
ಬೆಂಗಳೂರು (ಆ.28) ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಡುವಿನ ಯುದ್ಧಕ್ಕೆ ಕಾರಣವಾಗಿದ್ದ ವಾಲ್ಮೀಕಿ ಹಗರಣ ಹಾಗೂ ಸಚಿವ ಬಿ ನಾಗೇಂದ್ರ ರಾಜೀನಾಮೆ ಪ್ರಕರಣದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಮಣಿದಿದೆ. ಪರಿಣಾಮ ಬಿ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದೆ.
ಬಿವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಡಿಕೆ ಶಿವಕುಮಾರ್ ಸರ್ಕಾರದ ವಿರುದ್ದ ಸತತ ಹೋರಾಟದ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ವೇಳೆ ಬಿ ನಾಗೇಂದ್ರ ಸೇರ್ಪಡೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. 187 ಕೋಟಿ ರೂಪಾಯಿ ಮೊತ್ತದ ವಾಲ್ಮೀಕಿ ಹಗರಣ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಮಳುವಾಯಿತು. ಪ್ರತಿಭಟನೆ, ಹೋರಾಟ ತೀವ್ರಗೊಳಿಸಿದ್ದ ಬಿವೈ ವಿಜಯೇಂದ್ರ, ಬಳ್ಳಾರಿ ಪಾದಯಾತ್ರೆ ಘೋಷಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಪರಿಣಾಮ ಬಿ ನಾಗೇಂದ್ರ ರಾಜೀನಾಮೆ ಪಡೆದುಕೊಂಡಿರುವ ಕಾಂಗ್ರೆಸ್, ಪರಿಸ್ಥಿತಿ ನಿಭಾಯಿಸುವ ತಂತ್ರ ಮಾಡಿದೆ. ಆದರೆ ಈ ಹೋರಾಟ ರಾಜೀನಾಮೆಯಿಂದ ಅಂತ್ಯಗೊಳ್ಳುತ್ತಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ಬಿವೈ ವಿಜಯೇಂದ್ರ ನೀಡಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲೂ ನಾಗೇಂದ್ರ ವಜಾಗೆ ಬಿಜೆಪಿ ಒತ್ತಾಯಿಸಿತ್ತು. ಸದನದ ಒಳಗೂ, ಹೊರಗೂ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮ ಸರ್ಕಾರ ಅಧಿವೇಶವನ್ನೇ ಮೊಟಕುಗೊಳಿಸಿತ್ತು. ಇದರ ಬೆನ್ನಲ್ಲೇ ನಾಗೇಂದ್ರ ವಜಾಗೆ ಪಟ್ಟು ಹಿಡಿದು ವಿಜಯೇಂದ್ರ ಪಾದಯಾತ್ರೆ ಘೋಷಿಸಿದ್ದರು. ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಘೋಷಣೆ ಮಾಡಿದ್ದರು. ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಮಣಿದು ನಾಗೇಂದ್ರ ರಾಜೀನಾಮೆ ಪಡೆದುಕೊಂಡಿದೆ.
ವಾಲ್ಮೀಕಿ ಸಮುದಾಯದ ಅಭಿೃದ್ಧಿಗೆ ಮೀಸಲಿಟ್ಟ ಹಣ ಭ್ರಷ್ಟರ ಕೈಸರಿದೆ. ನಾಗೇಂದ್ರ ರಾಜೀನಾಮೆಯಿಂದ ಹೋರಾಟ ಅಂತ್ಯಗೊಳ್ಳುತ್ತಿಲ್ಲ. 187 ಕೋಟಿ ರೂಪಾಯಿ ವಾಪಸ್ ಖಾತೆಗೆ ಬರುವವರೆಗೂ ಹೋರಾಟ ಮುಂದುವರಿಯಲಿದೆ. ಪಾದಯಾತ್ರೆ ನಡೆಯಲಿದೆ ಎಂದು ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗಂಭೀರ ಭ್ರಷ್ಟಾಚಾರ ಆರೋಪ ಹೊತ್ತಿರುವ ನಾಗೇಂದ್ರ ವಿರುದ್ಧ ಹೋರಾಟ ಮುಂದುವರಿಯಲಿದೆ. ಸಂಪುಟಕ್ಕೆ ನಾಗೇಂದ್ರ ಸೇರ್ಪಡೆ ಮಾಡಿದ್ದೇ ತಪ್ಪು. ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಯುತ್ತದೆ. ಈ ಪಾದಯಾತ್ರೆಯಲ್ಲಿ ಕೆಪಿಎಸ್ಸಿ ಹಗರಣ, ಬರದ ವಿಚಾರ, ಗೃಹ ಲಕ್ಷ್ಮಿ ಯೋಜನೆ ಯಲ್ಲಿ 5000 ಕೋಟಿ ಹಗರಣ ಎಲ್ಲದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ