
ಬೆಂಗಳೂರು (ಮಾ.18): ಮಂಡ್ಯ, ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿರುವ ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರಗಳ ಮುಂದೆ ಸ್ಟಾಕ್ ಇಲ್ಲ ಎಂಬ ಫಲಕ ಕಂಡು ಬಂದಿವೆ.
ಆಹಾರ ಇಲಾಖೆಯಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಮಾರ್ಚ್‌ನಲ್ಲಿ ಹಂಚಿಕೆಯಾಗಬೇಕಿದ್ದ 4.34 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಈಗಾಗಲೇ ರಾಜ್ಯದ ಎಲ್ಲಾ ಪಡಿತರ ವಿತರಣಾ ಕೇಂದ್ರಗಳಿಗೆ ರವಾನೆ ಮಾಡಲಾಗಿತ್ತು. ಮಾರ್ಚ್ 11ರಿಂದಲೇ ಆಹಾರ ಧಾನ್ಯಗಳ ವಿತರಣೆ ಆರಂಭವೂ ಆಗಿತ್ತು. ಆದರೆ, ಒಂದೆರಡು ದಿನಗಳಲ್ಲೇ ಪಡಿತರ ವಿತರಣಾ ಕೇಂದ್ರಗಳ ಮುಂದೆ ಅಕ್ಕಿ ಇಲ್ಲ ಎನ್ನುವ ಫಲಕ ಕಂಡು ಬಂದಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಬೆಂಗಳೂರು, ದಾವಣಗೆರೆ, ಯಾದಗಿರಿ ಸೇರಿದಂತೆ ಹಲವೆಡೆ ಶೇ.30ಕ್ಕೂ ಹೆಚ್ಚು ಫಲಾನುಭವಿಗಳು ಒಂದು ಕೆಜಿ ಅಕ್ಕಿಯನ್ನೂ ಪಡೆದಿಲ್ಲ ಎಂಬ ಆರೋಪಿಸಲಾಗುತ್ತಿದೆ.
ಇದನ್ನೂ ಓದಿ: Telangana financial Crisis: ಗ್ಯಾರಂಟಿ ಯೋಜನೆ ಹೊಡೆತಕ್ಕೆ ಸಿಲುಕಿದ ತೆಲಂಗಾಣ ಸರ್ಕಾರ, ನೌಕರರ ಸಂಬಳಕ್ಕೂ ದುಡ್ಡಿಲ್ಲ!
ಪಡಿತರ ವಿತರಣೆ ಕೇಂದ್ರದ ಮಾಲೀಕರೊಬ್ಬರು, ಫೆಬ್ರವರಿ ಮಾಹೆಯ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಈ ತಿಂಗಳೇ(ಮಾರ್ಚ್) ಕೊಡಬೇಕೆಂಬ ನಿರ್ದೇಶನದ ಮೇರೆಗೆ ಮೊದಲು ಬಂದಂತಹ ಫಲಾನುಭವಿಗಳಿಗೆ ಮಾರ್ಚ್ ತಿಂಗಳ 10 ಕೆಜಿಯೊಂದಿಗೆ ಫೆಬ್ರವರಿ 5 ಕೆಜಿ ಅಕ್ಕಿ ಸೇರಿಸಿ ಪ್ರತಿ ಫಲಾನುಭವಿಗೆ ಒಟ್ಟು 15 ಕೆಜಿಯಂತೆ ವಿತರಿಸಲಾಗಿದೆ. ಇದರಿಂದ ಪಡಿತರ ವಿತರಣಾ ಕೇಂದ್ರಗಳಲ್ಲಿ ಅವಧಿಗೂ ಮುನ್ನವೇ ಅಕ್ಕಿ ದಾಸ್ತಾನು ಖಾಲಿಯಾಗಿದೆ. ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಫಲಾನುಭವಿಗಳು ಕಾಯಬಾರದು ಎನ್ನುವ ಉದ್ದೇಶದಿಂದ ಅಕ್ಕಿ ಇಲ್ಲ ಎನ್ನುವ ಫಲಕ ಹಾಕಲಾಗಿದೆ. ಅಕ್ಕಿ ಇದ್ದರೆ ಕೊಡಲು ನಮಗೇನು ಸಮಸ್ಯೆಯಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ನನ್ನ ದಾರಿಗೆ ಅಡ್ಡ ಬಂದಿದ್ದರಿಂದ ಶಂಕರ್ ಬಿದರಿಯನ್ನು ತಳ್ಳಿದೆ: ಸಿದ್ದರಾಮಯ್ಯ
ಇನ್ನೆರಡು ದಿನಗಳಲ್ಲಿ ಇತ್ಯರ್ಥ:
ಈಗಾಗಲೇ ರಾಜ್ಯ ಸರ್ಕಾರ ಬೇಡಿಕೆ ಇರುವಷ್ಟು ಅಕ್ಕಿಯನ್ನು ಸರಬರಾಜು ಮಾಡುವಂತೆ ಭಾರತೀಯ ಆಹಾರ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಣವನ್ನು ಕೂಡ ಪಾವತಿ ಮಾಡಿದೆ. ಎರಡ್ಮೂರು ದಿನಗಳಲ್ಲಿ ಅಕ್ಕಿ ಬರಲಿದೆ. ಆ ನಂತರ ಪಡಿತರ ವಿತರಣಾ ಕೇಂದ್ರಗಳಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು ಅಕ್ಕಿ ಕೊರತೆ ಇತ್ಯರ್ಥವಾಗಲಿದೆ. ಪ್ರತಿಯೊಬ್ಬ ಫಲಾನುಭವಿಗೂ ಅಕ್ಕಿ ಸಿಗುವವರೆಗೂ ಅಕ್ಕಿ ಹಂಚಿಕೆ ಮುಂದುವರೆಯಲಿದೆ. ಈ ಬಗ್ಗೆ ಫಲಾನುಭವಿಗಳಲ್ಲಿ ಆತಂಕ ಬೇಡ ಎಂದು ಆಹಾರ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ