬಂಧನಕ್ಕೆ ಪುರುಷ ಅಧಿಕಾರಿಗಳ ತಂಡ ತೆರಳಿತ್ತು. ಅಲ್ಲದೆ ಆ ಪ್ರಕರಣದ ತನಿಖಾಧಿಕಾರಿ ಸಹ ಪುರುಷ ಅಧಿಕಾರಿ ಎಂಬುದು ಗಮನಾರ್ಹ ಸಂಗತಿಯಾಗಿದೆ. ಇಡೀ ತಂಡದಲ್ಲಿ 2 ಮಹಿಳಾ ಎಸ್ಪಿ, 2 ಮಹಿಳಾ ಎಸಿಪಿ, 5 ಮಹಿಳಾ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 20 ಮಂದಿ ಮಹಿಳೆಯರೇ ಇದ್ದಾರೆ.
ಸಂತ್ರಸ್ತೆಯರಿಗೆ ಅಭಯ ನೀಡಲು ಲೇಡಿ ತಂಡ?:
ಪ್ರಜ್ವಲ್ ವಿರುದ್ಧ ತನಿಖೆಗೆ ಮಹಿಳಾ ಅಧಿಕಾರಿಗಳ ನೇಮಕ ಹಿಂದೆ ಜೀವ ಭೀತಿಯಿಂದ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ಕೊಡಲು ಹಿಂದೇಟು ಹಾಕುತ್ತಿರುವ ಸಂತ್ರಸ್ತೆಯರಿಗೆ ಆತ್ಮಸ್ಥೆರ್ಯ ತುಂಬುವ ಯೋಜನೆ ಸಹ ಇದೆ ಎನ್ನಲಾಗಿದೆ. ಮಹಿಳೆ ಅಧಿಕಾರಿಗಳು ನಿರ್ಭೀತಿಯಿಂದ ಸಂಸದರನ್ನು ಸಾಮಾನ್ಯ ಆರೋಪಿಯಂತೆ ಸಾರ್ವಜನಿಕವಾಗಿ ಕರೆದುಕೊಂಡು ಹೋದರೆ ಶೋಷಣೆಗೊಳಗಾ ದವರಿಗೆ ಧೈರ್ಯ ಬರಲಿದೆ. ಅಲ್ಲದೆ ಎಂಥ ಪ್ರಭಾವಿಯಾದರೂ ಕಾನೂನಿನ ಮುಂದೆ ಸಾಮಾನ್ಯ ಎನ್ನುವುದು ಅರಿವಾಗಲಿದೆ. ಆಗ ಎಸ್‌ಐಟಿ ಮೇಲೆ ವಿಶ್ವಾಸ ಬರಲಿದೆ ಎಂಬುದು ಅಧಿಕಾರಿಗಳ ಆಲೋಚನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ