22 ಐಸಿಯು ರೋಗಿಗಳು ಡಿಸ್ಚಾರ್ಜ್ ಆಗಿದ್ದಾರಾ? ಮೃತಪಟ್ಟಿದ್ದಾರಾ?

By Kannadaprabha NewsFirst Published Jul 2, 2020, 7:36 AM IST
Highlights

22 ಐಸಿಯು ರೋಗಿಗಳು ಡಿಸ್ಚಾರ್ಜ್ ಆಗಿದ್ದಾರಾ? ಮೃತಪಟ್ಟಿದ್ದಾರಾ?| ಮಾಹಿತಿಯೇ ಸಿಗುತ್ತಿಲ್ಲ: ಕೋವಿಡ್‌ ವಾರ್‌ ರೂಂ ಮೂಲಗಳು

ಬೆಂಗಳೂರು(ಜು.02): ರಾಜ್ಯದಲ್ಲಿ ಜೂ.15ರವರೆಗೆ ಐಸಿಯುಗೆ ದಾಖಲಾಗಿದ್ದವರ ಪೈಕಿ ಸುಮಾರು 22 ಕೊರೋನಾ ಸೋಂಕಿತರು ಬಿಡುಗಡೆಯಾಗಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಎಂಬ ಮಾಹಿತಿಯೇ ಲಭ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ರಾಜ್ಯಕ್ಕೆ ಕೊರೋನಾ ಪ್ರವೇಶಿಸಿದ ಮಾರ್ಚ್ 8ರಿಂದ ಜೂ.15ರವರೆಗೆ ದೃಢಪಟ್ಟ ಸೋಂಕಿತರ ಪೈಕಿ 110 ಜನರನ್ನು ಐಸಿಯುಗೆ ದಾಖಲಿಸಲಾಗಿದೆ. ಇವರಲ್ಲಿ 20 ಮಂದಿ ಸಾವನ್ನಪ್ಪಿದ್ದು, 68 ಜನರು ಬಿಗುಗಡೆಗೊಂಡಿದ್ದಾರೆ. ಉಳಿದ 22 ಜನರು ಏನಾದರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಈ ಪೈಕಿ ಬೆಂಗಳೂರಿನಲ್ಲಿ ಪಿ.349, ಪಿ.5333, ಪಿ.5784, ಪಿ.6023, ಪಿ.6035, ಪಿ.6036, ಪಿ.6128, ಪಿ.6162, ಪಿ.6365, ಕಲಬುರಗಿಯ ಪಿ.5498, ಪಿ.5520, ಪಿ.6181, ಪಿ.6740, ಪಿ.6805, ಬಳ್ಳಾರಿಯ ಪಿ.5955, ಪಿ.6432, ಪಿ.7102, ಉಡುಪಿಯ ಪಿ.5452, ಧಾರವಾಡದ ಪಿ.6252, ದ. ಕನ್ನಡದ ಪಿ.6283, ವಿಜಯಪುರದ ಪಿ.6587 ಮತ್ತು ರಾಮನಗರದ ಪಿ.6855 ಸಂಖ್ಯೆಯ ಮಾಹಿತಿ ಲಭ್ಯವಾಗಿಲ್ಲ ಎನ್ನುತ್ತವೆ ವಾರ್‌ ರೂಂ ಮೂಲಗಳು.

ಆದರೆ, ಇದನ್ನು ವಾರ್‌ ರೂಂನ ಹಿರಿಯ ಅಧಿಕಾರಿಗಳು ಅಲ್ಲಗಳೆಯುತ್ತಿದ್ದಾರೆ. ಇದುವರೆಗೂ ದಾಖಲಾಗಿರುವ ಪ್ರತಿಯೊಬ್ಬ ರೋಗಿಯ ಬಗ್ಗೆಯೂ ದಾಖಲೆ ಇದೆ. ಇದುವರೆಗೂ ಯಾವುದೇ ಸೋಂಕಿತರ ಮಾಹಿತಿ ಲಭ್ಯವಾಗದ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾದವರು, ಐಸಿಯು ವಾರ್ಡ್‌ಗೆ ದಾಖಲಾದವರು ಸೇರಿದಂತೆ ಪ್ರತಿಯೊಬ್ಬ ಸೋಂಕಿತನ ಮಾಹಿತಿಯೂ ನಮ್ಮ ಬಳಿ ಇದೆ ಎನ್ನುತ್ತಾರೆ ಬಿಬಿಎಂಪಿಯ ಕೋವಿಡ್‌ ವಾರ್‌ ರೂಂ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ.

7ರಿಂದ ಸರ್ಕಾರದಿಂದಲೇ ಲಾಕ್‌ಡೌನ್? ಸ್ವಯಂ ಲಾಕ್‌ಡೌನ್‌ ನಿರ್ಧಾರಕ್ಕೆ ತಿಲಾಂಜಲಿ!

ರಾಜ್ಯದಲ್ಲಿ ಯಾವುದೇ ಕೋವಿಡ್‌ ಸೋಂಕಿತ ವ್ಯಕ್ತಿಯ ಮಾಹಿತಿ ಲಭ್ಯವಾಗದೇ ಇರುವಂತಹ ವಿಚಾರ ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಪ್ರತಿಯೊಬ್ಬ ರೋಗಿಯ ಮಾಹಿತಿಯನ್ನೂ ವಾರ್‌ರೂಂನಲ್ಲಿ ದಾಖಲಿಸಲಾಗಿದೆ.

- ಮೌನಿಶ್‌ ಮುದ್ಗಿಲ್‌, ರಾಜ್ಯ ಕೋವಿಡ್‌-19 ವಾರ್‌ ರೂಂ ಉಸ್ತುವಾರಿ

click me!