
ಬೆಂಗಳೂರು; ದೇಹದ ಪ್ರತಿಯೊಂದು ನರ-ನರದಲ್ಲೂ ಖಾಕಿ ತೊಡಬೇಕೆಂಬ ಹಂಬಲ, ಹೊಟ್ಟೆ ಬಟ್ಟೆ ಕಟ್ಟಿ ಹಗಲು-ರಾತ್ರಿ ಒಂದಾಗಿಸಿ ಮಾಡಿದ ಸಿದ್ಧತೆ, ವರ್ಷಗಳ ಕಾಲ ಮನೆಯವರಿಂದ ದೂರವಿದ್ದು ಮೈ ಮುರಿದು ಮಾಡಿದ ಅಭ್ಯಾಸ. ಇಷ್ಟೆಲ್ಲಾ ಕಷ್ಟಪಟ್ಟು ಪರೀಕ್ಷಾ ಹಾಲ್‌ಗೆ ಕಾಲಿಟ್ಟ ಆ ಬಡ, ಗ್ರಾಮೀಣ ಯುವಕರ ಮುಖದಲ್ಲಿ ಇದ್ದದ್ದು ಒಂದೇ ಭರವಸೆ'ನನ್ನ ಶ್ರಮಕ್ಕೆ ಇವತ್ತು ಪ್ರತಿಫಲ ಸಿಗುತ್ತದೆ' ಎಂದು. ಆದರೆ, ಆಗಸ್ಟ್ 2ರಂದು ನಡೆದ ಆ ಒಂದು ಪರೀಕ್ಷೆ ಆ ಲಕ್ಷಾಂತರ ಯುವಕರ ಭವಿಷ್ಯವನ್ನೇ ಅಂಧಕಾರಕ್ಕೆ ದೂಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂದು ಅದೇ ಅಭ್ಯರ್ಥಿಗಳು ರಸ್ತೆಯಲ್ಲಿ ನಿಂತು ತಮಗೆ ನ್ಯಾಯ ಸಿಗದೇ ಕಣ್ಣೀರಿಡುತ್ತಿದ್ದಾರೆ. ಅವರ ಭವಿಷ್ಯಕ್ಕೆ ಯಾರು ಹೊಣೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಆಗಸ್ಟ್ 02ರಂದು ನಡೆದ ಪೊಲೀಸ್ ಸಿವಿಲ್ ಪರೀಕ್ಷೆಯು ಅಭ್ಯರ್ಥಿಗಳ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ. ಪರೀಕ್ಷಾ ಕೇಂದ್ರಕ್ಕೆ ಹೋದ ಅಭ್ಯರ್ಥಿಗಳಿಗೆ ಎದುರಾಗಿದ್ದು ಒಂದಾ ಎರಡಾ ಗೊಂದಲಗಳು? ಪರೀಕ್ಷೆಗೆ ನಿಯಮಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಸಿಗಬೇಕಿತ್ತು. ಆದರೆ ಹಲವು ಕೇಂದ್ರಗಳಲ್ಲಿ ಭಾರಿ ವಿಳಂಬವಾಗಿ ಪ್ರಶ್ನೆ ಪತ್ರಿಕೆ ನೀಡಲಾಯಿತು. ಪ್ರಶ್ನೆ ಪತ್ರಿಕೆ ಮತ್ತು ಓಎಮ್‌ಆರ್ ಶೀಟ್‌ನ ಸಿರಿಯಲ್ ನಂಬರ್‌ಗಳೇ ಮ್ಯಾಚ್ ಆಗುತ್ತಿರಲಿಲ್ಲ. ಒಂದಕ್ಕೊಂದು ತಾಳಮೇಳವಿಲ್ಲದ ಕಾಗದಗಳನ್ನು ಹಿಡಿದು ಅಭ್ಯರ್ಥಿಗಳು ದಿಕ್ಕು ತೋಚದೆ ಗಲಿಬಿಲಿಗೊಂಡರು. ವಿಜಯಪುರದ ತಿಕೋಟಾದಲ್ಲಂತೂ ಈ ಸಿರಿಯಲ್ ನಂಬರ್ ಗೊಂದಲ ತಾಳಲಾರದೆ, ಇಡೀ ಪರೀಕ್ಷೆಯನ್ನೇ ಅಭ್ಯರ್ಥಿಗಳು ಕಣ್ಣೀರಧಾರೆಯೊಂದಿಗೆ ಬಹಿಷ್ಕರಿಸುವಂತಾಯಿತು. ವರ್ಷ ಪೂರ್ತಿ ತಪಸ್ಸಿನಂತೆ ಓದಿದ ವಿದ್ಯಾರ್ಥಿಗೆ ಪರೀಕ್ಷಾ ಹಾಲ್‌ನಲ್ಲಿ ಆದ ಈ ಎಡವಟ್ಟುಗಳು ಎಂತಹ ಮಾನಸಿಕ ಆಘಾತ ನೀಡಿರಬೇಡ? ಇದನ್ನು ಆಡಳಿತವೆ ಗಮನಿಸಬೇಕು.
ಪರೀಕ್ಷೆಯಲ್ಲಾದ ಭಾರಿ ಲೋಪದೋಷಗಳ ಕುರಿತು ದೂರುಗಳು ಕೇಳಿಬಂದ ತಕ್ಷಣ, ಇಲಾಖೆಯು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿತ್ತು. ನಮಗೆ ನ್ಯಾಯ ಸಿಗುತ್ತದೆ, ಲೋಪ ಸರಿಹೋಗುತ್ತದೆ ಅಥವಾ ಮರು ಪರೀಕ್ಷೆ ನಡೆಯುತ್ತದೆ ಎಂದು ಅಭ್ಯರ್ಥಿಗಳು ಭರವಸೆಯಲ್ಲಿದ್ದರು. ಆದರೆ, ಈಗ ಇಲಾಖೆ ನೀಡಿದ ಬಿಗ್ ಟ್ವಿಸ್ಟ್ ಎಂದರೆ ತನಿಖಾ ವರದಿಯ ಮಾಹಿತಿಯೂ ಇಲ್ಲ, ಸರ್ಕಾರದಿಂದ ಮರು ಪರೀಕ್ಷೆಯ ಸ್ಪಷ್ಟನೆಯೂ ಇಲ್ಲ. ಆದೇಶ ಬರುವುದಕ್ಕೂ ಮೊದಲೇ ಇಲಾಖೆಯು ಆತುರಾತುರವಾಗಿ ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ. ಅತ್ತ ಮನಸ್ಸಿನಲ್ಲಿ ಮರು ಪರೀಕ್ಷೆ ನಡೆದುಬಿಡುತ್ತದೆಯೋ? ಎಂಬ ಆತಂಕದ ಬೆಂಕಿ ಉರಿಯುತ್ತಿದ್ದರೂ, ಇತ್ತ ದೈಹಿಕ ಪರೀಕ್ಷೆಯಲ್ಲಿ ಅನರ್ಹರಾಗಬಾರದೆಂದು ಕಾಲುಗಳಲ್ಲಿ ಶಕ್ತಿಯಿಲ್ಲದಿದ್ದರೂ ಮೈದಾನದಲ್ಲಿ ರನ್ನಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ ಅಭ್ಯರ್ಥಿಗಳು.
ಅತ್ತ ವಿಜಯಪುರದಲ್ಲಿ ಪರೀಕ್ಷೆ ಬಹಿಷ್ಕರಿಸಿದ ಆ ಬಡ ಯುವಕನ ಕಣ್ಣೀರಿಗೆ ಉತ್ತರಿಸುವವರು ಯಾರು? ಅಷ್ಟಕ್ಕೂ ಅವರ ತಪ್ಪೇನಿತ್ತು? ಇಲಾಖೆ ಹಾಗೂ ಪರೀಕ್ಷಾ ಮಂಡಳಿ ಮಾಡಿದ ಸಾಲು ಸಾಲು ಎಡವಟ್ಟುಗಳಿಗೆ ಇಂದು ಶಿಕ್ಷೆ ಅನುಭವಿಸುತ್ತಿರುವುದು ನಿರ್ದೋಷಿ, ಬಡ ಅಭ್ಯರ್ಥಿಗಳು. ಒಂದೆಡೆ ಮರು ಪರೀಕ್ಷೆಯ ತೂಗುಕತ್ತಿ, ಇನ್ನೊಂದೆಡೆ ಮೈದಾನದಲ್ಲಿ ಕಮರುತ್ತಿರುವ ಕಾಯಂ ನಿರ್ಧಾರದ ಭರವಸೆ. ಅತ್ತ ಮನೆಯಲ್ಲಿ ಮಗ ಖಾಕಿ ತೊಟ್ಟು ಬರುತ್ತಾನೆ ಎಂದು ಹಾದಿ ಕಾಯುತ್ತಿರುವ ಮುಗ್ಧ ಪೋಷಕರು. ಈ ಯುವಕರ ಭವಿಷ್ಯದ ಜೊತೆ ನಡೆಯುತ್ತಿರುವ ಈ ಆಟಕ್ಕೆ ಕೊನೆ ಎಂದು? ಇಲಾಖೆ ತನ್ನ ಮೌನ ಮುರಿದು, ಗೊಂದಲಕ್ಕೆ ಸ್ಪಷ್ಟತೆ ನೀಡಿ, ಸಂಕಷ್ಟದಲ್ಲಿರುವ ಈ ಲಕ್ಷಾಂತರ ಯುವಕರಿಗೆ ತಕ್ಷಣವೇ ನ್ಯಾಯ ಒದಗಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ