ಗೋವಾಕ್ಕೆ ಹೋಗೋರಿಗೆ ಗಾಡಿಗೂ ಎಣ್ಣೆ; ಬಾಡಿಗೂ ಎಣ್ಣೆ| ಪ್ರತಿಭಟನೆಯಲ್ಲಿ ಜಂಗಮರಾದ ಕಮಲಪತಿಗಳು!

By Kannadaprabha News  |  First Published Jul 1, 2024, 1:27 PM IST

ಜಂಗಮ ಸಮಾಜದವರಿಗೆ ತಮ್ಮ ಪ್ರತಿಭಟನೆ ಇಷ್ಟು ದೊಡ್ಡ ಪ್ರಮಾಣಕ್ಕೆ ಏರಿದ್ದು ಹೇಗೆ ಎಂದು ಅಚ್ಚರಿ. ಬಿಜೆಪಿ ಮುಖಂಡರು ಪ್ರತಿಭಟನೆ ಇದೆ ಬನ್ನಿ ಎಂದಷ್ಟೇ ಹೇಳಿದ್ದರು, ಯಾಕೆ ಮತ್ತು ಯಾವ ಪ್ರತಿಭಟನೆ ಎಂದು ತಿಳಿಸಿರಲಿಲ್ಲ!
 


ಕೊಪ್ಪಳದಲ್ಲೊಂದು ಪ್ರತಿಭಟನೆಯ ಫಜೀತಿ ನಡೆಯಿತು. ವಾಲ್ಮೀಕಿ ನಿಗಮದ ಅಕ್ರಮ ಕುರಿತು ಬಿಜೆಪಿಯಿಂದ ಕೊಪ್ಪಳ ಬಸವೇಶ್ವರ ಸರ್ಕಲ್‌ನಲ್ಲಿ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ 10.30ಕ್ಕೆ ಎಂದು ನಿಗದಿಯಾಗಿತ್ತು. ಆದರೆ ಅಷ್ಟೊತ್ತಿಗೆ ಬಹುತೇಕರು ಬಂದಿರಲಿಲ್ಲ.

ಅದೇ ಸಮಯದಲ್ಲಿ ರೇಣುಕಾಸ್ವಾಮಿ ಹತ್ಯೆ(Renuka swamy murder case) ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಂಗಮ ಸಮಾಜದಿಂದಲೂ ಅದೇ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಆರಂಭವಾಯಿತು. ಘೋಷಣೆ ಮೊಳಗತೊಡಗಿತ್ತು. ಆಗ ಅಲ್ಲಿಗೆ ಬಂದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಹೋರಾಟಗಾರರು ಇದೇ ನಾವು ಪಾಲ್ಗೊಳ್ಳಬೇಕಾದ ಪ್ರತಿಭಟನೆ ಎಂದು ತಿಳಿದು ಸೇರಿಕೊಂಡರು. ಘೋಷಣೆಯನ್ನು ಭರ್ಜರಿಯಾಗಿ ಕೂಗತೊಡಗಿದರು.

Tap to resize

Latest Videos

ಜಂಗಮ ಸಮಾಜದವರಿಗೆ ತಮ್ಮ ಪ್ರತಿಭಟನೆ ಇಷ್ಟು ದೊಡ್ಡ ಪ್ರಮಾಣಕ್ಕೆ ಏರಿದ್ದು ಹೇಗೆ ಎಂದು ಅಚ್ಚರಿ. ಏನೇ ಆಗಲಿ ನಮ್ಮ ಪ್ರತಿಭಟನೆ ಜೋರಾಯಿತಲ್ಲ ಎಂದು ಖುಷಿಪಡುತ್ತಿದ್ದರು.

ದರ್ಶನ್ ಭೇಟಿಗೆ ಹುಬ್ಬಳ್ಳಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಅಜ್ಜಿ!

ಇತ್ತ ವಾಲ್ಮೀಕಿ ನಿಗಮ ಅಕ್ರಮ(Valmiki corporation scam)ಕ್ಕೆ ಪ್ರತಿಭಟನಾಕಾರರಿಗಾಗಿ ಕಾಯುತ್ತಿದ್ದ ಬಿಜೆಪಿ ನಾಯಕರಿಗೆ ನಮ್ಮ ಹಕ್ಕಿಗಳು ರೇಣುಕಾಸ್ವಾಮಿ ಹತ್ಯೆ ಸಂಬಂಧಿ ಪ್ರತಿಭಟನೆಯಲ್ಲಿ ಕೂಗುತ್ತಿವೆ ಎಂಬುದು ಅರ್ಥವಾಯ್ತು.

ಸೋ, ನಿಧಾನಕ್ಕೆ ಒಬ್ಬೊಬ್ಬರನ್ನೇ ಕರೆದುಕೊಂಡು ಹೋಗುವಷ್ಟರಲ್ಲಿ ಸಾಕುಬೇಕಾಯಿತು. ಪಕ್ಕಕ್ಕೆ ಕರೆದು ಹೇಳಿ ಹೇಳಿ ಕರೆದುಕೊಂಡು ಹೋಗುವ ದೃಶ್ಯ ಮಜಾವಾಗಿತ್ತು.

ಆಗಿದ್ದೇನೆಂದರೆ, ಬಿಜೆಪಿ ಮುಖಂಡರು ಪ್ರತಿಭಟನೆ ಇದೆ ಬನ್ನಿ ಎಂದಷ್ಟೇ ಹೇಳಿದ್ದರು, ಯಾಕೆ ಮತ್ತು ಯಾವ ಪ್ರತಿಭಟನೆ ಎಂದು ತಿಳಿಸಿರಲಿಲ್ಲ!

ಪೆನ್‌ಡ್ರೈವ್‌ಗೂ ಡಿಕೆಶಿ, ಪೈಪ್‌ಲೈನ್‌ಗೂ ಡಿಕೆಶಿ:

ಅದೇನೋ ಗಾದೆಯಿದೆಯಲ್ಲ ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಅಂತ. ಹೀಗಾಗಿದೆ ರಾಜ್ಯದ ಪ್ರತಿಪಕ್ಷದವರ ಡಿಕೇಶಿ ಜಪ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದ ಆರಂಭಗೊಂಡು ರಸ್ತೆ ಗುಂಡಿವರೆಗೂ ರಾಜ್ಯದಲ್ಲಿ ಏನೇ ನಡೆದರೂ ಅದರ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಕಾಣುತ್ತಾರೆ ಪ್ರತಿಪಕ್ಷದವರು. ಮೊನ್ನೆ ತುಮಕೂರಿನಲ್ಲೂ ಹೀಗಾಯ್ತು.

ತುಮಕೂರು ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರನ್ನು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಡಿ ಪೈಪ್ ಲೈನ್ ಮೂಲಕ ಮಾಗಡಿಗೆ ತೆಗೆದುಕೊಂಡು ಹೋಗುವ ತೀರ್ಮಾನದ ಹಿಂದೆ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ತುಮಕೂರು ಜಿಲ್ಲೆಯಾದ್ಯಂತ ಹುಯಿಲೆದ್ದಿದೆ.

ಈ ಸಂಬಂಧ ತುಮಕೂರು ಜಿಲ್ಲೆಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ರಸ್ತೆ ತಡೆಯಾಯ್ತು, ಬಂದ್ ಆಯ್ತು, ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಹೀಗೆ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ತುಮಕೂರಿನ ವಿರೋಧ ಪಕ್ಷದ ಶಾಸಕರು ಪತ್ರಿಕಾಗೋಷ್ಠಿ ಕರೆದು ತುಮಕೂರಿನಿಂದ ಹೇಮಾವತಿ ನೀರನ್ನು ಪೈಪ್ ಲೈನ್ ಮೂಲಕ ಮಾಗಡಿಗೆ ತೆಗೆದುಕೊಂಡು ಹೋಗುತ್ತಿರುವ ಹುನ್ನಾರದ ರೂವಾರಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಎಂದು ಆರ್ಭಟಿಸಿದರು.

ಆಗ ಅಲ್ಲೇ ಇದ್ದ ಡಿ.ಕೆ.ಶಿವಕುಮಾರ್(DK Shivakumar) ಅಭಿಮಾನಿ ಪೆನ್‌ಡ್ರೈವ್‌ಗೂ ಡಿಕೆ ಶಿವಕುಮಾರ್ ಕಾರಣ, ಪೈಪ್ ಲೈನ್‌ಗೂ ಇವರೇ ಕಾರಣನಾ ಎಂದು ವ್ಯಂಗ್ಯವಾಗಿ ಹೇಳಿದಾಗ ಅಕ್ಕಪಕ್ಕದವರು ಗೊಳ್ಳೆಂದು ನಕ್ಕರು.

ಗಾಡಿಗೂ ಎಣ್ಣೆ, ಬಾಡಿಗೂ ಎಣ್ಣೆ!

ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿದ್ದಂತೆ ಕಾರವಾರದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ! ಅದೇ ವೇಳೆ ಗೋವಾದ ಪೋಳೆಂನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದೆ.

ಇದಕ್ಕೆ ಕಾರಣ ಕಾರವಾರದಿಂದ ಕೇವಲ 15 ಕಿ.ಮೀ. ದೂರದ ಗೋವಾ ಗಡಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಸುಮಾರು ₹10 ಅಗ್ಗ. ಹಾಗಾಗಿ ಪೆಟ್ರೋಲ್‌ಗಾಗಿಯೇ ಗೋವಾಕ್ಕೆ ಹೋಗುವವರ ಸಂಖ್ಯೆ ವಿಪರೀತ ಹೆಚ್ಚಿದೆ.

ಗೋವಾದಲ್ಲಿ ಮದ್ಯವಂತೂ ಕರ್ನಾಟಕಕ್ಕೆ ಹೋಲಿಸಿದರೆ ಭಾರಿ ಕಡಿಮೆ. ಎಣ್ಣೆ ಕುಡಿಯಲೆಂದೆ ಪ್ರತಿದಿನ ನೂರಾರು ಜನರು ಗೋವಾ ಗಡಿಯಾದ ಪೋಳೆಂಗೆ ಹೋಗುತ್ತಾರೆ. ಈಗ ಪೆಟ್ರೋಲ್ ತುಂಬಿಸಲಿಕ್ಕಾಗಿ ಗೋವಾಕ್ಕೆ ಹೋಗುವವರೂ ಹೆಚ್ಚಾಗಿದ್ದಾರೆ.

ಎಣ್ಣೆ ಹೊಡೆಯುವವರು ಪೆಟ್ರೋಲ್ ತುಂಬಿಸಿಕೊಂಡು ಬರುತ್ತಾರೆ. ಪೆಟ್ರೋಲ್‌ಗೆ ಹೋದವರು ಎಣ್ಣೆ ಹೊಡೆದುಕೊಂಡು ಬರಬಹುದು. ಹೀಗಾಗಿ ಗಾಡಿಗೂ ಎಣ್ಣೆ, ಬಾಡಿಗೂ ಎಣ್ಣೆ ಎಂಬ ಮಾತುಗಳು ಕೇಳಿಬರುತ್ತಿವೆ. ಗೋವಾದ ಎಫೆಕ್ಟ್‌ನಿಂದ ಕಾರವಾರದ ಪೆಟ್ರೋಲ್ ಬಂಕ್ ಒಂದೇ ಅಲ್ಲ, ಮದ್ಯದ ಅಂಗಡಿಗಳಲ್ಲೂ ವ್ಯಾಪಾರ ವಹಿವಾಟು ಕಡಿಮೆಯಾಗಿದೆ.

ಆದರೆ, ಗ್ರಾಹಕರು ಮಾತ್ರ ಭಾರಿ ಖುಷಿಯಾಗಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ (ಗಾಡಿಗೂ ಎಣ್ಣೆ, ಬಾಡಿಗೂ ಎಣ್ಣೆ) ಆಗುತ್ತದೆ ಎಂದು ಸಂತಸಗೊಂಡಿದ್ದಾರೆ.

ಒಂದು ಸ್ಟೇಟಸ್‌ಗೆ ಸರಸ ಬ್ರೇಕ್!

ಬಂಟ್ವಾಳದ ಆ ಯುವಕ ಮತ್ತು ಮೈಸೂರು ಮೂಲದ ಯುವತಿಯ ಸ್ನೇಹ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಅವರಿಬ್ಬರ ನಡುವೆ ಫೋನ್ ಸಂಭಾಷಣೆ ನಡೆಯುತ್ತಲೇ ಇತ್ತು. ಹೀಗೆ ಮಾತನಾಡುತ್ತಾ ಸುಖವಾಗಿ ನಡೆದಿದ್ದ ಅವರ ಸರಸ ಸಂಭಾಷಣೆಗೆ ಸ್ಟೇಟಸ್‌ ಅಡ್ಡಿಯಾದ ಕಥೆಯಿದು.

ಏನಾಯ್ತು ಎಂದರೆ, ಮೊನ್ನೆ ಈ ಯುವಕ ಫೇಸ್‌ಬುಕ್‌ನಲ್ಲಿ ಬಂದಿದ್ದ ಒಂದು ಪೋಸ್ಟನ್ನು ಸ್ಕ್ರೀನ್‌ ಶಾಟ್ ತೆಗೆದು ಸ್ಟೇಟಸ್ ಹಾಕಿದ. ಅದು-‘ಮೊದಲೆಲ್ಲಾ ಹೀರೋ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ತಾ ಇದ್ದರು. ಆದರೆ ಈಗ ಹೀರೋ ಯಾವಾಗ ರಿಲೀಸ್ ಆಗ್ತಾರೆ ಅಂತ ಕಾಯ್ತಾ ಇದ್ದಾರೆ..’ ಅನ್ನೋ ಪೋಸ್ಟ್‌.

ರಾತ್ರಿ 10 ಗಂಟೆಗೆ ಸ್ಟೇಟಸ್ ಹಾಕಿದ್ದ, 10.05ಕ್ಕೆ ಯುವತಿಯಿಂದ ಮೈಸೂರಿನಿಂದ ಕರೆ. ‘ಸ್ಟೇಟಸ್‌ನಲ್ಲಿ ಏನು ಹಾಕಿದ್ರಿ? ಯಾಕೆ ಹಾಕಿದ್ರಿ? ಡಿಲೀಟ್ ಮಾಡ್ರಿ. ನಾನು ಅವ್ರ ಅಭಿಮಾನಿ, ಅವ್ರಿಗೆ ತಾನೇ ನೀವು ಹಾಕಿರೋದು’ ಅಂತ ಸಾಲು ಸಾಲು ಪ್ರಶ್ನೆಗಳ ಜೊತೆಗೆ ಡಿಲೀಟ್ ಮಾಡಿ ಅಂತ ಹಟ ಬೇರೆ.

ಸಿಟಿ ರವಿ ಏನು ಮಾತಾಡ್ತಾರಂತ ಅವರಿಗೇ ಗೊತ್ತಾಗೊಲ್ಲ: ಸಚಿವ ಶಿವರಾಜ್ ತಂಗಡಗಿ

ಆ ಹೊತ್ತಿಗಾಗ್ಲೇ ಹಲವರು ಲೈಕ್ ಮಾಡಿದ್ದರಿಂದ, ‘ಇಲ್ಲ, ಸ್ಟೇಟಸ್ ನಾನು ಡಿಲೀಟ್ ಮಾಡೋದಿಲ್ಲ’ ಅಂತ ಯುವಕ ಜೋರಾಗಿಯೇ ಹೇಳಿಬಿಟ್ಟ. ಸ್ವಲ್ಪ ಹೊತ್ತು ಮಾತಿನ ಚಕಮಕಿಯೂ ಆಯ್ತಂತೆ. ಕೊನೆಗೆ ಫೋನೂ ಕಟ್ ಆಯ್ತಂತೆ...

ಡಿ ಬಾಸ್ ಎಫೆಕ್ಟ್ ನೋಡಿ ಹೇಗೆಲ್ಲ ರಾಜ್ಯವನ್ನು ಕಾಡುತ್ತಿದೆ.

  • ಸೋಮರಡ್ಡಿ ಅಳವಂಡಿ
  • ಉಗಮ ಶ್ರೀನಿವಾಸ್
  • ವಸಂತ್‌ ಕತಗಾಲ
  • ಮೌನೇಶ ವಿಶ್ವಕರ್ಮ
click me!