
ಮಂಡ್ಯ (ಡಿ.27): ಕೋಲಾರದಿಂದ ಆರಂಭವಾದ ಪಂಚರತ್ನ ರಥಯಾತ್ರೆಗೆ ಮಂಡ್ಯ ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ನಿಂದ ಸುರಿದ ಹೂಮಳೆ ಹಾಗೂ ವಿಭಿನ್ನ ಬಗೆಯ ಹಾರಗಳು ಹೆಚ್ಚು ಸದ್ದು ಮಾಡಿದವು. ರಥಯಾತ್ರೆಗೆ ವಿಶೇಷ ಮೆರುಗನ್ನು ತುಂಬಿದವು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ಇಷ್ಟೊಂದು ಸದ್ದು ಮಾಡಿರಲಿಲ್ಲ. ಆದರೆ, ಮಂಡ್ಯ ಪ್ರವೇಶಿಸುತ್ತಿದ್ದಂತೆ ರಥಯಾತ್ರೆ ಹೊಸ ಸಂಚಲನವನ್ನೇ ಸೃಷ್ಟಿಸಿತು. ಮಳವಳ್ಳಿಗೆ ಆಗಮಿಸಿದ ಪಂಚರತ್ನ ರಥಯಾತ್ರೆಯಲ್ಲಿ ಹೆಲಿಕಾಪ್ಟರ್‌ನಿಂದ ಸುರಿಸಿದ ಪುಷ್ಪವೃಷ್ಟಿಎಲ್ಲರ ಗಮನಸೆಳೆಯಿತು. ಕ್ರೇನ್ ಮೂಲಕ ಹಾಕಿದ ಹಾರಗಳ ಮಾದರಿಗಳು ಎಲ್ಲರನ್ನೂ ಆಕರ್ಷಿಸಿದವು.
ಹೆಲಿಕಾಪ್ಟರ್ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದು, ಪ್ರತಿ ಗಂಟೆಗೆ 50 ಸಾವಿರ ರು.ನಂತೆ ದರ ನಿಗದಿಪಡಿಸಲಾಗಿತ್ತು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ಹೂ ತುಂಬಿಕೊಂಡು ಬರುತ್ತಿದ್ದ ಹೆಲಿಕಾಪ್ಟರ್ ನಿರ್ದಿಷ್ಟಸ್ಥಳದಲ್ಲಿ ಹೂಮಳೆ ಸುರಿಸಿ ಅಲ್ಲಿಂದ ವಾಪಸಾಗುತ್ತಿತ್ತು. ಒಂದು ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಪುಷ್ಪವೃಷ್ಟಿಮಾಡಲಾಗುತ್ತಿತ್ತು. ಅದರಂತೆ ಜಿಲ್ಲೆಯ ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಪಾಂಡವಪುರ ಕ್ಷೇತ್ರಗಳಲ್ಲಿ ಮಾತ್ರ ಹೆಲಿಕಾಪ್ಟರ್‌ನಲ್ಲಿ ಹೂ ಮಳೆ ಸುರಿಸಿತು.
ಬಿಜೆಪಿ ಹಣದ ಹೊಳೆ, ಕೆಲ ತಪ್ಪುಗಳಿಂದ ಸೋಲು: ಎಚ್.ಡಿ.ಕುಮಾರಸ್ವಾಮಿ
ಪಂಚರತ್ನ ರಥಯಾತ್ರೆಯ ಕೊನೆಯ ದಿನವಾದ ಸೋಮವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಯಾವುದೇ ಭಾಗದಲ್ಲೂ ಹೆಲಿಕಾಪ್ಟರ್ ಕೂಡ ಹಾರಾಟ ನಡೆಸಲಿಲ್ಲ. ಪುಷ್ಪವೃಷ್ಟಿಯನ್ನೂ ಸುರಿಸಲಿಲ್ಲ. ಇದಕ್ಕೆ ಕಾರಣವೇನು ಎನ್ನುವುದು ಯಾರಿಗೂ ತಿಳಿಯಲೇ ಇಲ್ಲ. ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಶಾಸಕರು, ಜೆಡಿಎಸ್ ನಾಯಕರು ವಹಿಸಿಕೊಂಡಿದ್ದರು. ಅದರ ಖರ್ಚು-ವೆಚ್ಚವನ್ನು ಅವರೇ ಭರಿಸಬೇಕಿತ್ತು. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡುವ ವ್ಯವಸ್ಥೆಯನ್ನು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಮಾಡಿದ್ದರು ಎಂದು ಹೇಳಲಾಗಿದೆ. ಉಳಿದಂತೆ ಆಯಾ ಕ್ಷೇತ್ರದ ಶಾಸಕರು ವೆಚ್ಚ ಭರಿಸಿದ್ದರೆಂದು ತಿಳಿದುಬಂದಿದೆ.
ಹಾರಗಳ ಆಕರ್ಷಣೆ: ಪಂಚರತ್ನ ರಥಯಾತ್ರೆ ಆರಂಭವಾದ ದಿನದಿಂದ ಇಲ್ಲಿಯವರೆಗೆ 380ಕ್ಕೂ ಬಗೆಬಗೆಯ ವಿಭಿನ್ನ ಹಾರಗಳು ಎಲ್ಲರನ್ನೂ ಆಕರ್ಷಿಸಿದವು. ಕಡಲೇಕಾಯಿ, ಚಕ್ಕೋತ, ಅನಾನಸ್, ಕರ್ಬೂಜಾ, ಮೂಸಂಬಿ, ದ್ರಾಕ್ಷಿ, ಸೇಬು, ಕೊಬ್ಬರಿ, ಗೋಡಂಬಿ, ಕಬ್ಬು, ಮೆಕ್ಕೆಜೋಳ, ಬೆಲ್ಲ, ನುಗ್ಗೆಸೊಪ್ಪು, ಗೆಡ್ಡೆಕೋಸು, ಸೀಮೆ ಬದನೆ, ರುದ್ರಾಕ್ಷಿ, ಭತ್ತ, ರಾಗಿ ತೆನೆ, ಮುತ್ತಿನ ಹಾರ ಸೇರಿದಂತೆ 380ಕ್ಕೂ ಹೆಚ್ಚು ವಿಭಿನ್ನ ಹಾರಗಳನ್ನು ಕ್ರೇನ್ ಮೂಲಕ ಹಾಕಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.
ಗೌಡ್ರ ಕುಟುಂಬದ ವಿರುದ್ಧ ಮಾತನಾಡಿದರೆ ತಕ್ಕಪಾಠ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಿದರೇ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಎಚ್ .ಡಿ. ಕುಮಾರಸ್ವಾಮಿ ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು, ನಮ್ಮ ಜತೆಗಿದ್ದ ಹಿಂದಿನ ಮಹಾನ್ ನಾಯಕರು ಚುನಾವಣೆ ವೇಳೆ ನನ್ನ ವಿರುದ್ಧ ಇಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರ ಕುಟುಂಬ ವಿರುದ್ಧ ಯಾರೇ ಆಗಲಿ ಮಾತನಾಡಿದರೆ ಕ್ಷೇತ್ರದ ಜನರು ಪಾಠ ಕಲಿಸುತ್ತಾರೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಅಧಿಕಾರಕ್ಕೆ ಬರುವ ಭ್ರಮೆಯಿಂದ ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದಕ್ಕೆ ಜನ ಮೋಸಹೋಗಬಾರದು ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಳೆದ ಚುನಾವಣೆ ವೇಳೆ ನಾನು ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಘೋಷಿಸಿರಲಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ