
ಬೆಂಗಳೂರು(ಸೆ.22): ಉತ್ತರ ಕರ್ನಾಟಕದ ಯಾದಗಿರಿ, ಕೊಪ್ಪಳ ಸೇರಿ 7 ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು ಕೆಲ ಗ್ರಾಮಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯೊಂದಿಗೆ ಬಂದ ಸಿಡಿಲಿಗೆ ರೈತರೊಬ್ಬರು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನೊಬ್ಬನನ್ನು ಯುವಕರಿಬ್ಬರು ನೀರಲ್ಲಿ ಧುಮುಕಿ ಈಜಿ ರಕ್ಷಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಿಂದ ವರದಿಯಾಗಿದೆ.
ಇನ್ನುಳಿದಂತೆ ಬಳ್ಳಾರಿ, ವಿಜಯನಗರ, ಬಾಗಲಕೋಟೆ, ವಿಜಯನಗರ ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಗದಗ ಮತ್ತು ಧಾರವಾಡ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಕೊಪ್ಪಳ ತಾಲೂಕಿನ ಮೈನಳ್ಳಿಯ ರೈತ ಯಂಕನಗೌಡ ಕುರುಡಗಿ (48) ಸಿಡಿಲು ಬಡಿದು ಮೃತರಾಗಿದ್ದಾರೆ. ಸೋಮವಾರ ಸಂಜೆ ಹೊಲಕ್ಕೆ ಹೋಗಿದ್ದ ಅವರು ಮಳೆ ಬರುತ್ತಿದ್ದ ವೇಳೆ ಮರದಡಿ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಮೃತರಾಗಿದ್ದಾರೆ.
ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಅಬ್ಬರ: ಇರಲಿ ಎಚ್ಚರ
ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಲವು ಕಡೆಗಳ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೊಲಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಭತ್ತ ಮತ್ತು ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಹುಣಸಗಿ ತಾಲೂಕಿನ ಗೆದ್ದಲಮುರಿ ಗ್ರಾಮದ ಮುಖ್ಯರಸ್ತೆ ಯಲ್ಲಿರುವ ಗೆದ್ದಲಮುರಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಜನರ ಸಂಚಾರ ಬಂದ್ ಆಗಿದೆ.
ಬಾಲಕನ ರಕ್ಷಣೆ:
ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಬಸವರಾಜ ಗೆದ್ದಲಮರಿ ಎಂಬ 5 ವರ್ಷದ ಬಾಲಕ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕಾಲು ಜಾರಿ ಬಿದ್ದಿದ್ದ. ಬಾಲಕ ಹಳ್ಳದ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಗ್ರಾಮದ ಯುವಕರಾದ ಯಮನಪ್ಪ, ಕೆಂಚಪ್ಪ ಹಾಗೂ ಹಣಮಂತ ಎಂಬವರು ಬಾಲಕರನ್ನು ರಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ