ದುಡ್ಡಿಲ್ಲದೆ ರಾಜ್ಯದ ವಿವಿಗಳ ಪರದಾಟ, ಒಂಬತ್ತು ಅಷ್ಟೇ ಅಲ್ಲ, ಉಳಿದವಕ್ಕೂ ಆಪತ್ತು! ಉನ್ನತ ಶಿಕ್ಷಣದ ಭವಿಷ್ಯವೇನು?

Published : Mar 10, 2025, 06:17 AM ISTUpdated : Mar 10, 2025, 06:18 AM IST
ದುಡ್ಡಿಲ್ಲದೆ ರಾಜ್ಯದ ವಿವಿಗಳ ಪರದಾಟ, ಒಂಬತ್ತು ಅಷ್ಟೇ ಅಲ್ಲ, ಉಳಿದವಕ್ಕೂ ಆಪತ್ತು!  ಉನ್ನತ ಶಿಕ್ಷಣದ ಭವಿಷ್ಯವೇನು?

ಸಾರಾಂಶ

ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅನುದಾನದ ಕೊರತೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಹಲವು ವಿವಿಗಳು ಸಂಕಷ್ಟದಲ್ಲಿವೆ, ಇದು ಉನ್ನತ ಶಿಕ್ಷಣದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾಗ 1

- ಲಿಂಗರಾಜು ಕೋರಾ

 ಬೆಂಗಳೂರು (ಮಾ.10)  ತಾವಿರುವ ಜಿಲ್ಲೆಯಲ್ಲೇ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಲಭಿಸಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹಿಂದಿನ ಸರ್ಕಾರ ಆರಂಭಿಸಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಬೇಕೆನ್ನುವ ರಾಜ್ಯ ಸರ್ಕಾರದ ನಡೆ ಶೈಕ್ಷಣಿಕ ಹಾಗೂ ರಾಜಕೀಯ ರಂಗದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಅತ್ಯಂತ ಅವೈಜ್ಞಾನಿಕವಾಗಿ, ಅಗತ್ಯ ಅನುದಾನ ಹಾಗೂ ಸೌಲಭ್ಯ ಒದಗಿಸದೆ, ನಾವು ಮಾಡಿದ್ದೆಂಬ ಹೆಸರು ಬರಬೇಕೆನ್ನುವ ಕಾರಣಕ್ಕಷ್ಟೇ ಅತ್ಯಂತ ಬೇಜವಾಬ್ದಾರಿಯಿಂದ ಆರಂಭಿಸಲಾದ ಈ ವಿವಿಗಳು ಉನ್ನತ ಶಿಕ್ಷಣದ ಉದ್ದೇಶ ಸಾಕಾರಗೊಳಿಸುವ ಲಕ್ಷಣವನ್ನೇ ಹೊಂದಿಲ್ಲ. ಇನ್ನೊಂದು ಕಡೆ ಉನ್ನತ ಶಿಕ್ಷಣ ಎಂಬುದು ಮನೆ ಹಿತ್ತಲಲ್ಲಿ ಸಿಗಬೇಕೆಂಬ ವಾದವೇ ಸರಿಯಲ್ಲ ಎಂಬ ನಿಲುವು ಕೂಡ ಜನಸಮುದಾಯಕ್ಕೆ ವಿವಿ ಶಿಕ್ಷಣದ ಸ್ವರೂಪ ಹೇಗಿರಬೇಕೆಂಬ ಮೂಲ ಪ್ರಶ್ನೆ ಹುಟ್ಟುಹಾಕಿದೆ.

ಇದರ ಜತೆಗೆ, ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳ ವಿಭಜನೆಯು ಸಶಕ್ತ ವಿವಿಗಳನ್ನು ದುರ್ಬಲಗೊಳಿಸಿರುವ ಉದಾಹರಣೆಗಳೂ ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ 35 ಸಾರ್ವಜನಿಕ ವಿಶ್ವವಿದ್ಯಾಲಯಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಿದಾಗ ಮುಚ್ಚುವ ಭೀತಿಯಿರುವ 9 ವಿವಿಗಳು ಮಾತ್ರವಲ್ಲ, ಉಳಿದ ವಿಶ್ವವಿದ್ಯಾಲಯಗಳ ಪರಿಸ್ಥಿತಿಯೂ ಆತಂಕ ಹುಟ್ಟಿಸುವಂತಿದೆ.

ಈ ವಿವಿಗಳ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಅವಲೋಕಿಸಿದ ತಜ್ಞರ ಪ್ರಕಾರ, ನಾಲ್ಕೈದು ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿ ಮಾತ್ರ ಉತ್ತಮವಾಗಿದೆ. ಇನ್ನು ಸುಮಾರು 10 ವಿವಿಗಳ ಪರಿಸ್ಥಿತಿ ಸಮಾಧಾನಕರವಿದ್ದರೆ, ಮೂರು ಹಳೆಯ ವಿಶ್ವವಿದ್ಯಾಲಯಗಳ ಹಣಕಾಸು ಸ್ಥಿತಿ ತೀವ್ರ ಹದಗೆಟ್ಟಿದೆ. ಅದು ಯಾವ ಮಟ್ಟಿಗೆ ಎಂದರೆ ಅವುಗಳ ಆದಾಯ ನೌಕರರ ಪಿಂಚಣಿಗೂ ಸಾಲುತ್ತಿಲ್ಲ. ಯಾವುದೇ ಸಂಯೋಜಿತ ಕಾಲೇಜುಗಳು, ಆಂತರಿಕ ಆದಾಯವಿಲ್ಲದ ಆರೇಳು ವಿವಿಗಳು ಸರ್ಕಾರದ ಅನುದಾನವನ್ನೇ ಅವಲಂಬಿಸಿವೆ.

ಇದನ್ನೂ ಓದಿ: ಕೊಡಗು ವಿಶ್ವವಿದ್ಯಾಲಯ ಉಳಿಸಿ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಂಸದ ಯದುವೀರ್, ಅಶ್ವತ್ಥ್ ನಾರಾಯಣ

ತಜ್ಞರ ಪ್ರಕಾರ, ವಿವಿಗಳ ಆರ್ಥಿಕ ಪರಿಸ್ಥಿತಿ ಚಿತ್ರಣ ಹೀಗಿದ್ದರೆ, ಇನ್ನು ಸರ್ಕಾರವೇ ಕಳೆದ ವಿಧಾನಮಂಡಲ ಅಧಿವೇಶನದ ವೇಳೆ ನೀಡಿದ ಅಧಿಕೃತ ಮಾಹಿತಿ ಪ್ರಕಾರ ಈ ವಿವಿಗಳಲ್ಲಿ 20 ವರ್ಷಗಳಿಂದ ಖಾಲಿ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. 4000ಕ್ಕೂ ಹೆಚ್ಚು ಮಂಜೂರಾತಿ ಹುದ್ದೆಗಳಲ್ಲಿ 2230ಕ್ಕೂ ಹೆಚ್ಚು ಹುದ್ದೆಗಳು (ಶೇ.55) ಖಾಲಿ ಇವೆ.

ಆರ್ಥಿಕವಾಗಿ ಸದೃಢ ವಿವಿಗಳಿವು:

ಆರ್ಥಿಕವಾಗಿ ಸದೃಢವಾಗಿರುವ ವಿವಿಗಳ ಸಾಲಿನಲ್ಲಿ ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌), ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು), ಬೆಂಗಳೂರು ವಿವಿ ಮತ್ತು ಬೆಂಗಳೂರು ನಗರ ವಿವಿ (ಬಿಸಿಯು) ಇವೆ.

ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ 1,200ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಆರ್‌ಜಿಯುಎಚ್‌ಎಸ್‌ ವಿವಿ ಸುಮಾರು ಸಾವಿರ ಕೋಟಿ ರು.ನಷ್ಟು ಮೂಲ ನಿಧಿ ಹೊಂದಿರುವ ಶ್ರೀಮಂತ ವಿವಿ. ಎಂಜಿನಿಯರಿಂಗ್‌ ಶಿಕ್ಷಣದ ವಿಟಿಯು ಕೂಡ 200ಕ್ಕೂ ಹೆಚ್ಚು ಸಂಯೋಜಿತ ಹಾಗೂ ಸ್ವಾಯತ್ತ ಕಾಲೇಜುಗಳನ್ನು ಹೊಂದಿದ್ದು, ವಾರ್ಷಿಕ 450 ಕೋಟಿ ರು.ಬಜೆಟ್‌ ಮಂಡಿಸುತ್ತಿದೆ. ಕಳೆದ 25 ವರ್ಷಗಳಿಂದ ಸ್ವಂತ ಆದಾಯದಲ್ಲೇ ಉತ್ತಮ ಶೈಕ್ಷಣಿಕ ಹಾಗೂ ಸಂಶೋಧನಾ ಪ್ರಗತಿ ಸಾಧಿಸುತ್ತಿದೆ. 200ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, 1.5 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿರುವ ಬೆಂಗಳೂರು ವಿವಿ ಕೂಡ ಸುಮಾರು 700 ಕೋಟಿ ರು. ಕಾರ್ಪಸ್‌ ಅನುದಾನ ಹೊಂದಿದ್ದು, ವಾರ್ಷಿಕ ಸುಮಾರು 150 ಕೋಟಿ ರು.ಆಂತರಿಕ ಆದಾಯ ಹೊಂದಿದೆ.

ಬೆಂಗಳೂರು ನಗರ ವಿವಿ ಕೂಡ ಉತ್ತಮ ಸ್ಥಿತಿಯಲ್ಲಿದ್ದು, 135ಕ್ಕೂ ಹೆಚ್ಚು ಸಂಯೋಜಿತ ಕಾಲೇಜು, ಕೆಲ ಘಟಕ ಕಾಲೇಜುಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 120 ಕೋಟಿ ಠೇವಣಿ ಜೊತೆಗೆ ವಾರ್ಷಿಕ 200 ಕೋಟಿ ರು. ನಷ್ಟು ಬಜೆಟ್‌ ಮಂಡಿಸುತ್ತಿದೆ.

ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕೂಡ ಉತ್ತಮ ಸ್ಥಿತಿಯಲ್ಲಿದೆ. 110 ಸಂಯೋಜಿತ ಕಾಲೇಜುಗಳನ್ನು ಹೊಂದಿದೆ ಎಂದು ಆಯಾ ವಿವಿಗಳ ಉನ್ನತ ಅಧಿಕಾರಿಗಳೇ ಹೇಳುವ ಮಾಹಿತಿ.

10 ವಿವಿಗಳದ್ದು ಸಮಾಧಾನಕರ ಸ್ಥಿತಿ:

ಹೊಸ ವಿವಿಯಾದರೂ 100ಕ್ಕೂ ಹೆಚ್ಚು ಕಾಲೇಜಿರುವ ಕಾರಣಕ್ಕೆ ಮುಚ್ಚುವ ಭೀತಿಯಿಂದ ಪಾರಾಗಿರುವ ಬೀದರ್‌ ವಿವಿ ಜೊತೆಗೆ ಕೋಲಾರದ ಬೆಂಗಳೂರು ಉತ್ತರ ವಿವಿ, ಶಿವಮೊಗ್ಗದ ಕುವೆಂಪು ವಿವಿ, ಕಲಬುರಗಿಯ ಗುಲ್ಬರ್ಗಾ ವಿವಿ, ರಾಯಚೂರು ವಿವಿ, ತುಮಕೂರು ವಿವಿ, ದಾವಣಗೆರೆ ವಿವಿ, ಬಳ್ಳಾರಿಯ ವಿಜಯನಗರ ಶ್ರಿ ಕೃಷ್ಣದೇವರಾಯ ವಿವಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿ ಸಮಾಧಾನಕರವಾಗಿದೆ. ಅಂದರೆ, ಇವುಗಳಿಗೆ ಬರುವ ಆದಾಯ ಕ್ಯಾಂಪಸ್‌ ನಿರ್ವಹಣೆ, ಅತಿಥಿ ಉಪನ್ಯಾಸಕರು, ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ, ಶೈಕ್ಷಣಿಕ ಚಟುವಟಿಕೆ, ಘಟಿಕೋತ್ಸವ ಮತ್ತಿತರ ಕಾರ್ಯಕ್ರಮಗಳಿಗೆ ಸರಿಹೋಗುತ್ತದೆ.

ಆದರೆ ಸಂಶೋಧನೆ, ನಾವೀನ್ಯತೆ, ತಂತ್ರಜ್ಞಾನ ಆಧಾರಿತ ಚಟುವಟಿಕೆಗಳು, ಕೌಶಲ್ಯ ತರಬೇತಿ, ಅಭಿವೃದ್ಧಿ ಕಾರ್ಯಗಳಿಗೆ ಖಾಸಗಿ ಅಥವಾ ಸಿಎಸ್‌ಆರ್‌ ಅನುದಾನಕ್ಕಾಗಿ ಹಾತೊರೆಯಬೇಕಾಗಿದೆ. ಕಾರ್ಪಸ್‌ ಫಂಡನ್ನೂ ಕೂಡ ಸಾಕಷ್ಟು ವಿವಿಗಳು ಹೊಂದಿಲ್ಲ. ಹೀಗಾಗಿ ಸರ್ಕಾರದ ಅನುದಾನಕ್ಕಾಗಿ ಗೋಗರೆಯಬೇಕಾಗಿದೆ. ಇವುಗಳಲ್ಲಿ ಹಲವು ವಿವಿಗಳು ಹತ್ತು ಹದಿನೈದು ವರ್ಷಗಳಿಂದೀಚೆಗೆ ಆರಂಭವಾಗಿರುವುದರಿಂದ ಪಿಂಚಣಿ ನೀಡುವ ಹೊರೆಯಿಲ್ಲ ಎನ್ನಲಾಗಿದೆ.

ಹಳೆಯ ವಿವಿಗಳಲ್ಲಿ ಪಿಂಚಣಿಗೂ ದುಡ್ಡಿಲ್ಲ!

ರಾಜ್ಯದ ಎರಡನೇ ಹಳೆಯ ವಿಶ್ವವಿದ್ಯಾಲಯವಾಗಿರುವ ಧಾರವಾಡ ಕರ್ನಾಟಕ ವಿವಿ, ಶತಮಾನಗಳ ಇತಿಹಾಸವಿರುವ ಮೈಸೂರು ವಿವಿ, ಮಂಗಳೂರು ವಿವಿಗಳ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. 1800ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಪಿಂಚಣಿ ನೀಡಲೂ ಹಣವಿಲ್ಲದೆ ಕರ್ನಾಟಕ ವಿವಿ ಸಂಕಷ್ಟಕ್ಕೆ ಸಿಲುಕಿದೆ. ಸತತ ಮೂರನೇ ವರ್ಷ 125 ಕೋಟಿ ರು.ಗಳಿಗೂ ಹೆಚ್ಚಿನ ಪಿಂಚಣಿ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನು, ಕಳೆದ ಮೂರು ವರ್ಷಗಳಿಂದ ಕೊರತೆ ಬಜೆಟ್‌ ಮಂಡಿಸುತ್ತಾ ಬಂದಿರುವ ಮೈಸೂರು ವಿಶ್ವವಿದ್ಯಾಲಯದ 2024-25ನೇ ಸಾಲಿನ ಕೊರತೆ ಮೊತ್ತ 80 ಕೋಟಿ ರು. ದಾಟಿತ್ತು. ಪಿಂಚಣಿ ನೀಡಲೂ ಹಣದ ಕೊರತೆಯುಂಟಾಗಿ ಸರ್ಕಾರದ ಮುಂದೆ ನಿಲ್ಲುವ ಸ್ಥಿತಿ ತಲುಪಿದೆ. ಇದೇ ಪರಿಸ್ಥಿತಿ, ಮಂಗಳೂರು ವಿವಿಯಲ್ಲೂ ಇದೆ. ಅಂತರಿಕ ಆದಾಯ ಕಡಿಮೆಯಾಗಿದ್ದು, ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವಂತಾಗಿದೆ. ಇದನ್ನು ಆಯಾ ವಿವಿಗಳ ಕುಲಪತಿಗಳು, ಕುಲಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

8 ವಿವಿಗಳಿಗೆ ಸರ್ಕಾರದ ಅನುದಾನವೇ ಆಧಾರ!

ಸಂಯೋಜಿತ ಕಾಲೇಜುಗಳೂ ಇಲ್ಲದೆ, ಆಂತರಿಕ ಆದಾಯ ತೀವ್ರ ಕಡಿಮೆ ಇರುವ ಹಂಪಿ ಕನ್ನಡ ವಿವಿ, ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌(ಬೇಸ್‌), ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ವಿವಿ(ಯುವಿಸಿಇ), ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ, ಗದಗದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ, ಹಾವೇರಿಯ ಕರ್ನಾಟಕ ಜಾನಪದ ವಿವಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ವಿವಿ ಕೆಲವೇ ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಸಂಸ್ಕೃತ ವಿಶ್ವವಿದ್ಯಾಲಯಗಳು ಸರ್ಕಾರದ ಅನುದಾನವನ್ನೇ ಅವಲಂಬಿಸಿವೆ.

ಇದನ್ನೂ ಓದಿ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಆಗಿಲ್ಲ: ಡಿ.ಕೆ. ಶಿವಕುಮಾರ್

ಆರ್ಥಿಕ ಸ್ಥಿತಿ ಹದಗೆಡುತ್ತಿದೆ

ಹಳೆಯ ವಿವಿಗಳ ವಿಭಜನೆಯಿಂದ ಸಂಯೋಜಿತ ಕಾಲೇಜುಗಳ ಸಂಖ್ಯೆ, ಆದಾಯ ಮೂಲಗಳು ಕಡಿಮೆಯಾಗಿವೆ. ಹಿಂದೆ ಯುಜಿಸಿಯಿಂದ ಸಂಶೋಧನಾ ಚಟುವಟಿಕೆಗಳಿಗೆ ಬರುತ್ತಿದ್ದ ಅನುದಾನ, ರಾಜ್ಯ ಸರ್ಕಾರ ನೀಡುತ್ತಿದ್ದ ಬ್ಲಾಕ್‌ ಗ್ರ್ಯಾಂಟ್‌ ಯಾವುದೂ ಈಗ ಇಲ್ಲದಾಗಿದೆ. ಅಲ್ಲದೆ, ಮೂಲ ವಿವಿಗಳಲ್ಲಿ ಪಿಂಚಣಿದಾರರು ಹೆಚ್ಚಾಗಿರುವುದರಿಂದ ಬರುವ ಆದಾಯವೆಲ್ಲ ಪಿಂಚಣಿಗೇ ನೀಡಬೇಕಾಗಿದೆ. ಇದರಿಂದ ಅವುಗಳ ಆರ್ಥಿಕ ಸ್ಥಿತಿ ಹದಗೆಡುತ್ತಾ ಸಾಗಿದೆ.

- ಪ್ರೊ.ರಾಜಾಸಾಬ್‌, ವಿಶ್ರಾಂತ ಕುಲಪತಿ

ಮುಚ್ಚುವ ಬದಲು ಅನುದಾನ ಕೊಡಿ

ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ದಾಖಲಾತಿ ಪ್ರಮಾಣ (ಜಿಇಆರ್‌) ಹೆಚ್ಚಾಗಬೇಕಾದರೆ ಜಿಲ್ಲೆಗೊಂದು ವಿವಿ ಸ್ಥಾಪಿಸಬೇಕೆಂದು ದೇಶದ ಹಲವು ಖ್ಯಾತ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಯುಜಿಸಿಯೂ ಇದನ್ನೇ ಹೇಳಿದೆ. ಆದರೆ, ಪಕ್ಷಾತೀತವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಹೊಸ ವಿವಿಗಳನ್ನು ಸ್ಥಾಪಿಸುತ್ತಿವೆಯಾದರೂ ಗುಣಮಟ್ಟದ ಶಿಕ್ಷಣ, ಸಂಶೋಧನಾ ಚಟುವಟಿಕೆಗಳಿಗೆ ಸೂಕ್ತ ಅನುದಾನ ನೀಡಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿಲ್ಲ. ಬಜೆಟ್‌ನಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಮೇಲೆ ಅನುದಾನ ಒದಗಿಸುತ್ತಿಲ್ಲ. ವಿವಿಗಳೂ ಆಂತರಿಕ ಆದಾಯವೃದ್ಧಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಹೊಸ ಕೋರ್ಸುಗಳ ಆರಂಭ, ಕೌಶಲ್ಯತರಬೇತಿಯಂಥ ಕಾರ್ಯಕ್ರಮಗಳನ್ನು ರೂಪಿಸಬೇಕು. ಮುಚ್ಚುವ ಬದಲು ವಿವಿಗಳಿಗೆ ಕೆಲ ವರ್ಷವಾದರೂ ಅನುದಾನ ನೀಡಿ ಬೆಳೆಸಬೇಕು.

- ಪ್ರೊ.ಕೆ.ಆರ್‌.ವೇಣುಗೋಪಾಲ್‌, ವಿಶ್ರಾಂತ ಕುಲಪತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌