
ಬೆಂಗಳೂರು (ಆ.13): ರಾಜ್ಯದಲ್ಲಿರುವ ಪ್ರತಿ ನೈಜೀರಿಯಾ ಪ್ರಜೆ ಮಾದಕ ದ್ರವ್ಯ ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವಿದೇಶಿಯರ ಬಂಧನ ಕೇಂದ್ರದಲ್ಲಿರುವ ನೈಜೀರಿಯಾ ಪ್ರಜೆಗಳನ್ನು ತಕ್ಷಣ ಅವರ ದೇಶಕ್ಕೆ ಗಡಿಪಾರು ಮಾಡಬೇಕೆಂದು ನುಡಿಯಿತು.
ಮಾದಕ ದ್ರವ್ಯ ಮಾರಾಟ ಮಾಡಿದ ಆರೋಪದ ಮೇಲೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿರುವ ನೈಜೀರಿಯಾ ಪ್ರಜೆ ಅಡೆವೋಲ್ ಅಡೆಟುಟು ಆನು ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮೌಖಿಕವಾಗಿ ನುಡಿದಿದೆ.
ಅರ್ಜಿದಾರರ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳನ್ನು ದೃಢೀಕರಿಸುವ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ವೇಳೆ ಸರ್ಕಾರಿ ವಕೀಲರು ಅರ್ಜಿದಾರರು ನೈಜೀರಿಯಾ ಪ್ರಜೆಯಾಗಿದ್ದು, ಆತನ ವಿರುದ್ಧ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪವಿದೆ ಎಂದರು. ಇದಕ್ಕೆ ಅರ್ಜಿದಾರನ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರನ ಪಾತ್ರವನ್ನು ಸಾಬೀತುಪಡಿಸುವ ಯಾವ ದಾಖಲೆ ಇಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಅರ್ಜಿದಾರ ತಪ್ಪು ಮಾಡಿರುವುದು ಸಾಬೀತಾದರೆ ಅರ್ಜಿ ಹಿಂಪಡೆಯಲಾಗುವುದು. ಅರ್ಜಿದಾರ ಸೇರಿದಂತೆ ಬಂಧನಕ್ಕೆ ಒಳಗಾದವರು ವಿದೇಶಿಯರ ಬಂಧನ ಕೇಂದ್ರದಲ್ಲಿರುತ್ತಾರೆ ಎಂದು ಮಾಹಿತಿ ನೀಡಿದರು.
ಅದಕ್ಕೆ ನ್ಯಾಯಪೀಠ, ವಿದೇಶಿಯರ ಬಂಧನ ಕೇಂದ್ರದಲ್ಲಿರುವ ನೈಜೀರಿಯಾ ಪ್ರಜೆಗಳನ್ನು ಈಗ ಅವರ ದೇಶಕ್ಕೆ ಗಡಿಪಾರು ಮಾಡಬೇಕು. ಪ್ರತಿ ನೈಜೀರಿಯಾ ಪ್ರಜೆಯೂ ಮಾದಕ ದ್ರವ್ಯ ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು. ಸರ್ಕಾರದ ಪರ ವಕೀಲರು, ಅರ್ಜಿದಾರರು ಹಾಗೂ ಮತ್ತೊಬ್ಬ ವ್ಯಕ್ತಿ ಮಾದಕ ದ್ರವ್ಯ ಖರೀದಿ ಮಾಡುವ ವಿಚಾರದಲ್ಲಿ ಚರ್ಚಿಸಿರುವ ಬಗ್ಗೆ ವಾಟ್ಸಪ್ ಚಾಟಿಂಗ್‌ನಲ್ಲಿ ಕಂಡುಬಂದಿದೆ. ಅರ್ಜಿದಾರ ಇತರೆ ಆರೋಪಿಗಳಿಗೆ ಮಾದಕ ದ್ರವ್ಯ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಉಭಯ ಕಡೆಯ ವಾದ ಪ್ರತಿವಾದ ಪರಿಗಣಿಸಿದ ಪೀಠ, ಅರ್ಜಿದಾರನ ವಿರುದ್ಧದ ಆರೋಪವನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಲು ಪೊಲೀಸರಿಗೆ ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ