ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆ ಬಿರುಸು? ಎಸ್ಕಾರ್ಟ್‌ ಬಿಟ್ಟು ಡಿನ್ನರ್ ಸಭೆಗೆ ಹಾಜರಾದ ಸಿಎಂ

Kannadaprabha News   | Kannada Prabha
Published : Apr 24, 2026, 06:17 AM IST
karnataka politics news

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವದ ಬಗ್ಗೆ ರಹಸ್ಯ ಸಭೆ ನಡೆಸಿದ್ದಾರೆ. ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಯಾಗಿದ್ದು, ರಾಜ್ಯ  ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ನವದೆಹಲಿ: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ಭೇಟಿ ನೀಡಿದ್ದಾರೆ. ‘ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಅವರು ಯಾರು ಎಂದು ಹೇಳುವುದಿಲ್ಲ. ದೆಹಲಿಗೆ ನಾನು ಗಾಳಿ ಕುಡಿಯಲು ಬಂದಿಲ್ಲ. ಬಿಸಿಲು ಇದೆ, ನೀರು ಕುಡಿಯಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸಚಿವ ಜಮೀರ್‌ಗೆ ಸಿಎಂ ಅಭಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರೊಂದಿಗಿನ ಸಭೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಸಂಬಂಧ ಅಲ್ಪಸಂಖ್ಯಾತ ನಾಯಕರ ಮೇಲೆ ಆತುರದ ಕ್ರಮ ಆಗಿರುವ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು. ಸಭೆಯಲ್ಲಿ ಸಿದ್ದರಾಮಯ್ಯ ಅವರು, ಸಲೀಂ ಅಹ್ಮದ್‌ ಹಾಗೂ ಅಬ್ದುಲ್‌ ಜಬ್ಬಾರ್ ಅವರ ಮೇಲಿನ ಆರೋಪ ಹಾಗೂ ಪಕ್ಷ ಕ್ರಮ ಕೈಗೊಂಡ ಕಾರಣದ ಬಗ್ಗೆ ವಿವರಣೆ ನೀಡಿದರು ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರು, ಉಪಚುನಾವಣೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ತಮ್ಮ ಹೊಣೆಗಾರಿಕೆ ನಿಭಾಯಿಸಿದ್ದಾರೆ. ಹೀಗಾಗಿ ಅವರ ಮೇಲೆ ಯಾವುದೇ ಕ್ರಮ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಬೆಂಗಳೂರು: ಪಂಚ ರಾಜ್ಯ ಹಾಗೂ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಗಳ ಫಲಿತಾಂಶ ಬಳಿಕ ರಾಜ್ಯದಲ್ಲಿ ಬಿರುಸಿನ ರಾಜಕೀಯ ಬೆಳವಣಿಗೆಯ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಉಭಯ ಬಣಗಳಲ್ಲಿ ಮುಗುಂ ಆಗಿ ಚಟುವಟಿಕೆ ಆರಂಭಗೊಂಡಿದೆ.

ಮುಖ್ಯವಾಗಿ ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಸ್ಕಾರ್ಟ್‌ ವಾಹನ ಬಿಟ್ಟು ಬುಧವಾರ ತಡರಾತ್ರಿ ಡಿನ್ನರ್‌ ಸಭೆಗೆ ತೆರಳಿದ್ದು, ಈ ಸಭೆಯಲ್ಲಿ ಆಪ್ತ ಸಚಿವರಾದ ಡಾ.ಜಿ ಪರಮೇಶ್ವರ್, ಬೈರತಿ ಸುರೇಶ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್‌ ಸೇರಿ ಹಲವರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಂಪುಟ ಪುನಾರಚನೆಗೆ ಒತ್ತಡ:

ಸಭೆಯಲ್ಲಿ ಸಚಿವ ಸಂಪುಟ ಪುನರ್ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಕುರಿತು ಪ್ರಮುಖವಾಗಿ ಚರ್ಚೆ ನಡೆಯಿತು. ಮೇ 21ಕ್ಕೆ ಸರ್ಕಾರ 3 ವರ್ಷ ಪೂರೈಸುತ್ತಿದ್ದು, ಆಕಾಂಕ್ಷಿ ಶಾಸಕರಿಂದ ಸಂಪುಟ ಪುನರ್‌ರಚನೆಗೆ ಒತ್ತಡ ಹೆಚ್ಚುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದ್ದು, ಸಂಪುಟ ಪುನರ್‌ ರಚನೆ ವಿಳಂಬವಾದರೆ ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಬಹುದು. ಹೀಗಾಗಿ ಸಂಪುಟ ಪುನರ್‌ರಚನೆಗೆ ಒತ್ತಡ ಹೇರಬೇಕು ಎಂದು ಆಪ್ತ ಸಚಿವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಪಷ್ಟ ಸಂದೇಶಕ್ಕಾಗಿ ಒತ್ತಡ:

ಜತೆಗೆ, ಆಗಾಗ ಪ್ರಸ್ತಾಪಗೊಂಡು ಗೊಂದಲಕ್ಕೆ ಕಾರಣವಾಗುತ್ತಿರುವ ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಬೀಳುವಂತಹ ಸ್ಪಷ್ಟ ಸಂದೇಶ ನೀಡುವಂತೆ ಹೈಕಮಾಂಡ್‌ ಬಳಿ ಕೇಳಲು ಆಪ್ತ ಸಚಿವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಸಚಿವ ಸಂಪುಟ ಪುನಾರಚನೆಗೆ ಪಟ್ಟು ಹಿಡಿಯುವಂತೆಯೂ ಒತ್ತಾಯಿಸಿದರು ಎನ್ನಲಾಗಿದೆ.

ಒಳ ಮೀಸಲಾತಿ ಬಗ್ಗೆ ಎಚ್ಚರಿಕೆ ಹೆಜ್ಜೆಗೆ ಸಲಹೆ:

ಇನ್ನು ಎಸ್ಸಿ ಒಳ ಮೀಸಲಾತಿ ಕುರಿತು ದಲಿತರಲ್ಲಿ ಬಣ ಜಗಳ ಶುರುವಾಗಿವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಳೆದು ತೂಗಿ ನಿರ್ಧಾರ ಮಾಡಬೇಕು. ಇದನ್ನು ಜಾಣ್ಮೆಯಿಂದ ನಿಭಾಯಿಸಲು ವಿಫಲವಾದರೆ ಒಳ ಮೀಸಲಾತಿ ಜಾರಿ ಮಾಡಿದ ಶ್ರೇಯದ ಬದಲು ಮತ ವಿಭಜನೆಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈಗಾಗಲೇ ಪಕ್ಷದ ತಪ್ಪು ನಿರ್ಧಾರಗಳಿಂದ ವಾಲ್ಮೀಕಿ ಸಮುದಾಯ ಹಾಗೂ ಅಲ್ಪಸಂಖ್ಯಾತರಲ್ಲಿ ಪಕ್ಷದ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ. ಹೀಗಾಗಿ ಒಳ ಮೀಸಲಾತಿಯನ್ನು ಸೂಕ್ಷ್ಮವಾಗಿ ಜಾರಿ ಮಾಡಬೇಕು ಎಂದು ಸಭೆಯಲ್ಲಿ ಸಚಿವರು ಎಚ್ಚರಿಸಿದರು ಎಂದು ತಿಳಿದುಬಂದಿದೆ.

ಡಿಕೆ ಬಣದಿಂದಲೂ ಸಿದ್ಧತೆ:

ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ತೆರಳಿದ್ದು, ಇದಕ್ಕೂ ಮೊದಲು ಆಪ್ತ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಾಯಕತ್ವ ಬದಲಾವಣೆಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ 3 ವರ್ಷ ಪೂರ್ಣಗೊಂಡಿದ್ದು, ನಾಯಕತ್ವ ಬದಲಾವಣೆಗೆ ಒತ್ತಡ ಹೇರಬೇಕು. ಸಂಪುಟ ಪುನರ್‌ ರಚನೆಗೆ ಅವಕಾಶ ನೀಡಬಾರದು. ಒಂದೊಮ್ಮೆ ಸಂಪುಟ ಪುನರ್‌ರಚನೆ ಆದರೆ ನಾಯಕತ್ವ ಬದಲಾವಣೆ ಕೂಗು ಮಹತ್ವ ಕಳೆದುಕೊಳ್ಳಲಿದೆ ಎಂದು ಚರ್ಚಿಸಿರುವುದಾಗಿ ತಿಳಿದುಬಂದಿದೆ.

ಇನ್ನು ಶಿವಕುಮಾರ್‌ ಅವರು ಶುಕ್ರವಾರ ಕೇಂದ್ರ ಸಚಿವರೊಂದಿಗೆ ಭೇಟಿ ಮಾಡಲಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೀಗಾಗಿ ಎರಡೂ ಬಣಗಳ ರಾಜಕೀಯ ನಡೆಗಳು ಕುತೂಹಲ ಮೂಡಿಸಿವೆ.

ಡಿನ್ನರ್‌ ಸಭೆ ಸರ್ಜರಿ ಅಲ್ಲ, ಜನರಲ್‌ ಚೆಕಪ್‌

ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಅಷ್ಟೇನೂ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಅದು ಸರ್ಜರಿ ಅಲ್ಲ ಜನರಲ್‌ ಚೆಕಪ್‌ ಅಷ್ಟೇ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಚಿವ ಸಂಪುಟ ಪುನರ್‌ ರಚನೆ ಸೇರಿದಂತೆ ಹಲವು ವಿಚಾರದ ಬಗ್ಗೆ ತೀರ್ಮಾನ ಆಗಬೇಕಿದೆ. ಅಹಿಂದ ಒಟ್ಟುಗೂಡಿಸುವ ಕೆಲಸ ಆಗಬೇಕು.

- ಸತೀಶ್ ಜಾರಕಿಹೊಳಿ, ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC ಕನ್ನಡದಲ್ಲಿ ಫೇಲ್‌ ಆಗಿದ್ದಕ್ಕೆ ವಿದ್ಯಾರ್ಥಿ ದುರಂತ ಸಾವು, ಪಾಸಾದ ಖುಷಿಗೆ ಈಜಲು ಹೋದ ವಿದ್ಯಾರ್ಥಿಯೂ ದುರ್ಮರಣ!
ಮೇ 9ಕ್ಕೆ ಬಿಎಸ್‌ವೈ ಅಭಿಮಾನೋತ್ಸವ: ಚಿತ್ರದುರ್ಗದಲ್ಲಿ ಆಯೋಜನೆ । ಅಮಿತ್‌ ಶಾ ಭಾಗಿ - 10 ಲಕ್ಷ ಜನ ಭಾಗಿ ನಿರೀಕ್ಷೆ