ಆಂಧ್ರ, ತೆಲಂಗಾಣ ಮಾದರಿಯಲ್ಲಿ ಪೊಲೀಸರ ಸಂಕಷ್ಟ ಭತ್ಯೆ 50% ಏರಿಕೆ: ಸಿಎಂ ಡಿಕೆ ಶಿವಕುಮಾರ್‌

Published : Aug 29, 2026, 06:00 AM IST
Dk Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರ ಮತ್ತು ತೆಲಂಗಾಣ ಮಾದರಿಯಲ್ಲಿ ರಾಜ್ಯ ಪೊಲೀಸರ ಸಂಕಷ್ಟ ಭತ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಸರ್ಕಾರ ಸಮ್ಮತಿಸಿದೆ ಎಂದು ಘೋಷಿಸಿದ್ದಾರೆ. ಜೊತೆಗೆ, ಎನ್‌ಎಸ್‌ಜಿ ವತಿಯಿಂದ ಪೊಲೀಸರಿಗೆ ವಿಶೇಷ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರು ಉತ್ತಮ ಬದುಕು ನಡೆಸಬೇಕು. ಆದ ಕಾರಣ ಅವರ ಸಂಕಷ್ಟ ಭತ್ಯೆ ಪ್ರಮಾಣವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಶೇ.50ರಷ್ಟು ಹೆಚ್ಚಳಕ್ಕೆ ಸರ್ಕಾರದ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ‌ಹೇಳಿದರು. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ (ಎನ್‌ಎಸ್‌ಜಿ ವತಿಯಿಂದ 1 ತಿಂಗಳ ವಿಶೇಷ ತರಬೇತಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮನ್ನು ರಕ್ಷಿಸಲು ನಮ್ಮ ಆರಕ್ಷಕರನ್ನು ಸಜ್ಜುಗೊಳಿಸುವ ರಾಷ್ಟ್ರೀಯ ಭದ್ರತಾ ಪಡೆಗೆ (ಎನ್ಎಸ್‌ಜಿ) ಧನ್ಯವಾದಗಳು. ಸಜ್ಜನರನ್ನು ರಕ್ಷಿಸುವುದು, ದುರ್ಜನರನ್ನು ಶಿಕ್ಷಿಸುವುದೂ ಧರ್ಮ. ನೀವೆಲ್ಲರೂ ಧರ್ಮದ ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದೀರಿ. ಸಮಾಜದಲ್ಲಿ ಅಶಾಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ನೀವು ಶಿಷ್ಟರ ರಕ್ಷಣೆಗೆ ಬರುತ್ತೀರಿ ಎಂದರು.

ರಾಷ್ಟ್ರೀಯ ಭದ್ರತಾ ಪಡೆ ತಮ್ಮ ಶಕ್ತಿಯನ್ನು ನಮ್ಮ ರಾಜ್ಯ ಪೊಲೀಸರಿಗೆ ಧಾರೆ ಎರೆಯುತ್ತಿದೆ. ಎನ್‌ಎಸ್‌ಜಿಯಿಂದ ಪಡೆದ ತರಬೇತಿ ಸಾರ್ಥಕವಾಗಬೇಕು. ಅದನ್ನು ನಾಡಿನ, ಜನರ ರಕ್ಷಣೆಗೆ ಬಳಸಬೇಕು. ಎನ್‌ಎಸ್‌ಜಿ ತರಬೇತಿ ನಮ್ಮ ಪೊಲೀಸರ ಸಾಮರ್ಥ್ಯ ಹೆಚ್ಚಿಸುತ್ತದೆ ಜತೆಗೆ ಕೌಶಲ್ಯವಂತರನ್ನಾಗಿ ಮಾಡುತ್ತದೆ ಎಂದರು.

ದೇಶದ ಹೆಮ್ಮೆ

ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ. ನಮ್ಮ ಪೊಲೀಸರು ದಕ್ಷತೆಗೆ, ಕಾರ್ಯಪರತೆಗೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ನಾವು ಹುಟ್ಟಿದ ಈ ಸಮಾಜಕ್ಕೆ ಋಣ ತೀರಿಸುವುದೇ ನಿಜವಾದ ಸೇವೆ. ಆ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಕಷ್ಟದ ಸಂದರ್ಭದಲ್ಲಿ ನೀವು ನಿಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ ನಾಡು ರಕ್ಷಣೆ ಮಾಡುತ್ತಿದ್ದೀರಿ. ನಮ್ಮ ಆರಕ್ಷಕರು, ಕಾನೂನಿನ ಪಾಲಕರು, ಕಾನೂನಿನ ರಕ್ಷಕರು ಎಂದು ಶ್ಲಾಘಿಸಿದರು.

ನಾನು ಈ ಹಿಂದೆ ಬಂಧಿಖಾನೆ ಸಚಿವನಾಗಿದ್ದಾಗ ಸಾಕಷ್ಟು ಮಾಹಿತಿ ಪಡೆದಿದ್ದೆ. ಹಗಲು, ರಾತ್ರಿ ನೀವು ಶ್ರಮಿಸುತ್ತೀರಿ. ಕೆಲವು ದುರ್ಘಟನೆ ಸಂದರ್ಭದಲ್ಲಿ ನಾವು ರಾಜಕಾರಣಿಗಳು ನಿಮ್ಮನ್ನೇ ದೂಷಿಸಿರುವ ಉದಾಹರಣೆಗಳಿವೆ. ನೀವು ನಿಮ್ಮ ನಿಷ್ಠೆ, ಪ್ರಾಮಾಣಿಕತೆಯಲ್ಲಿ ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡುವುದು ಮುಖ್ಯ ಎಂದು ತಿಳಿಸಿದರು.

ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ

ಗಡಿಯಲ್ಲಿ ಸೈನಿಕ. ಗಡಿ ಒಳಗೆ ಆರಕ್ಷಕ. ನೀವಿದ್ದರೆ ಸಮಾಜ ನೆಮ್ಮದಿ, ಸುಖವಾಗಿರುತ್ತದೆ. ನೀವು ನಿಮ್ಮ ಕರ್ತವ್ಯವನ್ನು ಪ್ರೀತಿಯಿಂದ ಒಪ್ಪಿ ಈ ಇಲಾಖೆ ಸೇರಿದ್ದೀರಿ. ಕೆಲವರು ಪೊಲೀಸ್ ಕೆಲಸವನ್ನು ಹೆಣ ಕಾಯುವ ಕೆಲಸ ಎಂದು ಟೀಕಿಸುತ್ತಾರೆ. ಆದರೆ ನೀವು ದೇಶ ಸೇವೆ ಮಾಡುತ್ತಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಲಿಪ್ಯಾಡ್ ನಿರ್ಮಾಣ

ಬೆಂಗಳೂರು ನಗರದಲ್ಲಿ ಗಗನಚುಂಬಿ ಕಟ್ಟಡ ನಿರ್ಮಾಣ ಹೆಚ್ಚಾಗುತ್ತಿವೆ. ಬೆಂಕಿ ಅನಾಹುತ, ಭಯೋತ್ಪಾದನೆ ದಾಳಿಗಳು ಸಂಭವಿಸಿದರೆ ನಾಗರಿಕರ ರಕ್ಷಣೆ ನಮ್ಮ ಕರ್ತವ್ಯ. ಇಂಥ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಹೆಲಿಪ್ಯಾಡ್‌ಗಳನ್ನು ಬಳಸಿಕೊಳ್ಳುವ ವಿಚಾರವಾಗಿ ನಮ್ಮ ಸರ್ಕಾರ ಮಿಲಿಟರಿ, ವಾಯು ಸೇನಾ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮಾತುಕತೆಯನ್ನು ಗೃಹಚಿವರು ನಡೆಸಲಿದ್ದಾರೆ. ಗಗನ ಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಅಗತ್ಯ ಸ್ಥಳ ಒದಗಿಸಬೇಕು. ಕಾನೂನು ಚೌಕಟ್ಟಿನಲ್ಲಿ ಅನುಮತಿ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ ನಿಂತ್ಕುಂಡ್ರೂ ಮಂಗ್ಳೂರು ರೈಲ್ವೆ ಬದಲಿಸಲ್ಲ: ಸೋಮಣ್ಣ
ಮಂತ್ರಿಯಾದ 25 ದಿನಕ್ಕೆ ನಾಗೇಂದ್ರ ರಾಜೀನಾಮೆ, ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ