ಹಾಸನದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಹೋರಾಡಿದ ಪಿಟ್‌ಬುಲ್ ಶ್ವಾನ, ಹಾವನ್ನು ಕೊಂದ ಬಳಿಕ ತಾನೂ ಸಾವನ್ನಪ್ಪಿದೆ. ಈ ಘಟನೆಯು ಕಟ್ಟಾಯ ಗ್ರಾಮದಲ್ಲಿ ನಡೆದಿದ್ದು, ನಾಯಿ ಮತ್ತು ಹಾವಿನ ಕಾದಾಟದ ವಿಡಿಯೋ ವೈರಲ್ ಆಗಿದೆ.
ಹಾಸನ (ಮಾ.20): ಮನೆ ಸಮೀಪ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಸೆಣಸಾಡಿ ಕೊಂದು ಹತ್ತು ತುಂಡು ಮಾಡಿದ ಪಿಟ್‌ಬುಲ್ ಶ್ವಾನ ಕಡೆಗೆ ತಾನೂ ಸಾವನ್ನಪ್ಪಿದ ಘಟನೆ ಬುಧವಾರ ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ನಡೆದಿದೆ.
ಕಟ್ಟಾಯ ಗ್ರಾಮದ ಶಮಂತ್ ಎನ್ನುವವರ ತೋಟದಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ ತಳಿ ನಾಯಿಗಳನ್ನು ಸಾಕಿದ್ದರು. ಪಿಟ್‌ಬುಲ್ ಶ್ವಾನಕ್ಕೆ ಶಮಂತ್ ಅವರು ಭೀಮಾ ಎಂದು ಹೆಸರಿಟ್ಟಿದ್ದರು. ತೋಟದಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದ ಸಂದರ್ಭ ಬೃಹತ್ ಗಾತ್ರದ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಬಂದಿದೆ. ಈ ವೇಳೆ ಹೊರಗಡೆ ಮಕ್ಕಳು ಆಟವಾಡುತ್ತಿದ್ದು, ಕಾಳಿಂಗ ಸರ್ಪ ತೆಂಗಿನ ಗರಿಗಳ ಕೆಳಗೆ ಹೋಗಿದೆ. ಇದರಿಂದ ಮನೆಯ ಮಾಲೀಕರು ಹಾಗೂ ಮಕ್ಕಳಿಗೆ ತೊಂದರೆ ಆಗಬಹುದೆಂದು ಎಚ್ಚೆತ್ತುಕೊಂಡ ಶ್ವಾನಗಳು ಕೂಡಲೇ, ಗುಡ್ಡೆ ಹಾಕಿದ್ದ ತೆಂಗಿನ ಗರಿಗಳ ಅಡಿಯಲ್ಲಿದ್ದ ಕಾಳಿಂಗ ಸರ್ಪವನ್ನು ಎಳೆದ ತಂದು ಅದರೊಂದಿಗೆ ಸೆಣಸಾಡುವುದಕ್ಕೆ ಶುರುಮಾಡಿವೆ.
ಇದೇನಿದು ಏಕಾಏಕಿ ನಾಯಿಗಳು ಇಷ್ಟೇಕೆ ಬೊಗಳೂತ್ತಿವೆ ಎಂದು ಶಮಂತ್ ಅವರು ಬಂದು ನೋಡಿದ್ದಾರೆ. ಆಗ ಮನೆಯ ಹೊರಗೆ ಬೃಹತ್ ಗಾತ್ರದ ಕಾಳಿಂಗ ಸರ್ಪದೊಂದಿಗೆ ನಾಯಿಗಳು ಕಾದಾಡುವುದನ್ನು ನೋಡಿದ್ದಾರೆ. ಆಗ ಮಾಲೀಕ ಶಮಂತ್ ಹಾವಿನೊಂದಿಗೆ ನಾಯಿ ಕಾದಾಟವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಮನೆ ಮಾಲೀಕನಿಗೆ ತೊಂದರೆ ಕೊಡಲು ಬಂದಿದೆ ಎಂದು ಹಾವನ್ನು ಹಿಡಿದು ನಾಯಿ ಭೀಮಾ ತನ್ನ ಕಾದಾಟವನ್ನು ಮುಂದುವರೆಸಿದೆ.
ಇದನ್ನೂ ಓದಿ: ಕಾಳಿಂಗ ಸರ್ಪ 100 ವರ್ಷ ಬದುಕೋದು ನಿಜವೇ? ಇಲ್ಲಿದೆ ನೋಡಿ ಸತ್ಯಾಸತ್ಯತೆ
ಆದರೆ, ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ಹಾಗೂ ಬಲಿಷ್ಠವಾಗಿರುವ ಕಾಳಿಂಗ ಸಮರ್ಒದೊಂದಿಗೆ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಭೀಮಾ ನಾಯಿ, 12 ಅಡಿ ಉದ್ದದ ಸರ್ಪವನ್ನು 3 ತುಂಡುಗಳನ್ನಾಗಿ ಮಾಡಿ ಕೊಂದು ಹಾಕಿದೆ. ಆದರೆ, ಹಾವಿನೊಂದಿಗೆ ಕಾದಾಟದ ವೇಳೆ ನಾಯಿಯ ಮುಖದ ಭಾಗಕ್ಕೆ ಕಾಳಿಂಗ ಸರ್ಪ ಹಲವು ಬಾರಿ ಕಚ್ಚಿದ್ದು, ವಿಷ ನಾಯಿಯ ದೇಹಕ್ಕೆ ಸೇರಿದ ಪರಿಣಾಮ ಶ್ವಾನ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಆದರೆ, ಇದೇ ಸರ್ಪದೊಂದಿಗೆ ಕಾದಾಡಿದ ಮತ್ತೊಂದು ನಾಯಿ ಆರೋಗ್ಯವಾಗಿದೆ.
ನಾಯಿ ಹಾಗೂ ಕಾಳಿಂಗ ಸರ್ಪದ ಕಾದಾಟವನ್ನು ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಭೀಮಾ ಶ್ವಾನ ಹಲವು ಡಾಗ್ ಶೋನಲ್ಲಿ ಬಹುಮಾನ ಪಡೆದಿತ್ತು. ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ನಾಗರಹಾವು, ಕಾಳಿಂಗ ಸರ್ಪದಂತೆ ವಿಷಕಾರಿ ಈ 6 ಹಕ್ಕಿಗಳು!