ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರತಿಧ್ವನಿಸಿದ್ದು, 48 ನಾಯಕರ ಪೆನ್‌ಡ್ರೈವ್‌ಗಳಿವೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು (ಮಾ.21): ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸುವ ಜನಪ್ರತಿನಿಧಿಗಳ ವಿರುದ್ಧದ ಬೃಹತ್ ಹನಿಟ್ರ್ಯಾಪ್ ಜಾಲದ ವಿಚಾರ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿದೆ. ‘ಈ ಜಾಲದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಪಕ್ಷಗಳ 48 ನಾಯಕರು ಸಿಲುಕಿದ್ದು, ಅವರ ಪೆನ್‌ಡ್ರೈವ್‌ಗಳಿವೆ’ ಎಂಬ ಮಾಹಿತಿಯನ್ನು ಸಹಕಾರ ಸಚಿವ ಕೆ.ರಾಜಣ್ಣ ಸದನದಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ‘ನನ್ನ ವಿರುದ್ಧವೂ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಲಿ’ ಎಂದು ಆಗ್ರಹಿಸಿದ್ದಾರೆ.
ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸದನಕ್ಕೆ ಅಶ್ವಾಸನೆ ನೀಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ‘ಹನಿಟ್ರ್ಯಾಪ್ ಆರೋಪ ಮಾಡುವವರು ಆರೋಪ ಮಾಡುವ ಬದಲು ಪೊಲೀಸರಿಗೆ ದೂರು ನೀಡಲಿ’ ಎಂದು ಹೇಳಿದ್ದಾರೆ.
ಇದೇ ವೇಳೆ, ರಾಜಣ್ಣರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ತಮ್ಮ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೂ ದೂರು ನೀಡುವುದಾಗಿ ಹೇಳಿದ್ದಾರೆ.
ಈ ನಡುವೆ, ಸಚಿವರ ಈ ಸ್ಫೋಟಕ ಹೇಳಿಕೆ ಸದನದಲ್ಲಿ ಗದ್ದಲವನ್ನುಂಟು ಮಾಡುವ ಜತೆಗೆ ಗಂಭೀರ ಚರ್ಚೆಗೆ ಕಾರಣವಾಯಿತು. ಬಿಜೆಪಿ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಸೇರಿ ಇತರೆ ಸದಸ್ಯರು, ‘ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳ ವಿರುದ್ಧ ಈ ರೀತಿ ನಡೆಯುವುದು ಅಪಾಯಕಾರಿ ಬೆಳವಣಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ನಡೆದಿದ್ದೇನು?:
ರಾಜ್ಯದ ಸಚಿವರೊಬ್ಬರ ಮೇಲೆ ಹನಿಟ್ರಾಪ್ ಯತ್ನ ನಡೆದಿದೆ ಎಂಬ ಚರ್ಚೆ 2 ದಿನದ ಹಿಂದೆ ಆರಂಭವಾಗಿತ್ತು. ಆದರೆ ಹೆಸರು ಬಹಿರಂಗವಾಗಿರಲಿಲ್ಲ. ಈ ಬಗ್ಗೆ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ರಾಜ್ಯದಲ್ಲಿ ಸಹಕಾರ ಸಚಿವರ ವಿರುದ್ಧ ಹನಿಟ್ರ್ಯಾಪ್ ಆಗಿದೆ. ಇವತ್ತು ರಾಜಣ್ಣ ಮೇಲೆ ಆಗಿದ್ದು, ನಾಳೆ ಮತ್ತೊಬ್ಬರ ಮೇಲೆ ಆಗಬಹುದು. ಇದೊಂದು ಕೆಟ್ಟ ಸಂಸ್ಕೃತಿ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ’ ಎಂದರು. ಈ ಮೂಲಕ ಸದನದ ಹೊರಗೆ ನಡೆದಿದ್ದ ಚರ್ಚೆಯನ್ನು ಸದನದ ಒಳಗೆ ಸಚಿವರ ಹೆಸರು ಸಮೇತ ಪ್ರಸ್ತಾಪಿಸಿ ಭಾರಿ ಚರ್ಚೆಗೆ ನಾಂದಿ ಹಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ‘ರಾಜ್ಯದಲ್ಲಿ ಸಿ.ಡಿ, ಪೆನ್ ಡ್ರೈವ್‌ಗಳ ಕಾರ್ಖಾನೆ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದು ಗುರುತರ ಆರೋಪ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜಿಲ್ಲೆಯ ಸಚಿವರಾಗಿ ಇರುವವರು ನಾನು (ರಾಜಣ್ಣ) ಮತ್ತು ಡಾ.ಜಿ.ಪರಮೇಶ್ವರ್ ಮಾತ್ರ’ ಎಂದರು.
‘ಪೆನ್‌ಡ್ರೈವ್‌ನಲ್ಲಿ 48 ಜನಪ್ರತಿನಿಧಿಗಳು ಇದ್ದಾರೆ. ಇದರಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ, ಎಲ್ಲಾ ಪಕ್ಷದವರೂ ಇದ್ದಾರೆ. ಅಲ್ಲದೆ, ಕೇವಲ ರಾಜ್ಯ ನಾಯಕರು ಮಾತ್ರವಲ್ಲದೆ, ರಾಷ್ಟ್ರದ ನಾಯಕರೂ ಇದ್ದಾರೆ. ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ. ಇದನ್ನು ತನಿಖೆ ಮಾಡಬೇಕು. ನಿರ್ಮಾಪಕರು, ನಿರ್ದೇಶಕರು, ನಟರು ಯಾರು ಇದ್ದಾರೆಂಬುದು ಹೊರಗೆ ಬರಲಿ ಮತ್ತು ಜನರಿಗೆ ಗೊತ್ತಾಗಲಿ’ ಎಂದರು.
ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಮಾತನಾಡಿ, ‘ಜನಪ್ರತಿನಿಧಿಗಳ ಮೇಲೆ ಈ ರೀತಿ ಹನಿಟ್ರ್ಯಾಪ್ ಖಂಡನೀಯ. ಯಾರ ಬದುಕಿನಲ್ಲೂ ಈ ರೀತಿಯಾಗಬಾರದು. ಸಿದ್ಧಾಂತಗಳ ಮೇಲಿನ ವಿರೋಧ, ಯೋಜನೆಗಳ ಮೂಲಕ ಸೋಲಿಸಬಹುದು. ಆದರೆ, ಹನಿಟ್ರ್ಯಾಪ್ ಮೂಲಕ ಕಟ್ಟಿಹಾಕುವುದು ಸರಿಯಲ್ಲ. ಇದರ ಹಿಂದೆ ಯಾರ ಕೈವಾಡ ಇದೆ? ಯಾರ ಬೆಂಬಲ ಇದೆ ಎಂಬುದು ಗೊತ್ತಾಗಬೇಕು. ಇದು ಗೌರವದ ಪ್ರಶ್ನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಮುನಿರತ್ನ ಕೂಡ ಮಾತನಾಡಿ, ತಾವು ಕೂಡ ಇಂಥ ಕೃತ್ಯದ ಬಲಿಪಶು ಎಂದು ಅಳಲು ತೋಡಿಕೊಂಡರು.
ಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಿ, ‘ಇಂಥದ್ದಕ್ಕೆಲ್ಲ ಫುಲ್‌ಸ್ಟಾಪ್ ಆಗಬೇಕು. ವಿಧಾನಮಂಡಲವು ದೇಶದಲ್ಲೇ ಗೌರವವನ್ನು ಹೊಂದಿದೆ. ಸದನದಲ್ಲಿ ದೊಡ್ಡ ವ್ಯಕ್ತಿಗಳ ಕುರುಹುಗಳಿವೆ. ಅವರು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಸದನದ ಮಾರ್ಯಾದೆ ಕಾಪಾಡಬೇಕಾಗಿದ್ದು, ಇಂಥದ್ದಕ್ಕೆಲ್ಲ ಇತಿಶ್ರೀ ಹಾಕಬೇಕಿದೆ. ಇದು ಪ್ರತಿಯೊಬ್ಬ ಸದಸ್ಯರ ಮರ್ಯಾದೆ ಪ್ರಶ್ನೆ. ಲಿಖಿತ ದೂರು ನೀಡಿದ ಬಳಿಕ ಉನ್ನತಮಟ್ಟದ ತನಿಖೆ ನಡೆಸಲಾಗುವುದು’ ಎಂದರು. ಸಚಿವರ ಉತ್ತರಕ್ಕೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಮೇಜು ಕುಟ್ಟುವ ಮೂಲಕ ಸಹಮತ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೇವರ್ಗಿ-ಚಾಮರಾಜನಗರ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿ ಮಾಡಿ; ಹೆಚ್.ಡಿ.ಕುಮಾರಸ್ವಾಮಿ ಮನವಿ
ಬಳಿಕ ಸದನದ ಹೊರಗೆ ಕೂಡ ಈ ಬಗ್ಗೆ ಸಚಿವರು, ಶಾಸಕರು ಹೇಳಿಕೆ ನೀಡಿ ಹನಿಟ್ರ್ಯಾಪ್ ಯತ್ನವನ್ನು ಖಂಡಿಸಿದರು.
ರಾಜಣ್ಣ ಹನಿಟ್ರ್ಯಾಪ್ ಆಗಿದ್ದಾರೆ
ರಾಜ್ಯದಲ್ಲಿ ಸಹಕಾರ ಸಚಿವರ ವಿರುದ್ಧ ಹನಿಟ್ರ್ಯಾಪ್ ಆಗಿದೆ. ಇವತ್ತು ರಾಜಣ್ಣ ಮೇಲೆ ಆಗಿದ್ದು, ನಾಳೆ ಮತ್ತೊಬ್ಬರ ಮೇಲೆ ಆಗಬಹುದು. ಇದೊಂದು ಕೆಟ್ಟ ಸಂಸ್ಕೃತಿ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳ ವಿರುದ್ಧ ಈ ರೀತಿ ನಡೆಯುವುದು ಅಪಾಯಕಾರಿ ಬೆಳವಣಿಗೆ. ಇದರ ಹಿಂದೆ ಯಾರ ಕೈವಾಡ ಇದೆ? ಯಾರ ಬೆಂಬಲ ಇದೆ ಎಂಬುದು ಗೊತ್ತಾಗಬೇಕು.
- ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ನನ್ನ ಮೇಲೂ ಹನಿಟ್ರ್ಯಾಪ್ ಯತ್ನ:
ಪೆನ್‌ಡ್ರೈವ್‌ನಲ್ಲಿ 48 ಜನಪ್ರತಿನಿಧಿಗಳು ಇದ್ದಾರೆ. ಇದರಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ, ಎಲ್ಲಾ ಪಕ್ಷದವರೂ ಇದ್ದಾರೆ. ರಾಷ್ಟ್ರದ ನಾಯಕರೂ ಇದ್ದಾರೆ. ನನ್ನ ವಿರುದ್ಧವೂ ಹನಿಟ್ರ್ಯಾಪ್ ಯತ್ನ ನಡೆದಿದೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಲಿ. ನಿರ್ಮಾಪಕರು, ನಿರ್ದೇಶಕರು, ನಟರು ಯಾರು ಇದ್ದಾರೆಂಬುದು ಹೊರಗೆ ಬರಲಿ ಮತ್ತು ಜನರಿಗೆ ಗೊತ್ತಾಗಲಿ. ಇದರಲ್ಲಿ ಮುಚ್ಚುಮರೆ ಇಲ್ಲ. ನಾನೇನು ಶ್ರೀರಾಮಚಂದ್ರನಲ್ಲ, ಸತ್ಯಹರಿಶ್ಚಂದ್ರನೂ ಅಲ್ಲ.
- ಕೆ.ಎನ್. ರಾಜಣ್ಣ, ಸಚಿವ
6 ತಿಂಗಳಿಂದ ಹನಿಟ್ರ್ಯಾಪ್ ಯತ್ನನನ್ನ ತಂದೆ ಕೆ.ಎನ್.ರಾಜಣ್ಣ ಅಷ್ಟೇ ಅಲ್ಲ, ನನ್ನ ವಿರುದ್ಧವೂ ಕಳೆದ 6 ತಿಂಗಳಿನಿಂದ ಹನಿಟ್ರ್ಯಾಪ್ ಪ್ರಯತ್ನವಾಗುತ್ತಿದೆ. ವೀಡಿಯೋ ಕರೆ, ಮೆಸೇಜ್‌ಗಳು ಬರುತ್ತಿವೆ. ಅನೇಕ ನಾಯಕರ ಬಳಿಕ ನಮ್ಮ ತೇಜೋವಧೆ ಮಾಡಲು ಈ ಕೆಲಸ ಮಾಡಲಾಗುತ್ತಿದೆ. ಈ ಕೃತ್ಯ ಎಸಗುವವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಗೃಹ ಸಚಿವರಿಗೆ, ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುತ್ತೇನೆ.
- ರಾಜೇಂದ್ರ ರಾಜಣ್ಣ, ವಿಧಾನಪರಿಷತ್ ಸದಸ್ಯ---
ಇದಕ್ಕೆಲ್ಲ ಫುಲ್‌ಸ್ಟಾಪ್ ಅಗತ್ಯ
ಇಂಥದ್ದಕ್ಕೆಲ್ಲ ಫುಲ್‌ಸ್ಟಾಪ್ ಆಗಬೇಕು. ವಿಧಾನಮಂಡಲವು ದೇಶದಲ್ಲೇ ಗೌರವವನ್ನು ಹೊಂದಿದೆ. ಸದನದಲ್ಲಿ ದೊಡ್ಡ ವ್ಯಕ್ತಿಗಳ ಕುರುಹುಗಳಿವೆ. ಅವರು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಸದನದ ಮಾರ್ಯಾದೆ ಕಾಪಾಡಬೇಕಾಗಿದ್ದು, ಇಂಥದ್ದಕ್ಕೆಲ್ಲ ಇತಿಶ್ರೀ ಹಾಕಬೇಕಿದೆ. ಇದು ಪ್ರತಿಯೊಬ್ಬ ಸದಸ್ಯರ ಮರ್ಯಾದೆ ಪ್ರಶ್ನೆ. ಲಿಖಿತ ದೂರು ನೀಡಿದ ಬಳಿಕ ಉನ್ನತಮಟ್ಟದ ತನಿಖೆ ನಡೆಸಲಾಗುವುದು.
- ಜಿ. ಪರಮೇಶ್ವರ್, ಗೃಹ ಸಚಿವ
ಠಾಣೆಗೆ ದೂರು ನೀಡಿಸಹಕಾರ ಸಚಿವ ಕೆ.ಎನ್, ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಆಗದು. ಇದರಲ್ಲಿ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲು ತನಿಖೆಯಾಗಲಿ.
.- ಡಿ.ಕೆ. ಶಿವಕುಮಾರ್, ಡಿಸಿಎಂ
ರಾಜಣ್ಣ ಮೇಲೆ 2 ಬಾರಿ ಯತ್ನ
ರಾಜ್ಯ ಸಚಿವರಷ್ಟೇ ಅಲ್ಲ, ಎಲ್ಲ ಪಕ್ಷದ ದೆಹಲಿ ನಾಯಕರೂ ಹನಿಟ್ರ್ಯಾಪ್ ಸುಳಿಗೆ ಸಿಲುಕಿದ್ದಾರೆ. ರಾಜಣ್ಣ ಅವರ ಮೇಲೆ 2 ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, ಅದು ಯಶಸ್ವಿಯಾಗಿಲ್ಲ. ರಾಜಕೀಯವಾಗಿ ನಿರ್ನಾಮ ಮಾಡಲು ಈ ರೀತಿ ಹನಿಟ್ರ್ಯಾಪ್ ಪ್ರಯತ್ನ ಮಾಡಲಾಗಿದೆ. ಈ ಹಿಂದೆಯೇ ನನಗೆ ಗೊತ್ತಿತ್ತು. ದೂರು ನೀಡುವಂತೆ ಅವರಿಗೆ ಸಲಹೆ ನೀಡಿದ್ದೆ. ಈಗ ಅವರೇ ಬಹಿರಂಗಪಡಿಸಿದ್ದಾರೆ. ಇಂಥ ಕೃತ್ಯ ನಿಲ್ಲಬೇಕು.- ಸತೀಶ ಜಾರಕಿಹೊಳಿ, ಸಚಿವ