ನಾವು ಈಗ 17 ಅಲ್ಲ, 50 ಮಂದಿ ಇದ್ದೇವೆ: ಜಾರಕಿಹೊಳಿ ಬಾಂಬ್!

By Kannadaprabha NewsFirst Published Feb 1, 2020, 10:27 AM IST
Highlights

ಗೆದ್ದ 11 ಶಾಸಕರಿಗೆ ಸಚಿವ ಪಟ್ಟಬೇಕು: ರಮೇಶ್‌ ಪಟ್ಟು| ಡಿಸಿಎಂ ಹುದ್ದೆಯನ್ನು ನಾನು ಕೇಳಿಲ್ಲ, ಕೊಟ್ಟರೆ ಬೇಡ ಎನ್ನಲ್ಲ| ನಾವು ಈಗ 17 ಅಲ್ಲ, 50 ಮಂದಿ ಇದ್ದೇವೆ: ಜಾರಕಿಹೊಳಿ

ಬೆಂಗಳೂರು[ಫೆ. 01]: ಸಂಪುಟ ವಿಸ್ತರಣೆ ವೇಳೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನಾವೆಲ್ಲರೂ ನಮ್ಮ ಸ್ಥಾನವನ್ನು ತ್ಯಾಗ ಮಾಡಿ ಬಂದಿದ್ದೇವೆ ಎಂದು ಬಿಜೆಪಿಯ ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬದ ವಿಚಾರದಲ್ಲಿ ನಮಗೆ ಯಾವುದೇ ಅಸಮಾಧಾನ ಇಲ್ಲ. ಒಂದು ತಿಂಗಳು ತಡವಾದರೂ ಬೇಸರ ಇಲ್ಲ. ಆದರೆ, ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಬೇಡಿಕೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಪಚುನಾವಣೆಯಲ್ಲಿ ಸೋತವರಿಗೂ ಸ್ಥಾನಮಾನ ನೀಡಬೇಕು ಎಂಬುದು ನಮ್ಮ ಬಯಕೆ. ಆ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ ಎಂದಷ್ಟೇ ತಿಳಿಸಿದರು.

‘ನನಗೆ ಮಂತ್ರಿಯಾಗಲು ಗಡಿಬಿಡಿ ಇಲ್ಲ, ಜಾರಕಿಹೊಳಿಗೆ ಡಿಸಿಎಂ ಹುದ್ದೆ ಕೊಡಿ’

ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ:

ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಒಂದು ವೇಳೆ ಸ್ಥಾನ ಸಿಕ್ಕರೆ ಯಾಕೆ ಬೇಡ ಎಂದು ಹೇಳಬೇಕು. ಬೆಳಗಾವಿ ಜಿಲ್ಲೆಗೆ ಎರಡಲ್ಲ, ಮೂರು ಉಪಮುಖ್ಯಮಂತ್ರಿ ಹುದ್ದೆ ಮಾಡಲಿ ಪರವಾಗಿಲ್ಲ. ಶಾಸಕ ಮಹೇಶ ಕುಮಟಳ್ಳಿ ಬೆಳಗಾವಿ ಜಿಲ್ಲೆಗೆ ಎರಡು ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ನೂತನ ಶಾಸಕರ ಮುಖಂಡ ಎಂಬುದಾಗಿ ನನ್ನನ್ನು ಗುರುತಿಸುತ್ತಿದ್ದಾರೆ. ಆದರೆ ನಾನು ಮುಖಂಡನಲ್ಲ. ನನ್ನ ಜತೆ ಇರುವ ಎಲ್ಲರೂ ನಾಯಕರೇ ಎಂದು ಇದೇ ವೇಳೆ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದು ಬಂದ 17 ಶಾಸಕರಲ್ಲಿ ಇದೀಗ ಒಗ್ಗಟ್ಟು ಉಳಿದಿಲ್ಲವಂತೆ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಜಾರಕಿಹೊಳಿ, ನಾವು ಈಗ 17 ಮಂದಿಯಷ್ಟೇ ಅಲ್ಲ. 50 ಮಂದಿ ಇದ್ದೇವೆ ಎಂದು ವ್ಯಂಗ್ಯವಾಗಿ ಹೇಳಿ ನಿರ್ಗಮಿಸಿದರು.

ಬಿಎಸ್‌ವೈ ದೆಹಲಿ ಬ್ರೇಕಿಂಗ್, ಯಾರಿಗೆಲ್ಲ ಶುಭ ಶುಕ್ರವಾರ?

click me!