SC ST Reservation: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಸೂದೆ ಪಾಸ್‌

By Kannadaprabha NewsFirst Published Dec 27, 2022, 6:18 AM IST
Highlights

ವಿಧಾನಸಭೆಯಲ್ಲಿ ಅಂಗೀಕಾರ, ವಿಧಾನಪರಿಷತ್‌ ಒಪ್ಪಿಗೆ ಬಾಕಿ, ಎಸ್ಸಿ ಮೀಸಲು 15% ರಿಂದ 17%ಕ್ಕೆ, ಎಸ್ಟಿ 3%ರಿಂದ 7%ಕ್ಕೆ ಏರಿಕೆ 

ವಿಧಾನಸಭೆ(ಡಿ.27): ಪರಿಶಿಷ್ಟಜಾತಿ ಮತ್ತು ಪಂಗಡದ ವರ್ಗಕ್ಕೆ (ಎಸ್‌ಸಿ/ಎಸ್‌ಟಿ) ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕಾರ ನೀಡಿದೆ. ಇದರಿಂದ ಎಸ್‌ಸಿಗೆ ಪ್ರಸ್ತುತ ಶೇ.15 ಇದ್ದ ಮೀಸಲು ಶೇ.17ಕ್ಕೆ ಹಾಗೂ ಎಸ್‌ಟಿಗೆ ಶೇ.3 ಇದ್ದ ಮೀಸಲು ಶೇ.7ಕ್ಕೆ ಹೆಚ್ಚಾಗಲು ಮೊದಲ ದಾರಿ ಸುಗಮವಾಗಿದೆ. ಇನ್ನು ವಿಧಾನಪರಿಷತ್ತಿನಲ್ಲೂ ಅಂಗೀಕಾರವಾದ ಬಳಿಕ ಮಸೂದೆಯು ಕೇಂದ್ರ ಹಾಗೂ ಸಂಸತ್ತಿನ ಅಂಗೀಕಾರಕ್ಕೆ ಹೋಗಲಿದೆ.

ಮೀಸಲು ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಕೈಗೊಂಡಿದ್ದ ರಾಜ್ಯ ಸರ್ಕಾರವು ಸದನದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ-2022 ಹೆಸರಿನ ಮಸೂದೆ ಮಂಡಿಸಿತ್ತು. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಧೇಯಕ ಕುರಿತು ವಿವರಣೆ ನೀಡಿದರು. ಬಳಿಕ ಧ್ವನಿಮತದಿಂದ ಅಂಗೀಕರಿಸಲಾಯಿತು.

SC ST Reservation: ಎಸ್ಸಿ, ಎಸ್ಟಿ ಮೀಸಲು ಏರಿಕೆ ಮಸೂದೆ ಮಂಡನೆ

ಖಾಸಗಿಯಲ್ಲೂ ಮೀಸಲು- ಸಿದ್ದು, ಎಚ್ಕೆ ಆಗ್ರಹ:

ಈ ವೇಳೆ ವಿಧೇಯಕ ಸಂಬಂಧ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರಿ ನೌಕರಿಯು ಶೇ.2ರಷ್ಟುಮಾತ್ರ ಇದ್ದು, ಖಾಸಗಿ ಕಂಪನಿಯಲ್ಲಿ ಶೇ. 98 ಉದ್ಯೋಗ ಇದೆ. ಹೀಗಾಗಿ ಖಾಸಗಿ ಸಂಸ್ಥೆಯಲ್ಲಿಯೂ ಮೀಸಲಾತಿ ತರುವ ಕೆಲಸ ಮಾಡಬೇಕು. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸುಮಾರು 60 ಲಕ್ಷ ಹುದ್ದೆಗಳು ಖಾಲಿ ಇವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ್‌, ಜೆಡಿಎಸ್‌ ಸದಸ್ಯ ಶಿವಲಿಂಗೇಗೌಡ ಸಹ ಖಾಸಗಿ ಕಂಪನಿಯಲ್ಲಿ ಮೀಸಲಾತಿ ತರಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ‘ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಆಶ್ವಾಸನೆ ನೀಡಿದರು. ನಂತರ ಸರ್ವಾನುಮತದಿಂದ ವಿಧೇಯಕವನ್ನು ಅಂಗೀಕರಿಸಲಾಯಿತು.

ಸಂಸತ್‌ ಹೆಗಲಿಗೆ:

ಇದೀಗ ಸರ್ಕಾರವು ಮಸೂದೆಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟು ಶೆಡ್ಯೂಲ್‌-9ಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದೆ. ಸಂಸತ್‌ನಲ್ಲಿ ಇದಕ್ಕೆ ಅಂಗೀಕಾರವಾದ ಬಳಿಕ ಅಧಿಕೃತವಾಗಿ ಕಾನೂನಾಗಿ ರಾಜ್ಯದಲ್ಲಿ ಜಾರಿಯಾಗಲಿದೆ ಎಂದರು.

‘ಎಸ್‌ಸಿ ವರ್ಗಕ್ಕೆ ಪ್ರಸ್ತುತ ಶೇ.15 ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಮತ್ತು ಎಸ್‌ಟಿ ವರ್ಗದ ಮೀಸಲಾತಿ ಶೇ.3 ಇದ್ದು, ಅದನ್ನು ಶೇ.7ಕ್ಕೆ ಹೆಚ್ಚಿಸುವ ಕುರಿತು ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸರ್ಕಾರವು ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಸದನದಲ್ಲಿ ವಿಧೇಯಕ ಅಂಗೀಕರಿಸುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳ ಅನುಷ್ಠಾನಕ್ಕೆ ಮುಂದಾಗಿದೆ’ ಎಂದು ತಿಳಿಸಿದರು.

‘ಸಂವಿಧಾನಬದ್ಧವಾಗಿ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಸಾಕಷ್ಟುಪ್ರಾತಿನಿಧ್ಯ ಇಲ್ಲ ಎಂದು ನಾಯಕ ವಿದ್ಯಾರ್ಥಿ ಸಂಘವು ಹೈಕೋರ್ಚ್‌ ಮೊರೆಹೋಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಕಾರಕ್ಕೆ ಈ ಬಗ್ಗೆ ಗಮನಹರಿಸುವಂತೆ ನಿರ್ದೇಶನ ನೀಡಿತ್ತು. ಇದರ ಆಧಾರದ ಮೇಲೆ ಸರ್ಕಾರವು ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗವು ಸಂಪೂರ್ಣವಾಗಿ ಅಧ್ಯಯನ ನಡೆಸಿ ವರದಿಯನ್ನು ನೀಡಿತ್ತು. ಆಯೋಗದ ವರದಿಯಂತೆ ಈಗಲೂ ಮುಖ್ಯವಾಹಿನಿಯಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಹಲವು ಜಾತಿಗಳು ಹೊರಗಿವೆ. ಅವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ತಿಳಿಸಿತ್ತು.

ಅಲ್ಲದೇ, ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಶೈಕ್ಷಣಿಕ ಸಂಸ್ಥೆ ಮತ್ತು ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಸಾಕಷ್ಟುಇಲ್ಲ. ಈ ಹಿಂದುಳಿದಿರುವಿಕೆಯಿಂದ ಹೊರಬರಲು ತೀವ್ರ ಕಷ್ಟಕರವಾಗಿದೆ. ಹೀಗಾಗಿ ಎಸ್‌ಸಿಗೆ ಶೇ.17ರಷ್ಟುಮತ್ತು ಎಸ್‌ಟಿಗೆ ಶೇ.7ರಷ್ಟುಮೀಸಲಾತಿ ನೀಡುವುದು ಸೂಕ್ತ ಎಂದು ವರದಿ ಹೇಳಿತ್ತು. ನ್ಯಾ. ನಾಗಮೋಹನದಾಸ್‌ ಆಯೋಗದ ವರದಿ ಅನುಷ್ಠಾನವನ್ನು ಅವಲೋಕಿಸಲು ಸರ್ಕಾರವು ನ್ಯಾ.ಸುಭಾಷ್‌ ಬಿ ಅಡಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ನೇಮಕ ಮಾಡಿತ್ತು. ಆ ಸಮಿತಿಯು ಸಹ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದರಿಂದ ಸರ್ಕಾರವು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ’ ಎಂದು ಮಾಧುಸ್ವಾಮಿ ವಿವರಿಸಿದರು.

ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ: 25,000 ನೇಮಕಾತಿಗೆ ತಡೆ..!

ಮಂದೇನು?

ಮೀಸಲು ಹೆಚ್ಚಳ ವಿಧೇಯಕ ಇನ್ನು ಪರಿಷತ್ತಿನಲ್ಲಿ ಪಾಸಾಗಬೇಕು. ನಂತರ ಮಸೂದೆಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿಕೊಟ್ಟು ಶೆಡ್ಯೂಲ್‌ 9ಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಂಸತ್‌ನಲ್ಲಿ ಇದು ಅಂಗೀಕಾರವಾದ ಬಳಿಕ ಅಧಿಕೃತವಾಗಿ ಕಾನೂನಾಗಿ ರಾಜ್ಯದಲ್ಲಿ ಜಾರಿಯಾಗಲಿದೆ.

ಚುನಾವಣೆಗಾಗಿ ತಂತ್ರವಾಗದಿರಲಿ

ಪರಿಶಿಷ್ಟರ ಮೀಸಲಾತಿ ಹೆಚ್ಚಳ ಚುನಾವಣೆ ಹಿನ್ನೆಲೆಯಲ್ಲಿ ಕಣ್ಣೊರೆಸುವ ತಂತ್ರವಾಗಬಾರದು. ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಜನರ ಮೂಗಿಗೆ ತಪ್ಪ ಸವರುತ್ತಿರುವ ಅನುಮಾನವಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಚುನಾವಣೆಗಾಗಿ ಹೆಚ್ಚಳ ಮಾಡಿಲ್ಲ

ರಾಜಕೀಯ ಉದ್ದೇಶ, ಚುನಾವಣೆ ದೃಷ್ಟಿಯಿಂದ ಪರಿಶಿಷ್ಟರ ಮೀಸಲು ಹೆಚ್ಚಳಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲೇ ಮಾತು ಕೊಟ್ಟಿದ್ದೆವು. ಅದಕ್ಕೆ ಬದ್ಧರಾಗಿದ್ದೇವೆ ಅಂತ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. 

click me!