
ಬೆಂಗಳೂರು (ಮಾ.24) : ವಿಧಾನಮಂಡಲದ ಅಧಿವೇಶನ ಮುಗಿದ ಬೆನ್ನಲ್ಲೇ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.
ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು ಎಂದು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಣ ಮುಂದಿನ ವಾರದಲ್ಲಿ ಮತ್ತೆ ಸಭೆ ಸೇರುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ವಿಜಯೇಂದ್ರ ಬದಲಾವಣೆ ಬಗ್ಗೆ ಸತತ ಒತ್ತಡ ಹೇರುವ ತಂತ್ರ ನಡೆಸಿದ್ದ ಯತ್ನಾಳ್ ಬಣದ ಮುಖಂಡರು ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಅಧಿವೇಶನ ಮುಗಿದ ಹಿನ್ನೆಲೆಯಲ್ಲಿ ತಮ್ಮ ಪ್ರಯತ್ನವನ್ನು ಮುಂದುವರೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಹಾಗಂತ ಓಲೈಕೆ ರಾಜಕಾರಣ ಮೆಚ್ಚೋದಿಲ್ಲ: ವಿಜಯೇಂದ್ರ
ಇದೇ ವೇಳೆ ಯತ್ನಾಳ್ ಮತ್ತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಬಣಗಳ ನಡುವೆ ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಪ್ರದರ್ಶಿಸಲು ಸಮಾವೇಶ ನಡೆಸುವ ಸಂಬಂಧ ಪೈಪೋಟಿ ಏರ್ಪಟ್ಟಿತ್ತು. ಇದಕ್ಕೆ ಸಂಬಂಧಿಸಿ ಪೂರ್ವಸಿದ್ಧತಾ ಸಭೆಗಳನ್ನೂ ನಡೆಸತೊಡಗಿದ್ದವು. ಬಳಿಕ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಮತ್ತು ಅಧಿವೇಶನದ ಪ್ರಯುಕ್ತ ಪೂರ್ವಸಿದ್ಧತಾ ಸಭೆಗಳಿಗೆ ಎರಡೂ ಬಣಗಳು ಬ್ರೇಕ್ ಹಾಕಿದ್ದವು. ಇದೀಗ ಮತ್ತೆ ಸಭೆಗಳಿಗೆ ಚಾಲನೆ ನೀಡುವರೋ ಅಥವಾ ಕೈಬಿಡುವುರೋ ಎಂಬುದನ್ನು ಕಾದು ನೋಡಬೇಕು.
ಇನ್ನು ಪಕ್ಷದ ರಾಜ್ಯ ಘಟಕದ ಚುನಾವಣೆಯ ಸಂಚಾಲಕರಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪುತ್ರನ ವಿವಾಹ ಸಮಾರಂಭದ ಕಾರಣಕ್ಕಾಗಿ ವ್ಯಸ್ತರಾಗಿದ್ದರು. ಇದೀಗ ವಿವಾಹ ಸಮಾರಂಭವೂ ಮುಗಿದಿದೆ. ಹೀಗಾಗಿ, ಇನ್ನು ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚೌಹಾಣ್ ಗಮನಹರಿಸಲಿದ್ದಾರೆ. ಶೀಘ್ರದಲ್ಲೇ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಬದಲಾವಣೆಗೆ ಪಟ್ಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ