ಮೇ 9ಕ್ಕೆ ಬಿಎಸ್‌ವೈ ಅಭಿಮಾನೋತ್ಸವ: ಚಿತ್ರದುರ್ಗದಲ್ಲಿ ಆಯೋಜನೆ । ಅಮಿತ್‌ ಶಾ ಭಾಗಿ - 10 ಲಕ್ಷ ಜನ ಭಾಗಿ ನಿರೀಕ್ಷೆ

Kannadaprabha News   | Kannada Prabha
Published : Apr 24, 2026, 04:53 AM ISTUpdated : Apr 24, 2026, 04:56 AM IST
BSY celebration event Chitradurga on May 9

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸಾರ್ಥಕತೆಯನ್ನು ಆಚರಿಸಲು ಮೇ 9 ರಂದು ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ' ಹಮ್ಮಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ

ಬೆಂಗಳೂರು (ಏ.24): ಮೇ 9ರಂದು ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅಭಿನಂದಿಸಲು ರಾಜ್ಯ ಬಿಜೆಪಿಯಲ್ಲಿ ಭರದ ಸಿದ್ಧತೆ ಆರಂಭವಾಗಿದ್ದು, ಅಂದು ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ‘ಜನರ ಮಡಿಲಲ್ಲಿ ಸಾರ್ಥಕ 50 ವರುಷ ಬಿಎಸ್‌ವೈ ಅಭಿಮಾನೋತ್ಸವ’ ಎಂಬ ಲಾಂಛನ (ಲೋಗೋ) ಬಿಡುಗಡೆ ಮಾಡಲಾಗಿದೆ.

ಅಭಿಮಾನೋತ್ಸವದ ಹಿಂದಿನ ದಿನ ಅಂದರೆ ಮೇ 8ರಂದು ಸಂಜೆ 6 ಗಂಟೆಗೆ ಯಡಿಯೂರಪ್ಪ ಅವರ ಪುರಪ್ರವೇಶ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಚಿತ್ರದುರ್ಗದ ಸಂಸದರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತಿತರ ಮುಖಂಡರು ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಲಾಂಛನ ಬಿಡುಗಡೆಗೊಳಿಸಿದರು.

26ರಂದು ವೇದಿಕೆ ಭೂಮಿ ಪೂಜೆ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಇದೇ ತಿಂಗಳ 26ರಂದು ಬೆಳಗ್ಗೆ 10 ಗಂಟೆಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಕಾರ್ಯಕ್ರಮದ ಸ್ಥಳಗಳಲ್ಲಿ ಪೆಂಡಾಲ್, ಸ್ಟೇಜ್ ಮುಂತಾದ ವ್ಯವಸ್ಥೆಗಳನ್ನು ಪ್ರಾರಂಭಿಸಲು ಈ ಪೂಜೆ ನಡೆಯಲಿದೆ. ಅಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಅನೇಕ ಗಣ್ಯರು, ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯ ಸುತ್ತಿದ್ದಾರೆ. ರೈತರ ಪರ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಮಾಜಸೇವೆ ಕುರಿತು ಅವರ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಅಭಿಮಾನೋತ್ಸವ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಯಡಿಯೂರಪ್ಪ ಅವರನ್ನು ಸನ್ಮಾನಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

10 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ:

ಈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ತಂಡಗಳನ್ನು ರಚಿಸಲಾಗಿದೆ. ಅಭಿಮಾನೋತ್ಸವದ ಹಿಂದಿನ ದಿನ ಅಂದರೆ 8ರಂದು ಸಂಜೆ 6 ಗಂಟೆಗೆ ಯಡಿಯೂರಪ್ಪನವರ ಪುರಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾಡಿನ ಎಲ್ಲಾ ಮಠಾಧೀಶರು, ಮಾಜಿ ಮುಖ್ಯಮಂತ್ರಿಗಳು, ಸಚಿವರು ಮತ್ತು ಗಣ್ಯಮಾನ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಲ್ಲ ಸಾಹಿತಿಗಳು, ಒಡನಾಡಿಗಳು, ಕಲಾವಿದರು ಸೇರಿ ಸಮಾಜದ ಎಲ್ಲ ರಂಗದವರು ಭಾಗವಹಿಸುತ್ತಾರೆ ಎಂದು ಕಾರಜೋಳ ವಿವರಿಸಿದರು.

ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಸಂಭ್ರಮಾಚರಣೆ ಮೂಲಕ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿಗೆ ಯಡಿಯೂರಪ್ಪ ಅವರ ಕೊಡುಗೆಯನ್ನು ಎಲ್ಲ ವರ್ಗದವರೂ ಪ್ರಶಂಸಿಸುತ್ತಾರೆ. ಇದಕ್ಕಾಗಿ ಅರ್ಥಪೂರ್ಣ, ಭವ್ಯ ಕಾರ್ಯಕ್ರಮ ನಡೆಸುತ್ತಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದು ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ
9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ